ಬೆಂಗಳೂರು: ಅಡ್ಡಾದಿಡ್ಡಿ ಕಾರು ಚಾಲನೆ, ಪಿಯು ವಿದ್ಯಾರ್ಥಿ ಸೇರಿ ಇಬ್ಬರ ದುರ್ಮರಣ

ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಬಂದ ಕಾರು ಚಾಲಕ ರಸ್ತೆ ವಿಭಜಕ ದಾಟಿ ಎದುರಿಗೆ ಬರುತ್ತಿದ್ದ ವಾಹನಕ್ಕೆ ಗುದ್ದಿದ ಪರಿಣಾಮ  ಪಿಯು ವಿದ್ಯಾರ್ಥಿ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ಮಡಿವಾಳ ಸಂಚಾರಿ ಠಾಣೆ ವ್ಯಾಪ್ತಿಯ ಸಿಲ್ಕ್ ಬೋರ್ಡ್ ಬಳಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಬಂದ ಕಾರು ಚಾಲಕ ರಸ್ತೆ ವಿಭಜಕ ದಾಟಿ ಎದುರಿಗೆ ಬರುತ್ತಿದ್ದ ವಾಹನಕ್ಕೆ ಗುದ್ದಿದ ಪರಿಣಾಮ  ಪಿಯು ವಿದ್ಯಾರ್ಥಿ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ಮಡಿವಾಳ ಸಂಚಾರಿ ಠಾಣೆ ವ್ಯಾಪ್ತಿಯ ಸಿಲ್ಕ್ ಬೋರ್ಡ್ ಬಳಿ ನಡೆದಿದೆ.

ಆಂಧ್ರಪ್ರದೇಶದ ಆನಂತಪುರ ಜಿಲ್ಲೆ ಬೊಮ್ಮನಹಳ್ಳ ನಿವಾಸಿ ಕಾರ್ತಿಕ್ (23) ಮತ್ತು ಪ್ರಕಾಶಂ ಜಿಲ್ಲೆಯ ಭಗಿರಥ ರೆಡ್ಡಿ (17) ಮೃತ ಯುವಕರು. ವ್ಯಾಸಂಗ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಕಾರ್ತಿಕ್, ಖಾಸಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದು, ಚಂದ್ರಾಪುರದಲ್ಲಿ ಬಾಡಿಗೆ ರೂಮ್‌ನಲ್ಲಿ ನೆಲೆಸಿದ್ದ. ಇನ್ನು ಭಗಿರಥ ರೆಡ್ಡಿ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಹೊಸೂರು ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದ.

ಸೋಮವಾರ ಬೆಳಗಿನ ಜಾವ 4.40ರಲ್ಲಿ ಹೊಸೂರು ಮುಖ್ಯ ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ ಸಿಲ್ಕ್‌ಬೋರ್ಡ್ ಹತ್ತಿರ ಅತೀ ವೇಗ ಮತ್ತು ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಬಂದಿದ್ದಾರೆ. ಹೊಸೂರು ಕಡೆ ಮಾರ್ಗದಿಂದ ಸೆಂಟರ್ ಮೀಡಿಯನ್ ದಾಟಿ ಬೆಂಗಳೂರು ಕಡೆಯ ಮಾರ್ಗದಲ್ಲಿ ರೂಪೇನಾ ಅಗ್ರಹಾರ ಕಡೆಯಿಂದ ಮಡಿವಾಳ ಕಡೆಗೆ ಚಾಲನೆಯಲ್ಲಿದ್ದ ವಾಹನಕ್ಕೆ ಕಾರು ಗುದ್ದಿದೆ. ಅದೇ ವೇಗದಲ್ಲಿ ಮುಂದಕ್ಕೆ ಚಲಿಸಿ ಕಾರಿನ ಹಿಂಭಾಗದಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದ ತಮಿಳುನಾಡಿನ ಬಸ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ಜಖಂಗೊಂಡಿತ್ತು.

ಕಾರಿನ ಒಳಗಿದ್ದ ಕಾರ್ತಿಕ್ ಮತ್ತು ಭಗಿರಥ ರೆಡ್ಡಿ ಗಂಭೀರ ಗಾಯಗೊಂಡಿದ್ದರು. ಸ್ಥಳೀಯರು ಗಾಯಾಳುಗಳನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟದಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದರು. ಕಾರು ಚಾಲಕ ಕಾರ್ತಿಕ್, ಅತೀವೇಗ ಮತ್ತು ಅಜಾಗರೂಕ ಚಾಲನೆಯೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಮಡಿವಾಳ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com