ಜುಲೈ 3 ರಿಂದ ವಿಧಾನಮಂಡಲ ಅಧಿವೇಶನ; ಜೂನ್ 26 ರಿಂದ ಹೊಸ ಶಾಸಕರಿಗೆ ವಿಶೇಷ ತರಬೇತಿ: ಸ್ಪೀಕರ್ ಯುಟಿ ಖಾದರ್

ಜುಲೈ 3 ರಿಂದ ಜುಲೈ 14ರವರೆಗೆ 10 ದಿನಗಳವರೆಗೆ ಜಂಟಿ ಅಧಿವೇಶನ ನಡೆಯಲಿದ್ದು, ಇದಕ್ಕೂ ಮುನ್ನ ಹೊಸ ಶಾಸಕರಿಗೆ ವಿಧಾನಸಭೆಯ ನಡಾವಳಿ ಬಗ್ಗೆ ತರಬೇತಿ ಶಿಬಿರ ನಡೆಸಲಾಗುತ್ತದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು. ಟಿ. ಖಾದರ್ ಅವರು ಬುಧವಾರ ಹೇಳಿದರು.
ಯುಟಿ ಖಾದರ್.
ಯುಟಿ ಖಾದರ್.
Updated on

ಬೆಂಗಳೂರು: ಜುಲೈ 3 ರಿಂದ ಜುಲೈ 14ರವರೆಗೆ 10 ದಿನಗಳವರೆಗೆ ಜಂಟಿ ಅಧಿವೇಶನ ನಡೆಯಲಿದ್ದು, ಇದಕ್ಕೂ ಮುನ್ನ ಹೊಸ ಶಾಸಕರಿಗೆ ವಿಧಾನಸಭೆಯ ನಡಾವಳಿ ಬಗ್ಗೆ ತರಬೇತಿ ಶಿಬಿರ ನಡೆಸಲಾಗುತ್ತದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಬುಧವಾರ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜುಲೈ 3ರಿಂದ ಜುಲೈ 14ರವರೆಗೆ 10 ದಿನಗಳ ಕಾಲ ವಿಧಾನಸಭೆ ಜಂಟಿ ಅಧಿವೇಶನ ನಡೆಯಲಿದೆ. ಮೊದಲ ದಿನ ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜುಲೈ 14ರ ವರೆಗೂ ಅಧಿವೇಶನ ನಡೆಯಲಿದ್ದು, ಏನಾದರೂ ಬದಲಾವಣೆ ಇದ್ದರೆ ಅದನ್ನು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಅಧಿವೇಶನಕ್ಕೂ ಮುನ್ನ ನೂತನ ಶಾಸಕರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಇದರಂತೆ ನೆಲಮಂಗಲ ಬಳಿಯಿರುವ ಧರ್ಮಸ್ಥಳದ ನ್ಯಾಚುರೋಪತಿ ಕೇಂದ್ರದಲ್ಲಿ ಜೂನ್ 26ರಿಂದ ಮೂರು ದಿನಗಳ ಕಾಲ ತರಬೇತಿ ಶಿಬಿರ ಆಯೋಜಿಸಲಾಗಿದೆ. ನೂತನ ಶಾಸಕರು ಜೂನ್ 25ರ ಸಂಜೆಯೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು. ಜೂನ್ 26ರ ಬೆಳಗ್ಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಅಂದು ಬೆಳಗ್ಗೆ 10 ಗಂಟೆಯಿಂದ ತರಬೇತಿ ಆರಂಭವಾಗಲಿದ್ದು, ಹಿರಿಯ ಸದಸ್ಯರು ಸಂಸದೀಯ ನಡವಳಿಕೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಜೂನ್ 26ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಉದ್ಘಾಟನಾ ಸಮಾರಂಭಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಹೆಚ್. ಕೆ. ಪಾಟೀಲ್ ಮತ್ತಿತರರು ಭಾಗವಹಿಸಲಿದ್ದಾರೆ. ತರಬೇತಿ ಸಂದರ್ಭದಲ್ಲಿ ಪ್ರತಿ ದಿನ ಸಂಜೆ ಸಂವಾದ ಕಾರ್ಯಕ್ರಮ ಇರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ, ಹೆಚ್. ಡಿ. ಕುಮಾರಸ್ವಾಮಿ, ಡಿಸಿಎಂ ಡಿ.ಕೆ. ಶಿಮಕುಮಾರ್, ಸಚಿವ ಹೆಚ್.ಕೆ. ಪಾಟೀಲ್ ಪಾಟೀಲ್, ಮಾಜಿ ಸಚಿವ ಟಿ.ಬಿ. ಜಯಚಂದ್ರ ಮತ್ತಿತರರು ಒಂದೊಂದು ದಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಳ್ಳಲಿದ್ದಾರೆ. ಹಿರಿಯ ಸದಸ್ಯರಿಂದ ಕಿರಿಯರಿಗೆ ಅನುಭವ ದೊರೆಯಲಿ ಎಂಬ ಕಾರಣಕ್ಕೆ ಸಂವಾದ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ತರಬೇತಿ ಶಿಬಿರದ ಕೊನೆಯ ದಿನ ಎಲ್ಲಾ ಸಚಿವರಿಗೂ ಆಹ್ವಾನ ನೀಡಲಾಗಿದೆ. ಜಂಟಿ ಅವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣ, ಬಜೆಟ್ ಮಂಡನೆ ಅಂಗೀಕಾರ, ಶಾಸನ ರಚನೆ ಮೊದಲಾದ ವಿಚಾರಗಳ ಬಗ್ಗೆ ಹಿರಿಯ ಸದಸ್ಯರು ಮಾರ್ಗದರ್ಶನ ನೀಡಲಿದ್ದಾರೆ.

