ನಗರದಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್​ಗಳು: ಹೈಕೋರ್ಟ್​ ಆದೇಶಕ್ಕೆ ಕ್ಯಾರೆ ಎನ್ನದ ರಾಜಕಾರಣಿಗಳ ಬೆಂಬಲಿಗರು!

ಫ್ಲೆಕ್ಸ್‌ಗಳು, ಬ್ಯಾನರ್‌ಗಳು ಮತ್ತು ಬಂಟಿಂಗ್ಸ್‌ಗಳ ವಿರುದ್ಧ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದ್ದು, ಈ ಆದೇಶದ ಹೊರತಾಗಿಯೂ ರಾಜಕೀಯ ಮುಖಂಡರ ಬೆಂಬಲಿಗರು ಸಾರ್ವಜನಿಕರಿಗೆ ಕ್ರಿಸ್ಮಸ್, ಹೊಸ ವರ್ಷ ಮತ್ತು ಮುಂಬರುವ ಸಂಕ್ರಾಂತಿಯ ಶುಭಾಶಯಗಳನ್ನು ತಿಳಿಸುವ ಮೂಲಕ ನಗರದಾದ್ಯಂತ ಪೋಸ್ಟರ್‌ಗಳನ್ನು ಹಾಕಿದ್ದಾರೆ.
ದೊಮ್ಮಲೂರಿನ ಡಾ.ರಾಜ್‌ಕುಮಾರ್ ಪಾರ್ಕ್‌ನಲ್ಲಿ ಶಾಂತಿನಗರ ಶಾಸಕ ಎನ್.ಎ.ಹರೀಸ್ ಬೆಂಬಲಿಗರು ಫ್ಲೆಕ್ಸ್ ಹಾಕಿರುವುದು..
ದೊಮ್ಮಲೂರಿನ ಡಾ.ರಾಜ್‌ಕುಮಾರ್ ಪಾರ್ಕ್‌ನಲ್ಲಿ ಶಾಂತಿನಗರ ಶಾಸಕ ಎನ್.ಎ.ಹರೀಸ್ ಬೆಂಬಲಿಗರು ಫ್ಲೆಕ್ಸ್ ಹಾಕಿರುವುದು..

ಬೆಂಗಳೂರು: ಫ್ಲೆಕ್ಸ್‌ಗಳು, ಬ್ಯಾನರ್‌ಗಳು ಮತ್ತು ಬಂಟಿಂಗ್ಸ್‌ಗಳ ವಿರುದ್ಧ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದ್ದು, ಈ ಆದೇಶದ ಹೊರತಾಗಿಯೂ ರಾಜಕೀಯ ಮುಖಂಡರ ಬೆಂಬಲಿಗರು ಸಾರ್ವಜನಿಕರಿಗೆ ಕ್ರಿಸ್ಮಸ್, ಹೊಸ ವರ್ಷ ಮತ್ತು ಮುಂಬರುವ ಸಂಕ್ರಾಂತಿಯ ಶುಭಾಶಯಗಳನ್ನು ತಿಳಿಸುವ ಮೂಲಕ ನಗರದಾದ್ಯಂತ ಪೋಸ್ಟರ್‌ಗಳನ್ನು ಹಾಕಿದ್ದಾರೆ.

ಶಿವಾಜಿನಗರ ಸಮೀಪದ ಬೆನ್ಸನ್ ಟೌನ್ ಸೇತುವೆಯಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಅವರ ದೊಡ್ಡ ಬ್ಯಾನರ್'ವೊಂದನ್ನು ಹಾಕಲಾಗಿದೆ. ಅದೇ ರೀತಿ ಮೈಸೂರು ರಸ್ತೆ, ಅತ್ತಿಗುಪ್ಪೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಜಿ ಸಚಿವ, ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಬೆಂಬಲಿಗರು ಬ್ಯಾನರ್‌ಗಳನ್ನು ಹಾಕಿದ್ದಾರೆ.

