ಯಶಸ್ಸಿನತ್ತ ‘ನಮ್ಮ ಯಾತ್ರಿ’ ಪಯಣ: 4 ಲಕ್ಷಕ್ಕೂ ಹೆಚ್ಚು ಮಂದಿಯಿಂದ ಆ್ಯಪ್ ಬಳಕೆ!

ಆಟೋ ಚಾಲಕರೇ ಒಗ್ಗೂಡಿ ರಚಿಸಿಕೊಂಡಿರುವ ‘ನಮ್ಮ ಯಾತ್ರಿ’ ಆ್ಯಪ್ ಆಧಾರಿತ ಸೇವೆ ಯಶಸ್ಸಿನ ಹಾದಿ ಹಿಡಿದಿದ್ದು, ಈ ವರೆಗೂ 4 ಲಕ್ಷಕ್ಕೂ ಹೆಚ್ಚು ಮಂದಿ ಸೇವೆ ಬಳಕೆ ಮಾಡುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆಟೋ ಚಾಲಕರೇ ಒಗ್ಗೂಡಿ ರಚಿಸಿಕೊಂಡಿರುವ ‘ನಮ್ಮ ಯಾತ್ರಿ’ ಆ್ಯಪ್ ಆಧಾರಿತ ಸೇವೆ ಯಶಸ್ಸಿನ ಹಾದಿ ಹಿಡಿದಿದ್ದು, ಈ ವರೆಗೂ 4 ಲಕ್ಷಕ್ಕೂ ಹೆಚ್ಚು ಮಂದಿ ಸೇವೆ ಬಳಕೆ ಮಾಡುತ್ತಿದ್ದಾರೆ. 43 ಸಾವಿರಕ್ಕೂ ಹೆಚ್ಚು ಚಾಲಕರು ಈ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದು, ಕಾರ್ಯನಿರ್ವಹಿಸುತ್ತಿದ್ದಾರೆ.

ಓಲಾ, ಉಬರ್, ರ್‍ಯಾಪಿಡೊ ಸೇರಿ ಅಗ್ರಿಗೇಟರ್ ಕಂಪನಿಗಳು ಆಟೊ ಸೇವೆಗೂ ದುಬಾರಿ ದರ ವಿಧಿಸುತ್ತಿದ್ದವು. ಜಿಎಸ್‌ಟಿ ಜತೆಗೆ ಕನ್ವೀನಿಯನ್ಸ್‌ ಶುಲ್ಕಗಳ ಹೆಸರಿನಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದವು. ಇದರಿಂದ ಬೇಸತ್ತಿದ್ದ ಪ್ರಯಾಣಿಕರು ಮತ್ತು ಆಟೊ ಚಾಲಕರು ನಮ್ಮ ಯಾತ್ರಿ ಆ್ಯಪ್ ಕಡೆಗೆ ಮುಖ ಮಾಡಿದ್ದಾರೆ.

ಆಟೋ ಚಾಲಕರ ಒಕ್ಕೂಟವು ಖಾಸಗಿ ಸಂಸ್ಥೆಯಿಂದ ತಾಂತ್ರಿಕ ನೆರವು ಪಡೆದು ನಮ್ಮ ಯಾತ್ರಿ ಆ್ಯಪ್'ನ್ನು ಅಭಿವೃದ್ಧಿಪಡಿಸಿದ್ದು, ಈ ಆ್ಯಪ್ ಸೇವೆ ಓಪನ್ ಮೊಬಿಲಿಟಿ ನೆಟ್‌ವರ್ಕ್‌ ಆಗಿರುವುದರಿಂದ ಎಲ್ಲಾ ಮಾಹಿತಿಯೂ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ. ಈ ಆ್ಯಪ್‌ನಲ್ಲಿ ಆಟೋ ರಿಕ್ಷಾ ಹೊರತಾಗಿ ಬೇರೆ ವಾಹನಗಳ ಸೇವೆ ಇರುವುದಿಲ್ಲ. ಯಾವುದೇ ಮಧ್ಯವರ್ತಿಗಳು ಇಲ್ಲದಿರುವುದರಿಂದ ಗ್ರಾಹಕರು ನೇರವಾಗಿ ಆಟೋ ಚಾಲಕರನ್ನು ಸಂಪರ್ಕಿಸಬಹುದಾಗಿದೆ.

ಆಟೋ ರಿಕ್ಷಾ ಚಾಲಕರ ಒಕ್ಕೂಟದ (ಎಆರ್‌ಡಿಯು) ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಅವರು ಮಾತನಾಡಿ, ‘ನಮ್ಮ ಯಾತ್ರಿಗೆ ಬೆಂಬಲ ನೀಡಲು ನಗರದಾದ್ಯಂತ ಚಾಲಕರು ಒಗ್ಗೂಡಿದ್ದಾರೆ. ನಗುಮುಖದಿಂದ ಜನರ ಸೇವೆ ಮಾಡುವ ಚಾಲಕರಿಗೆ ವಿಮೋಚನೆ ಸಿಕ್ಕ ಅನುಭವವಾಗುತ್ತಿದೆ. ಯಾವುದೇ ಮಧ್ಯವರ್ತಿಗಳಿಲ್ಲದೆ ಪ್ರಯಾಣಿಕರೊಂದಿಗಿನ ನಮ್ಮ ಬಾಂಧವ್ಯವು ಬಲಗೊಂಡಿದೆ ಎಂದು ಹೇಳಿದ್ದಾರೆ.

ನಮ್ಮ ಯಾತ್ರಿ ಚಾಲಕರು ಜನರ ವಿಶ್ವಾಸ ಗಳಿಸುವತ್ತ ಗಮನ ಹರಿಸುತ್ತಾರೆ. “ನಾವು ನಾಗರಿಕರ ಸುರಕ್ಷತೆ, ಉತ್ತಮ ಸೇವೆ ಮತ್ತು ಕೈಗೆಟುಕುವ ಬೆಲೆಗೆ ಬದ್ಧರಾಗಿದ್ದೇವೆ. ಅಸ್ತಿತ್ವದಲ್ಲಿರುವ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ನಾವು ನಾಗರಿಕರೊಂದಿಗೆ ಸಹಕಾರದೊಂದಿಗೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಈಗ ಬೇರೆ ಆ್ಯಪ್‌ಗಳಿಗೆ ಸಡ್ಡು ಹೊಡೆಯಲು ಸಜ್ಜಾಗಿದೆ. ಯಶಸ್ಸಿನ ಹಾದಿಯಲ್ಲಿದ್ದು, ನಾಲ್ಕು ತಿಂಗಳಲ್ಲಿಯೇ ₹6.52 ಕೋಟಿ ವಹಿವಾಟು ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com