ಬೆಂಗಳೂರು: ಉದ್ಯಮಿಗೆ ನಕಲಿ ಚಿನ್ನ ನೀಡಿ 13 ಲಕ್ಷ ರು. ವಂಚಿಸಿದ ಆರೋಪಿ ಬಂಧನ

ಗಿರಿನಗರ ಮೂಲದ ಉದ್ಯಮಿಗೆ ವಂಚಿಸಿದ ಆರೋಪದ ಮೇಲೆ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ 39 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗಿರಿನಗರ ಮೂಲದ ಉದ್ಯಮಿಗೆ ವಂಚಿಸಿದ ಆರೋಪದ ಮೇಲೆ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ 39 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ನಕಲಿ ಚಿನ್ನವನ್ನು ಅಸಲಿ ಎಂದು ಬಿಂಬಿಸಿ  13 ಲಕ್ಷ ಪಡೆದು ವಂಚಿಸಿದ್ದ ಆರೋಪಿ ಗುಂಜಿ ಶಿವಶಂಕರ್ ರಾವ್ ಅಲಿಯಾಸ್ ಗೋಲ್ಡ್ ಶಿವ (39) ಎಂಬುವವರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿ ಬಳಿಯ ಎಚ್‌. ಗೊಲ್ಲಹಳ್ಳಿಯಲ್ಲಿ ವಾಸವಿದ್ದ. ಗಿರಿನಗರದ ನ್ಯೂ ಮಂಗಳೂರು ಸ್ಟೋರ್ ಮಳಿಗೆ ಮಾಲೀಕ ನಿಖಿತ್ ನೀಡಿದ್ದ ದೂರು ಆಧರಿಸಿ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಫೆ. 5ರಂದು ಮಳಿಗೆಗೆ ಹೋಗಿದ್ದ ಆರೋಪಿ, ‘ಚಿನ್ನದ ಗಟ್ಟಿ ಮಾರಬೇಕು. ಖರೀದಿ ಬೆಲೆ ತಿಳಿಸಿ’ ಎಂದು ದೂರುದಾರರಿಗೆ ಹೇಳಿದ್ದ. ಗಟ್ಟಿ ಪರೀಕ್ಷಿಸಿದಾಗ ಅಸಲಿ ಚಿನ್ನವೆಂಬುದು ಗೊತ್ತಾಗಿತ್ತು. 13 ಲಕ್ಷ ನೀಡುವುದಾಗಿ ದೂರುದಾರ ಹೇಳಿದ್ದರು. ಗಟ್ಟಿ ವಾಪಸು ಪಡೆದುಕೊಂಡು ಹೋಗಿದ್ದ ಆರೋಪಿ, ಫೆ. 21ರಂದು ಪುನಃ ಮಳಿಗೆಗೆ ಬಂದಿದ್ದ. ಗಟ್ಟಿ ಕೊಟ್ಟು 13 ಲಕ್ಷ ತೆಗೆದುಕೊಂಡು ಹೋಗಿದ್ದ ಎಂದು ತಿಳಿಸಿದರು.

ಆರೋಪಿಯಿಂದ 8 ಲಕ್ಷ ನಗದು, ದ್ವಿಚಕ್ರ ವಾಹನ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಒಂದು ಬಾರಿ ಗಟ್ಟಿ ಪರೀಕ್ಷೆ ನಡೆಸಿದ್ದ ದೂರುದಾರ, ಅಸಲಿ ಚಿನ್ನವಿರಬಹುದೆಂದು ತಿಳಿದು ಪುನಃ ಪರೀಕ್ಷೆ ಮಾಡಿರಲಿಲ್ಲ. ಇತ್ತೀಚೆಗೆ ಗ್ರಾಹಕರೊಬ್ಬರಿಗೆ ಗಟ್ಟಿ ಮಾರುವ ವೇಳೆ, ನಕಲಿ ಚಿನ್ನವೆಂಬುದು ಗೊತ್ತಾಗಿತ್ತು. ಮಾರ್ಚ್ 8ರಂದು ಠಾಣೆಗೆ ದೂರು ನೀಡಿದ್ದರು ಎಂದು ಹೇಳಿದರು.

‘ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಹಾಗೂ ತಾಂತ್ರಿಕ ಪುರಾವೆ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ  8 ಲಕ್ಷ ನಗದು, ದ್ವಿಚಕ್ರ ವಾಹನ, ಸುತ್ತಿಗೆ ಹಾಗೂ ಮಚ್ಚು ಜಪ್ತಿ ಮಾಡಲಾಗಿದೆ. ಆರಂಭದಲ್ಲಿ ಅಸಲಿ ಚಿನ್ನ ತೋರಿಸಿ, ಎರಡನೇ ಬಾರಿ ನಕಲಿ ಚಿನ್ನ ಮಾರಿ ವಂಚಿಸಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ತಿಳಿಸಿದರು.

‘ಮೇಲ್ಭಾಗದಲ್ಲಿ ಅಸಲಿ ಚಿನ್ನ ಹಾಗೂ ಒಳ ಭಾಗದಲ್ಲಿ ನಕಲಿ ಚಿನ್ನವಿಟ್ಟು ಆರೋಪಿಯೇ ಗಟ್ಟಿ ಸಿದ್ಧಪಡಿಸಿದ್ದ. ಅಗ್ಗದ ದರದಲ್ಲಿ ಚಿನ್ನವನ್ನು ಖರೀದಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳನ್ನು ಹುಡುಕುವುದು ಆರೋಪಿಗಳ ಕಾರ್ಯ ವಿಧಾನವಾಗಿತ್ತು. ಆರೋಪಿಗಳು ಬೇರೆಯವರಿಗೆ ವಂಚಿಸಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಗಿರಿನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com