ಬಜೆಟ್ ಬಗ್ಗೆ ಮಾಜಿ ಸಭಾಪತಿ ಬಿ.ಎಲ್. ಶಂಕರ್, ಶಾಸನ ರಚನೆ ಬಗ್ಗೆ ಮಾಜಿ ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರ ಹಕ್ಕು ಬಾಧ್ಯತೆಗಳ ಬಗ್ಗೆ ಮಾಜಿ ಸಚಿವ ಟಿ. ಬಿ. ಜಯಚಂದ್ರ ಮಾತನಾಡಲಿದ್ದಾರೆ ಎಂದರು.

ವಿಧಾನ ಮಂಡಲದ ಸಮಿತಿಗಳ ಉದ್ದೇಶ ಮತ್ತು ಅದರಲ್ಲಿ ಪಾಲ್ಗೊಳ್ಳುವಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಲಿದ್ದಾರೆ. ಅಲ್ಲದೆ, ಮಾಜಿ ಸಚಿವ ಸುರೇಶ್‍ಕುಮಾರ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಡಾ. ಗುರುರಾಜ ಕರಜಗಿ ಅವರು ಮಾತನಾಡಲಿದ್ದಾರೆ. ಜೊತೆಗೆ ಪತ್ರಿಕಾರಂಗ-ಶಾಸಕರು ಹೇಗಿರಬೇಕೆಂಬ ವಿಚಾರದ ಬಗ್ಗೆ ಮಾಹಿತಿ ಕೊಡಲಿದ್ದಾರೆ. ಜೂನ್ 28ರಂದು ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಸ್ಪೀಕರ್ ತಿಳಿಸಿದರು.

 ವಿಧಾನಸಭೆ ಸಚಿವಾಲಯದ ನೌಕರರಿಗೆ ಆರೋಗ್ಯ ಭಾಗ್ಯ ಯೋಜನೆ ಜಾರಿ ಮಾಡಿದ್ದು, ಉಚಿತ ಚಿಕಿತ್ಸೆ ಪಡೆಯಲು ಅನುಕೂಲವಾಗಿದೆ. ವಿಧಾನಸಭೆಯನ್ನು ಡಿಜಟಲೀಕರಣ ಮಾಡುವ ಬಗ್ಗೆ ಚಿಂತನೆ ಇದೆ. ದೇಶದಲ್ಲೇ ರಾಜ್ಯ ವಿಧಾನಸಭೆಯನ್ನು ಮಾದರಿ ವಿಧಾನನಸಭೆಯನ್ನಾಗಿ ಮಾಡುವ ಉದ್ದೇಶ ಇದೆ ಎಂದು ಹೇಳಿದರು.

ಹಿಂದಿನ ಸ್ಪೀಕರ್ ವಿ. ಡಿ. ಸಾವರ್ಕರ್ ಫೋಟೋ ಹಾಕಿಸಿದ್ದು, ನೀವು ಅದನ್ನು ತೆಗೆಸುವಿರಾ? ಅಥವಾ ಮುಂದುವರೆಸುವಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸಭಾಧ್ಯಕ್ಷರು, ಫೋಟೋಗಿಂತ ಸದನಕ್ಕೆ ಶಾಸಕರ ಹಾಜರಾತಿ ಮುಖ್ಯ ಮತ್ತು ಸದನ ಸುಗಮವಾಗಿ ನಡೆಸುವ ಬಗ್ಗೆ ಗಮನ ಕೊಡುತ್ತೇನೆ. ನಂತರ ಫೋಟೋಗಳ ಬಗ್ಗೆ ನೋಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನಸಭೆ ಕಾರ್ಯದರ್ಶಿ ಎಂ. ಕೆ. ವಿಶಾಲಾಕ್ಷಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com