ಪ್ರಾಧ್ಯಾಪಕರಿಂದ ಕಿರುಕುಳ ಆರೋಪ; ಬೆಂಗಳೂರು ವಿವಿ ವಿದ್ಯಾರ್ಥಿಯಿಂದ ದೂರು

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮತ್ತೆ ಕಿರುಕುಳ ಆರೋಪ ಕೇಳಿಬಂದಿದ್ದು, ಮೊದಲ ವರ್ಷದ ಸ್ನಾತಕೋತ್ತರ ರಾಜ್ಯಶಾಸ್ತ್ರ ವಿದ್ಯಾರ್ಥಿಯೊಬ್ಬರು ತಮ್ಮದೇ ಪ್ರಾಧ್ಯಾಪಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮತ್ತೆ ಕಿರುಕುಳ ಆರೋಪ ಕೇಳಿಬಂದಿದ್ದು, ಮೊದಲ ವರ್ಷದ ಸ್ನಾತಕೋತ್ತರ ರಾಜ್ಯಶಾಸ್ತ್ರ ವಿದ್ಯಾರ್ಥಿಯೊಬ್ಬರು ತಮ್ಮದೇ ಪ್ರಾಧ್ಯಾಪಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಹೌದು.. ಪ್ರಾಧ್ಯಾಪಕರು ತಮ್ಮ ಮೀಸಲಾತಿ ಸ್ಥಾನಮಾನ ಮತ್ತು ಅವರ ಸ್ಥಳೀಯ ಸ್ಥಳದ ಹಿಂದುಳಿದಿರುವಿಕೆ ವಿಚಾರವಾಗಿ ಕಿರುಕುಳ ಮತ್ತು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ವಿಶ್ವವಿದ್ಯಾನಿಲಯದ ಮೊದಲ ವರ್ಷದ ಸ್ನಾತಕೋತ್ತರ ರಾಜ್ಯಶಾಸ್ತ್ರ ವಿದ್ಯಾರ್ಥಿಯೊ ದೂರು ನೀಡಿದ್ದಾರೆ.

ರಾಯಚೂರು ಮೂಲದ ಕೃಷ್ಣ (ಹೆಸರು ಬದಲಾಯಿಸಲಾಗಿದೆ) ಎಂಬುವರು ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರ ವಿರುದ್ಧ ದೂರು ದಾಖಲಿಸಿದ್ದು, ಪ್ರಾಧ್ಯಾಪರ ಕಿರುಕುಳದಿಂದಾಗಿ ತನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ತನ್ನ ಮಾರ್ಕ್ಸ್ ಕಾರ್ಡ್‌ (ಅಂಕಪಟ್ಟಿ)ಗಾಗಿ ಅವರನ್ನು ಸಂಪರ್ಕಿಸಿದಾಗ ಪ್ರಾಧ್ಯಾಪಕರು ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾರೆ. ಕಚೇರಿ ಆಡಳಿತ ನಿರ್ವಹಣಾ ಸಮಸ್ಯೆಯಿಂದಾಗಿ ಪ್ರಾಧ್ಯಾಪಕರು ಅಂಕಪಟ್ಟಿ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಇನ್ನು ಮತ್ತೊಂದೆಡೆ ವಿದ್ಯಾರ್ಥಿಯೇ ಆತುರಪಟ್ಟು ತನ್ನ ಅಂಕಪಟ್ಟಿ ನೀಡುವಂತೆ ಪ್ರಾಧ್ಯಾಪಕರ ಮೇಲೆ ಒತ್ತಡ ಹೇರಿದ್ದ ಎನ್ನಲಾಗಿದ್ದು, ಈ ಸಂಬಂಧವೂ ಪ್ರಾಧ್ಯಾಪಕರಿಂದಲೂ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ಪ್ರಾಧ್ಯಾಪಕರು ತಮ್ಮ ದೂರಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳು ರೌಡಿಗಳಂತೆ ವರ್ತಿಸುವ ಪ್ರವೃತ್ತಿ ಹೊಂದಿದ್ದಾರೆ  ಎಂದು ಆರೋಪಿಸಿದ್ದಾರೆ. ಇತ್ತ ವಿದ್ಯಾರ್ಥಿ ವಿವಿಯಲ್ಲಿ ಸೀಟು ಸಿಕ್ಕಿದ್ದು ಮೆರಿಟ್‌ನಿಂದಲ್ಲ, ಮೀಸಲಾತಿಯಿಂದ ಎಂದು ಪ್ರಾಧ್ಯಾಪಕರು ಹೇಳಿಕೆ ನೀಡಿದ್ದಾರೆ ಎಂದು ತನ್ನ ದೂರಿನಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ.

