ಅನಧಿಕೃತ ಫ್ಲೆಕ್ಸ್ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳದ ಬಿಬಿಎಂಪಿಗೆ ಹೈಕೋರ್ಟ್ ತರಾಟೆ

ನಗರದಲ್ಲಿ ಕಾನೂನುಬಾಹಿರವಾಗಿ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ಅಳವಡಿಸಲು ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದಲ್ಲಿ ಕಾನೂನುಬಾಹಿರವಾಗಿ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ಅಳವಡಿಸಲು ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿತು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆಯನ್ನು ಆಕ್ಷೇಪಿಸಿ ಬೆಂಗಳೂರಿನ ಮಾಯಿಗೇಗೌಡ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆಯ ಸಂದರ್ಭದಲ್ಲಿ ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ಎನ್‌ ಕೆ ರಮೇಶ್‌ ಅವರು 2023ರ ಜನವರಿಯಿಂದ 9,570 ಕಾನೂನುಬಾಹಿರ ಫ್ಲೆಕ್ಸ್‌/ಬ್ಯಾನರ್‌ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

ಈ ಸಂಬಂಧ ಕೇವಲ 53 ಎಫ್‌ಐಆರ್‌ಗಳನ್ನಷ್ಟೇ ದಾಖಲಿಸಲಾಗಿದೆ ಮತ್ತು ಫ್ಲೆಕ್ಸ್‌/ಬ್ಯಾನರ್‌ ಉತ್ಪಾದಕರ ವಿರುದ್ಧ ಕ್ರಮಕ್ಕೆ ಮುಂದಾಗಲಾಗಿದೆ ಎಂದು ತಿಳಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪೀಠವು ಬಿಬಿಎಂಪಿಯ ಅನುಪಾಲನಾ ವರದಿಯನ್ನು ಕಣ್ಣೊರೆಸುವ ತಂತ್ರ ಎಂದು ಚಾಟಿ ಬೀಸಿತು.

“ತಮ್ಮನ್ನು ವೈಭವೀಕರಿಸಿಕೊಂಡು ಫ್ಲೆಕ್ಸ್‌/ಬ್ಯಾನರ್‌ ಹಾಕುವವರ ವಿರುದ್ಧ ನೀವು (ಬಿಬಿಎಂಪಿ) ಕ್ರಮಕೈಗೊಳ್ಳುತ್ತಿಲ್ಲ. ಬದಲಿಗೆ ಅವುಗಳನ್ನು ಉತ್ಪಾದಿಸುವವರ ಮೇಲೆ ಕ್ರಮಕ್ಕೆ ಮುಂದಾಗುತ್ತಿದ್ದೀರಿ. ಇದು ಅತಾರ್ಕಿಕ ಮತ್ತು ಅಸಮರ್ಥನೀಯ. ನಿಮ್ಮ ಅಧಿಕಾರಿಗಳು ಕ್ರಮಕೈಗೊಳ್ಳುವ ವಿಚಾರದಲ್ಲಿ ಗಂಭೀರವಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅನುಪಾಲನಾ ವರದಿಯು ಕಣ್ಣೊರೆಸುವ ತಂತ್ರವಷ್ಟೇ” ಎಂದು ಮೌಖಿಕವಾಗಿ ಆಕ್ರೋಶ ವ್ಯಕ್ತಪಡಿಸಿತು.

“ಚುನಾವಣೆ, ರಾಜಕೀಯ ಸಮಾವೇಶ ಮತ್ತು ಹಬ್ಬದ ಸಂದರ್ಭಗಳಲ್ಲಿ ಕಾನೂನುಬಾಹಿರ ಹೋರ್ಡಿಂಗ್‌ ಹಾಕುವುದು ವ್ಯಾಪಕವಾಗಿದೆ. ಇವುಗಳನ್ನು ನಿರ್ಬಂಧಿಸಲು ಜವಾಬ್ದಾರಿ ಅಧಿಕಾರಿಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ ಎಂದು ಅನುಪಾಲನಾ ವರದಿಯಲ್ಲಿ ವಿವರಿಸಲಾಗಿದೆ. ಕಾನೂನುಬಾಹಿರವಾಗಿ ಹಾಕಲಾಗಿರುವ ಫ್ಲೆಕ್ಸ್‌/ಬ್ಯಾನರ್‌/ಹೋರ್ಡಿಂಗ್‌ಗಳ ಪಟ್ಟಿ, ದಂಡ ವಿಧಿಸಿರುವುದು ಮತ್ತು ಕ್ರಮಕೈಗೊಂಡಿರುವ ಮಾಹಿತಿಯನ್ನು ಅನುಪಾಲನಾ ವರದಿಯಲ್ಲಿ ದಾಖಲಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿಕೊಂಡಿದೆ.

