ಬೆಂಗಳೂರು: ಮಂಗಳಮುಖಿ, ವಿಶೇಷ ಚೇತನರಿಂದ ಮತದಾನ ಜಾಗೃತಿ ರ್‍ಯಾಲಿಗೆ ರಾಜ್ಯಪಾಲರಿಂದ ಚಾಲನೆ

ಮತದಾನ ಪ್ರಮಾಣ ಉತ್ತೇಜಿಸುವ ಹಾಗೂ ಸಮಾಜದ ವಿವಿಧ ವರ್ಗಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಬೆಂಗಳೂರು ನಗರ ಜಿಲ್ಲಾಡಳಿತ ಮತ್ತು ಬಿಬಿಎಂಪಿಯಿಂದ ಆಯೋಜಿಸಲಾಗಿದ್ದ ಮಂಗಳಮುಖಿ, ವಿಶೇಷ ಚೇತನರ ಮತದಾನ ಜಾಗೃತಿ ರ್‍ಯಾಲಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು. 
ಮತದಾನ ಜಾಗೃತಿ ಜಾಥಾಕ್ಕೆ ರಾಜ್ಯಪಾಲರಿಂದ ಚಾಲನೆ
ಮತದಾನ ಜಾಗೃತಿ ಜಾಥಾಕ್ಕೆ ರಾಜ್ಯಪಾಲರಿಂದ ಚಾಲನೆ

ಬೆಂಗಳೂರು: ಮತದಾನ ಪ್ರಮಾಣ ಉತ್ತೇಜಿಸುವ ಹಾಗೂ ಸಮಾಜದ ವಿವಿಧ ವರ್ಗಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಬೆಂಗಳೂರು ನಗರ ಜಿಲ್ಲಾಡಳಿತ ಮತ್ತು ಬಿಬಿಎಂಪಿಯಿಂದ ಆಯೋಜಿಸಲಾಗಿದ್ದ 'ಮಂಗಳಮುಖಿ, ವಿಶೇಷ ಚೇತನರ ಮತದಾನ ಜಾಗೃತಿ ರ್‍ಯಾಲಿ'ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು. 

ನಂತರ ಮಾತನಾಡಿದ ರಾಜ್ಯಪಾಲರು, ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಚುನಾವಣೆ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು, ಮತ ಚಲಾವಣೆ ಹಕ್ಕನ್ನು ಪಡೆದಿರುವ ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.

ನಮ್ಮ ದೇಶ ದೊಡ್ಡ ಪ್ರಜಾಪ್ರಭುತ್ವದ ದೇಶವಾಗಿದೆ. ಸಂವಿಧಾನದ ಪ್ರಕಾರ ಸರ್ಕಾರವನ್ನು ಆಯ್ಕೆ ಮಾಡುವ ಚುನಾವಣೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಮತ ಚಲಾವಣೆಯ ಹಕ್ಕನ್ನು ನೀಡಲಾಗಿದೆ. ನಮ್ಮ ದೇಶದಲ್ಲಿ  ಮತದಾನ ಎಂಬುದು 18 ವರ್ಷ ಮೇಲ್ಪಟ್ಟವರಿಗೆ ಸಂವಿಧಾನಾತ್ಮಕವಾಗಿ ದೊರೆತ ಹಕ್ಕಾಗಿದೆ. ಪ್ರತಿಯೊಬ್ಬ ಅರ್ಹ ಮತದಾರರು ಮತ ಚಲಾವಣೆ ಮಾಡುವ ಮೂಲಕ ತಮ್ಮ ಕರ್ತವ್ಯ ಪಾಲನೆ ಮಾಡಬೇಕು ಎಂದು ತಿಳಿಸಿದರು.

ಭಾರತ ಚುನಾವಣಾ ಆಯೋಗ ದೇಶದ ಯಾವುದೇ ಅರ್ಹ ಮತದಾರ ಮತದಾನದಿಂದ ವಂಚಿತರಾಗದಂತೆ ಜಾಗೃತಿ ಮೂಡಿಸುತ್ತಿದೆ. ದಿವ್ಯಾಂಗರೂ ಸಹ ಮತದಾನ ಮಾಡುವಂತೆ ಉತ್ತೇಜಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮುಂಬರುವ ಚುನಾವಣೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರ ಮತ ಚಲಾವಣೆ ಮಾಡುವ ಕುರಿತು ಆಯೋಜಿಸಲಾಗಿರುವ ಈ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.

ಭಾರತ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತ ಅಜಯ್ ಭಾಡೂ, ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಮತ್ತಿತರರು ಉಪಸ್ಥಿತರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com