ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಪತಿಗೆ 3 ಲಕ್ಷ ರೂ. ದಂಡ; ದೂರು ನೀಡಿದ್ದಕ್ಕೆ 6 ಲಕ್ಷಕ್ಕೆ ಏರಿಸಿ, ಬಹಿಷ್ಕಾರದ ಶಿಕ್ಷೆ!

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಟ ಪದ್ಧತಿಗಳು ಮಾತ್ರ ಇನ್ನೂ ದೂರವಾಗಿಲ್ಲ. ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಅದೆಷ್ಟೋ ಕುಟುಂಬಗಳು ಈ ಅನಿಷ್ಠ ಪದ್ಧತಿಗೆ ಸಿಲುಕಿ ಪರಿತಪಿಸುತ್ತಲೇ ಇವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಟ ಪದ್ಧತಿಗಳು ಮಾತ್ರ ಇನ್ನೂ ದೂರವಾಗಿಲ್ಲ. ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಅದೆಷ್ಟೋ ಕುಟುಂಬಗಳು ಈ ಅನಿಷ್ಠ ಪದ್ಧತಿಗೆ ಸಿಲುಕಿ ಪರಿತಪಿಸುತ್ತಲೇ ಇವೆ.

ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಅಂತರ್ಜಾತಿ ವಿವಾಹವಾದ ಜೋಡಿಗೆ ರೂ.3 ಲಕ್ಷ ದಂಡ ವಿಧಿಸಿರುವುದು ಹಾಗೂ ದೂರು ನೀಡಿದ್ದಕ್ಕೆ ದಂಡದ ಮೊತ್ತವನ್ನು ರೂ.6 ಲಕ್ಷಕ್ಕೆ ಏರಿಸಿ, ಗ್ರಾಮದಿಂದ ಬಹಿಷ್ಕರಿಸುವುದು ಕಂಡು ಬಂದಿದೆ.

ಕೊಳ್ಳೇಗಾಲ ಸಮೀಪದ ಕುಣಗಳ್ಳಿ ಗ್ರಾಮದ ಉಪ್ಪಾರ ಸಮುದಾಯದ ನಿವಾಸಿ ಗೋವಿಂದಶೆಟ್ಟಿ 2018ರಲ್ಲಿ ಮಂಡ್ಯ ಜಿಲ್ಲೆಯ ಹೂವಿನಕೊಪ್ಪಲು ಗ್ರಾಮದ ತನ್ನ ಗೆಳತಿ ಶ್ವೇತಾಳೊಂದಿಗೆ ವಿವಾಹವಾಗಿದ್ದರು. ಅಂತರ್ಜಾತಿ ವಿವಾಹದ ವಿಚಾರದ ತಿಳಿದ ಗ್ರಾಮದ ಮುಖಂಡರು ಕುಟುಂಬಕ್ಕೆ ರೂ1.25 ಲಕ್ಷ ದಂಡ ವಿಧಿಸಿ, ಗ್ರಾಮಕ್ಕೆ ಬರದಂತೆ ಬಹಿಷ್ಕಾರ ಹಾಕಿದ್ದಾರೆ.

ನಂತರ ದಂಪತಿ ಊರಿಗೆ ಬಾರದೆ ಮಳವಳ್ಳಿಯಲ್ಲಿಯೇ ಉಳಿದು ಜೀವನ ನಡೆಸುತ್ತಿದ್ದರು. ಆದರೆ, ಗೋವಿಂದಶೆಟ್ಟಿ ಅವರ ತಾಯಿ ಅಸ್ವಸ್ಥಗೊಂಡಿದ್ದರಿಂದ ಕುಣಗಳ್ಳಿ ಬಂದಿದ್ದಾರೆ. ಇದರಿಂದ ಕೆಂಡಾಮಂಡಲಗೊಂಡ ಗ್ರಾಮದ ಮುಖಂಡರು ರೂ.3 ಲಕ್ಷ ದಂಡ ವಿಧಿಸಿ, ಮಾರ್ಚ್ 3ರೊಳಗೆ ಪಾವತಿಸುವಂತೆ ಸೂಚಿಸಿದ್ದಾರೆ.

ಆದರೆ, ಈ ವೇಳೆ ದಂಪತಿ ಡಿವೈಎಸ್ಪಿ ಕಚೇರಿಗೆ ದೂರು ನೀಡಿದ್ದು, ಇದರಿಂದ ಆಕ್ರೋಶಗೊಂಡ ಗ್ರಾಮದ ಮುಖಂಡರು ದಂಡದ ಮೊತ್ತವನ್ನು 6 ಲಕ್ಷ ರೂ.ಗೆ ಹೆಚ್ಚಿಸಿ ಗ್ರಾಮಸ್ಥರೊಂದಿಗೆ ಮಾತನಾಡದಂತೆ ಹಾಗೂ ಗ್ರಾಮದ ಅಂಗಡಿಗಳಲ್ಲಿ ಅಗತ್ಯ ವಸ್ತುಗಳನ್ನು ನೀಡದಂತೆ ಸೂಚಿಸಿದ್ದಾರೆ.

ದೂರು ಹಿನ್ನೆಲೆಯಲ್ಲಿ ಪೊಲೀಸರು ಗ್ರಾಮದ 15 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ 15 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪವನ್ನು ನಿರಾಕರಿಸಿದ್ದಾರೆ. ದಂಡವನ್ನೂ ವಿಧಿಸಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾಮಾಜಿಕ ಬಹಿಷ್ಕಾರವನ್ನು ಗ್ರಾಮದ ಮುಖಂಡರು ಹಿಂತೆಗೆದುಕೊಳ್ಳಲಿಲ್ಲ. ಪೊಲೀಸರು ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com