“ಬಿಬಿಎಂಪಿಯ ಪ್ರತಿ ವಲಯದಲ್ಲಿ 488 ರಿಂದ 2,521 ಅಕ್ರಮ ಫ್ಲೆಕ್ಸ್‌/ಬ್ಯಾನರ್‌ಗಳು ಪತ್ತೆಯಾಗಿವೆ. ಆದರೆ, ಹಲವು ಕಡೆ ಒಂದಂಕಿ ಅಥವಾ ಎರಡಂಕಿಯ ಎಫ್‌ಐಆರ್‌ ಮಾತ್ರ ದಾಖಲಾಗಿವೆ. ಒಟ್ಟು 9,570 ಅಕ್ರಮ ಫ್ಲೆಕ್ಸ್‌/ಬ್ಯಾನರ್‌ ಇತ್ಯಾದಿ ಪತ್ತೆಯಾಗಿದ್ದು, 80 ದೂರು ನೀಡಿದ್ದು, 53 ಎಫ್‌ಐಆರ್‌ ದಾಖಲಿಸಲಾಗಿದೆ. ಬೆಂಗಳೂರು ಪಶ್ಚಿಮ ವಲಯದಲ್ಲಿ 2,521 ಫ್ಲೆಕ್ಸ್‌/ಬ್ಯಾನರ್‌ ಪತ್ತೆಯಾಗಿದ್ದು, 5 ದೂರು ಮತ್ತು 6 ಎಫ್‌ಐಆರ್‌ ದಾಖಲಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

“ಫ್ಲೆಕ್ಸ್‌/ಬ್ಯಾನರ್‌ ಮಾಹಿತಿ ನೀಡಲು ಸಾರ್ವಜನಿಕರನ್ನು ಭಾಗಿದಾರರನ್ನಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕ ನೋಟಿಸ್‌, ಅಧಿಕಾರಿಗಳ ಫೋನ್‌ ನಂಬರ್‌ ಸಮೇತ ಮಾಹಿತಿ ನೀಡಿರುವುದು ಸ್ವಾಗತಾರ್ಹ ಕ್ರಮ. ಆದರೆ, ಅಧಿಕಾರಿಗಳು ದೂರು ಮತ್ತು ಎಫ್‌ಐಆರ್‌ ದಾಖಲಿಸಲು ಏತಕ್ಕಾಗಿ ಹಿಂಜರಿಯುತ್ತಿದ್ದಾರೆ” ಎಂದು ಪೀಠ ಪ್ರಶ್ನಿಸಿದೆ. ಅಕ್ರಮ ಬ್ಯಾನರ್‌/ಫ್ಲೆಕ್ಸ್‌ ತೆರವು ಮಾಡಲು ಜನರ ಹಣವನ್ನು ಬಿಬಿಎಂಪಿ ಬಳಕೆ ಮಾಡಬಾರದು ಎಂದೂ ಪೀಠ ಹೇಳಿದೆ. ಅಲ್ಲದೇ, ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಕಂಡು ಬಂದಿರುವ ಅಕ್ರಮ ಫ್ಲೆಕ್ಸ್‌/ಬ್ಯಾನರ್‌ ಮಾಹಿತಿಯನ್ನು ರಾಜ್ಯ ಸರ್ಕಾರವು ನಾಲ್ಕು ವಾರಗಳಲ್ಲಿ ಸಲ್ಲಿಸಬೇಕು ಎಂದು ಆದೇಶ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com