
ಸಂಗ್ರಹ ಚಿತ್ರ
ಮಡಿಕೇರಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ತನ್ನ ಮಾವನನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಕೊಡಗಿನ ಸೋಮವಾರಪೇಟೆ ತಾಲೂಕಿನ ಕರ್ಕಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆ.ಎ.ಮಂದಣ್ಣ (73) ಹತ್ಯೆಯಾದ ಮಾವನಾಗಿದ್ದಾರೆ. ನೀಲಮ್ಮ ಅಕಾ ಜ್ಯೋತಿ (25) ಹತ್ಯೆ ಮಾಡಿದ ಸೊಸೆ. ನೀಲಮ್ಮ ನಾಲ್ಕು ವರ್ಷಗಳ ಹಿಂದೆ ಮಂದಣ್ಣ ಅವರ ಪುತ್ರ ಕೆ ಎಂ ನಾಣಯ್ಯ ಅವರನ್ನು ವಿವಾಹವಾಗಿದ್ದು, ಮಾವ ಮಂದಣ್ಣ ಜೊತೆಗೆ ಆಗಾಗ ಜಗಳವಾಗುತ್ತಲೇ ಇತ್ತು. ಮೂರು ವರ್ಷಗಳಿಂದಲೂ ಭಿನ್ನಾಭಿಪ್ರಾಯ ಆರಂಭವಾಗಿದ್ದವು. ಸೊಸೆ ಜೊತೆಗಿನ ಮನಸ್ತಾಪದಿಂದಾಗಿ ಒಂದೇ ಮನೆಯಲ್ಲಿಯೇ ಇದ್ದರೂ ಮಂದಣ್ಣ ಅವರು ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳುತ್ತಿದ್ದರು.
ಇದನ್ನೂ ಓದಿ: ಬೆಂಗಳೂರು: ಕಾರ್ಮಿಕರ ಸುಲಿಗೆ, ರೌಡಿ ಶೀಟರ್ ಸೇರಿ 6 ಮಂದಿ ಬಂಧನ
ಮಾರ್ಚ್ 11 ರಂದು ಮಂದಣ್ಣ ಅವರು ಮೂರು ವರ್ಷದ ಮೊಮ್ಮಗನಿಗೆ ಹಣ್ಣು ನೀಡಿದ್ದು, ಇದರಿಂದ ಸಿಟ್ಟಿಗೆದ್ದ ಸೊಸೆ ಜಗಳಕ್ಕಿಳಿದಿದ್ದಾಳೆ. ಮಾರ್ಚ್ 12 ರಂದು ಸೌದೆ ತರಲು ಮಂದಣ್ಣ ಅವರು ಹೋಗುತ್ತಿದ್ದಾಗ ಬಂದೂಕಿನಿಂದ ಗುಂಡು ಹಾರಿಸಿದ್ದಾಳೆ. ಬೆನ್ನಿಗೆ ಗುಂಡು ಬಿದ್ದ ಪರಿಣಾಮ ಮಂದಣ್ಣ ಅವರು ಕೂಡಲೇ ಕೆಳಗೆ ಬಿದ್ದು, ಕೊನೆಯುಸಿರೆಳೆದಿದ್ದಾರೆ.
ಘಟನೆ ಸಂಬಂಧ ಮಂದಣ್ಮ ಅವರ ಪುತ್ರ ನಾಣಯ್ಯ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪತ್ನಿ ನೀಲಮ್ಮ ವಿರುದ್ಧ ದೂರು ದಾಖಲಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ತಹಶೀಲ್ದಾರ್ ರಾಮಚಂದ್ರ ನಾಯಕ್ ಮತ್ತಿತರರು ಭೇಟಿ ನೀಡಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ.
ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಆರೋಪಿ ನೀಲಮ್ಮಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಕೊಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.