ಆದಾಗ್ಯೂ, ಕೆಲವು ವಿದ್ಯಾರ್ಥಿಗಳು ತಮ್ಮ ನಡುವೆ ಈ ಹಿಂದೆ ಇಂತಹ ಘಟನೆಗಳಿಂದಾಗಿ ಪ್ರಾಧ್ಯಾಪಕರನ್ನು ಗುರಿಯಾಗಿಸಿಕೊಂಡು ದೂರು ದಾಖಲಿಸಿರಬಹುದು ಎಂದು ಹೇಳಿದ್ದಾರೆ. ''ವಿದ್ಯಾರ್ಥಿಗಳೊಂದಿಗೆ ಕಟ್ಟುನಿಟ್ಟಾಗಿ ವರ್ತಿಸುವ ಖ್ಯಾತಿಯನ್ನು ಇಲಾಖೆ ಹೊಂದಿದೆ. ಈ ಹಿಂದೆಯೂ ಇದೇ ರೀತಿಯ ಘಟನೆಗಳು ಪ್ರೊಫೆಸರ್ ವಿರುದ್ಧ ದೂರಿಗೆ ಕಾರಣವಾಗಿದ್ದಿರಬಹುದು. ವಿಶ್ವವಿದ್ಯಾಲಯದ ಅಧಿಕಾರಿಗಳು ದೂರಿನ ಪರಿಶೀಲನೆ ನಡೆಸುತ್ತಿದ್ದಾರೆ. ತಮ್ಮ ವಿರುದ್ಧದ ಆರೋಪಗಳನ್ನು ಪ್ರಾಧ್ಯಾಪಕರು ನಿರಾಕರಿಸಿದ್ದಾರೆ' ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ವಾಂಸರ ಸಂಘದ ಉಪಾಧ್ಯಕ್ಷ ಲೋಕೇಶ್ ರಾಮ್ ಹೇಳಿದ್ದಾರೆ.

ಈ ಘಟನೆ ಗುರುವಾರ ನಡೆದಿದ್ದು, ಇದೇ ವೇಳೆ ಮತ್ತೊಬ್ಬ ವಿದ್ಯಾರ್ಥಿ ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದ ಪ್ರಾಧ್ಯಾಪಕರೊಬ್ಬರ ಮೇಲೆ ಕಿರುಕುಳದ ಆರೋಪ ಮಾಡಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ತಾರತಮ್ಯದ ವಿರುದ್ಧ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಲೋಕೇಶ್ ಮಾತನಾಡಿ, ಉಪಕುಲಪತಿ ಎಸ್ ಎಂ ಜಯಕರ್ ಮತ್ತು ರಿಜಿಸ್ಟ್ರಾರ್ ಮಹೇಶ್ ಬಾಬು ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಇದರ ಬೆನ್ನಲ್ಲೇ ವಿಶ್ವವಿದ್ಯಾನಿಲಯವು ಯಾವುದೇ ತಾರತಮ್ಯವಿಲ್ಲದೆ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣಬೇಕು ಎಂದು ಸುತ್ತೋಲೆ ಹೊರಡಿಸಿದೆ. ಅಂತೆಯೇ ಈ ಸಂಬಂಧ ಆಂತರಿಕ ವಿಚಾರಣೆ ನಡೆಯುತ್ತಿದೆ ಎಂದು ಉಪಕುಲಪತಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com