ಹೈಕೋರ್ಟ್‌ಗೆ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಅರ್ಜಿ ಸಲ್ಲಿಕೆ, ವಿಚಾರಣೆ ನಾಳೆಗೆ ಮುಂದೂಡಿಕೆ
ಕರ್ನಾಟಕ ಲೋಕಾಯುಕ್ತ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಿಂದ ಮುಕ್ತಿ ಕೋರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೋಮವಾರ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
Published: 06th March 2023 01:56 PM | Last Updated: 06th March 2023 07:49 PM | A+A A-

ಕರ್ನಾಟಕ ಹೈಕೋರ್ಟ್
ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಿಂದ ಮುಕ್ತಿ ಕೋರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೋಮವಾರ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ತುರ್ತು ಪರಿಸ್ಥಿತಿಯ ಆಧಾರದ ಮೇಲೆ ಪ್ರಕರಣದ ವಿಚಾರಣೆ ನಡೆಸುವಂತೆ ಶಾಸಕರ ಪರ ವಕೀಲ ಸಂದೀಪ್ ಮನವಿ ಮಾಡಿದರು. ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೆ. ನಟರಾಜನ್ ನೇತೃತ್ವದ ಪೀಠ ವಿಚಾರಣೆಯನ್ನು ಮಂಗಳವಾರಕ್ಕೆ (ಮಾರ್ಚ್ 7) ಮುಂದೂಡಿತು.
ಒಂದು ವೇಳೆ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರೆ, ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಅವರ ಬಂಧನ ಖಚಿತವಾಗಲಿದೆ. ಈ ಬೆಳವಣಿಗೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಆಡಳಿತಾರೂಢ ಬಿಜೆಪಿ, ಅವರನ್ನು ಬಂಧಿಸಿದರೆ ಪಕ್ಷಕ್ಕೆ ಆಗುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಿಜೆಪಿ ಶಾಸಕ ಮಾಡಾಲ್ ವಿರೂಪಾಕ್ಷಪ್ಪ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಕೇಸ್ ದಾಖಲು ಸಾಧ್ಯತೆ?
ಲೋಕಾಯುಕ್ತ ಟ್ರ್ಯಾಪ್ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ. ಪ್ರಶಾಂತ್ ಮಾಡಾಳ್ ತನ್ನ ತಂದೆಯ ಪರವಾಗಿ ಪ್ರಸಿದ್ಧ 'ಮೈಸೂರು ಸ್ಯಾಂಡಲ್ ಸೋಪ್' ತಯಾರಿಸುವ ಸಾರ್ವಜನಿಕ ವಲಯದ ಕಂಪನಿಯಾದ ಕೆಎಸ್‌ಡಿಎಲ್‌ಗೆ ಕಚ್ಚಾ ಸಾಮಗ್ರಿಗಳನ್ನು ಖರೀದಿಸಲು ಟೆಂಡರ್ ಮಂಜೂರು ಮಾಡಲು 40 ಲಕ್ಷ ರೂಪಾಯಿ ನಗದು ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕೆಎಸ್‌ಡಿಎಲ್‌ನ ಅಧ್ಯಕ್ಷರಾಗಿದ್ದ ಶಾಸಕ ವಿರೂಪಾಕ್ಷಪ್ಪ ಅವರು ಘಟನೆಯ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆರೋಪಿ ಬಿಜೆಪಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪ್ರಶಾಂತ್ ಮಾಡಾಳ್ ಅವರ ನಿವಾಸದಲ್ಲಿ ಅಧಿಕಾರಿಗಳು 8.12 ಕೋಟಿ ರೂಪಾಯಿ ಮತ್ತು 1.6 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಈ ವಿಚಾರವಾಗಿ ಕಾಂಗ್ರೆಸ್ ಪಕ್ಷ ಎರಡು ಗಂಟೆಗಳ ಬಂದ್ ಕರೆ ನೀಡಿದ್ದು, ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ: ಬಿಜೆಪಿ ಭ್ರಷ್ಟಾಚಾರ: ಮಾರ್ಚ್ 9 ರಂದು 2 ತಾಸು 'ಕರ್ನಾಟಕ ಬಂದ್'ಗೆ ಕಾಂಗ್ರೆಸ್ ಕರೆ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಟೆಂಡರ್‌ಗಳಲ್ಲಿ ಶೇ 40ರಷ್ಟು ಕಮಿಷನ್ ಮತ್ತು ಆಡಳಿತಾರೂಢ ಬಿಜೆಪಿ ಸರ್ಕಾರ ನಡೆಸುತ್ತಿರುವ ಭ್ರಷ್ಟಾಚಾರದ ಆರೋಪಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಆಡಳಿತಾರೂಢ ಬಿಜೆಪಿ, ಲೋಕಾಯುಕ್ತ ಸಂಸ್ಥೆಯು ನಮ್ಮ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಹಗರಣಗಳನ್ನು ಮುಚ್ಚಿ ಹಾಕಲು ಅದನ್ನು ಮುಚ್ಚಿ ಹಾಕಿತ್ತು ಎಂದು ಸಮರ್ಥಿಸಿಕೊಂಡಿದೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಶಾಸಕರೊಬ್ಬರನ್ನು ಭ್ರಷ್ಟಾಚಾರದ ಆರೋಪ ಮತ್ತು ಟೆಂಡರ್ ಹಂಚಿಕೆಗೆ ಲಂಚ ಪಡೆದ ಪ್ರಕರಣದಲ್ಲಿ ಮೇಲೆ ಬಂಧಿಸಿದರೆ, ಅದು ವಿರೋಧ ಪಕ್ಷಗಳ ಕೈಗೆ ಪ್ರಬಲ ಅಸ್ತ್ರವಾಗಲಿದೆ ಎನ್ನಲಾಗಿದೆ.