ಕೇಂದ್ರದ ನಿರ್ಬಂಧ ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ಅರ್ಜಿ ವಜಾ; 50 ಲಕ್ಷ ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್
ಕೇಂದ್ರ ಸರ್ಕಾರ ಹೊರಡಿಸಿದ್ದ ಹಲವು ನಿರ್ಬಂಧಗಳು ಮತ್ತು ಟೇಕ್ ಡೌನ್ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿರುವ ಕರ್ನಾಟಕ ಹೈಕೋರ್ಟ್, ಸಂಸ್ಥೆಗೆ 50 ಲಕ್ಷ ರೂ. ದಂಡ ವಿಧಿಸಿದೆ.
Published: 30th June 2023 12:50 PM | Last Updated: 30th June 2023 06:30 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕೇಂದ್ರ ಸರ್ಕಾರ ಹೊರಡಿಸಿದ್ದ ಹಲವು ನಿರ್ಬಂಧಗಳು ಮತ್ತು ಟೇಕ್ ಡೌನ್ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿರುವ ಕರ್ನಾಟಕ ಹೈಕೋರ್ಟ್, ಸಂಸ್ಥೆಗೆ 50 ಲಕ್ಷ ರೂ. ದಂಡ ವಿಧಿಸಿದೆ.
ಟ್ವಿಟರ್‌ನ ಅರ್ಜಿಯು ಯಾವುದೇ ಅರ್ಹತೆ ಹೊಂದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಈ ಸಂಬಂಧ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇಂದು ಬೆಳಗ್ಗೆ ತೀರ್ಪನ್ನು ಪ್ರಕಟಿಸಿತು.
ಟ್ವಿಟರ್ ದಂಡವನ್ನು 45 ದಿನಗಳೊಳಗೆ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು. ಒಂದು ವೇಳೇ, 45 ದಿನಗಳಲ್ಲಿ 50 ಲಕ್ಷ ರೂ. ದಂಡ ಪಾವತಿಸಲು ವಿಫಲವಾದರೆ, ದಿನಕ್ಕೆ 5 ಸಾವಿರದಂತೆ ಹೆಚ್ಚುವರಿ ದಂಡ ಪಾವತಿಸಬೇಕಾಗುತ್ತದೆ ಎಂದು ಪೀಠ ಹೇಳಿದೆ.
The petition filed by Twitter Inc, challenging the blocking orders issued to it by the Ministry of Electronics and Information Technology under Section 69A of the Information Technology Act has been dismissed by the High Court of Karnataka. pic.twitter.com/yULAx2LTzf
— ANI (@ANI) June 30, 2023
'ಖಾತೆಗಳನ್ನು ನಿರ್ಬಂಧಿಸುವ ಕೇಂದ್ರ ಸರ್ಕಾರದ ಬೇಡಿಕೆಗಳನ್ನು ಪಾಲಿಸದಿರಲು ಟ್ವಿಟರ್ ಸೂಕ್ತ ಕಾರಣಗಳನ್ನು ನೀಡಿಲ್ಲ. ಟ್ವಿಟರ್ ಎಂಬುದು ರೈತ ಅಥವಾ ಸಾಮಾನ್ಯ ವ್ಯಕ್ತಿಯಲ್ಲ. ಬದಲಿಗೆ ಅದೊಂದು ಬಿಲಿಯನೇರ್ ಕಂಪನಿಯಾಗಿದೆ. ಟ್ವೀಟ್‌ಗಳನ್ನು ಮತ್ತು ಟ್ವಿಟರ್ ಖಾತೆಗಳನ್ನು ನಿರ್ಬಂಧಿಸುವ ಅಧಿಕಾರ ಕೇಂದ್ರಕ್ಕಿದೆ ಎಂಬ ಕೇಂದ್ರ ಸರ್ಕಾರದ ಪರ ವಕೀಲರ ಸಮರ್ಪಕ ವಾದದಿಂದ ಪೀಠಕ್ಕೆ ಮನವರಿಕೆಯಾಗಿದೆ' ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಟ್ವಿಟರ್ ಮುಚ್ಚಿಸುವ ಬೆದರಿಕೆ ಇತ್ತೆಂಬ ಆರೋಪ ಸುಳ್ಳು: ಮಾಜಿ ಸಿಇಒ ವಿರುದ್ಧ ಕೇಂದ್ರ ಸಚಿವ ಗರಂ
ಟ್ವಿಟರ್ ಖಾತೆಗಳನ್ನು ನಿರ್ಬಂಧಿಸುವುದು ಬಳಕೆದಾರರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದಿದ್ದ ಟ್ವಿಟರ್, ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ ನಿರ್ಬಂಧದ ಆದೇಶಗಳ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಐಟಿ ಕಾಯ್ದೆಯಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeiTY) ನಿರ್ಬಂಧಿಸುವ ಆದೇಶವು ಅಧಿಕಾರಗಳ ಮಿತಿಮೀರಿದ ಬಳಕೆ ಮತ್ತು ಅಸಮಾನತೆಯನ್ನು ಪ್ರದರ್ಶಿಸುತ್ತಿದೆ ಎಂದು ಟ್ವಿಟರ್ ತನ್ನ ಅರ್ಜಿಯಲ್ಲಿ ಸಲ್ಲಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ‘ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ-2000ದ ಕಲಂ 69ಎ ಗೆ ವಿರುದ್ಧವಾಗಿರುವ 1,400ಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಬೇಕು’ ಎಂಬ ನೋಟಿಸ್‌ಗಳನ್ನು ಪ್ರಶ್ನಿಸಿ ‘ಟ್ವಿಟರ್’ ಕಂಪನಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿಮಾಡಿತ್ತು.