ಶಾಂತಿನಗರ ಶಾಸಕ ಎನ್.ಎ.ಹರೀಸ್ ಬೆಂಬಲಿಗರೊಬ್ಬರು ದೊಮ್ಮಲೂರಿನ ಡಾ.ರಾಜ್‌ಕುಮಾರ್ ಪಾರ್ಕ್‌ನಲ್ಲಿ ಫ್ಲೆಕ್ಸ್ ಕಟ್ಟಿದ್ದು, ಕನ್ನಡದ ಮಾತೆಯ ಆರಾಧ್ಯ ದೈವ ಡಾ.ರಾಜ್‌ಕುಮಾರ್ ಅವರ ಪ್ರತಿಮೆಯನ್ನು ಒಂದು ಕಡೆಯಿಂದ ಮುಚ್ಚಿಹೋಗುವಂತೆ ಮಾಡಿದ್ದಾರೆ.

ಈ ಪೋಸ್ಟರ್‌ಗಳು ಯಾವುದೇ ಒಪ್ಪಿಗೆ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾಗಿದೆ. ಜೆಡಿಎಸ್ ಮುಖಂಡ ಅನ್ವರ್ ಷರೀಫ್ ಅವರ ಪುತ್ರ ಉಸ್ಮಾನ್ ಷರೀಫ್ ಅವರ ಬೆಂಬಲಿಗರು ಹಾಕಿರುವ ಬ್ಯಾನರ್'ನೊಂದಿಗಿನ ಫಲಕಗಳು ನಂದಿದುರ್ಗ ರಸ್ತೆ-ಮಿಲ್ಲರ್ಸ್ ರಸ್ತೆ ಜಂಕ್ಷನ್‌ನಲ್ಲಿ ಅಡೆತಡೆಗಳನ್ನು ತಂದೊಡ್ಡಿದ್ದಾರೆ.

''ಇದು ನ್ಯಾಯಾಂಗ ನಿಂದನೆಯ ಸ್ಪಷ್ಟ ಪ್ರಕರಣ. ಹೈಕೋರ್ಟ್ ಸ್ವಯಂ ಪ್ರೇರಿತ ಪ್ರಕರಣವನ್ನು ಕೈಗೆತ್ತಿಕೊಂಡು ಬಿಬಿಎಂಪಿಗೆ ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ಈ ಪ್ರಕರಣಗಳಿಗೆ ನಿಯಂತ್ರಣವಿರುವುದಿಲ್ಲ ಎಂದು ಜಯಮಹಲ್ ಒಕ್ಕಲಿಗರ ವೇದಿಕೆ ಸದಸ್ಯ ವಾಸುದೇವನ್ ಜೆ ಅವರು ಹೇಳಿದ್ದಾರೆ.

ತಮ್ಮ ಬೆಂಬಲಿಗರ ಮೂಲಕ ಇಂತಹ ಭಿತ್ತಿಪತ್ರಗಳನ್ನು ಹಾಕುವ ಮುಖಂಡರಿಗೆ ನಗರದ ನಾಗರಿಕ ಸಮಸ್ಯೆಗಳಾದ ಹೊಂಡಗುಂಡಿಗಳು, ಮಳೆನೀರು ಚರಂಡಿ ಒತ್ತುವರಿ ಮತ್ತು ಕೆರೆಗಳ ಮಾಲಿನ್ಯದಂತಹ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ದೊಮ್ಮಲೂರು ನಿವಾಸಿಯೊಬ್ಬರು ಹೇಳಿದ್ದಾರೆ.

"ನಾವು ಶಾಸಕರ ಫೋಟೋಗಳು ಮತ್ತು ಬ್ಯಾನರ್‌ಗಳನ್ನು ಕೆಟ್ಟ ಸ್ಟ್ರೆಚ್‌ಗಳು, ತುಂಬಿರುವ ಮ್ಯಾನ್‌ಹೋಲ್‌ಗಳು ಮತ್ತು ಸಾರ್ವಜನಿಕ ಶೌಚಾಲಯಗಳ ಬಳಿ ಕೆಟ್ಟ ಸ್ಥಿತಿಯಲ್ಲಿ ಹಾಕಬೇಕು, ಅಂತಹ ನಾಗರಿಕ ಸಮಸ್ಯೆಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಿ ಅವರನ್ನು ನಾಚಿಕೆಪಡಿಸಬೇಕು" ಎಂದು ಹಿರಿಯ ನಾಗರಿಕರೊಬ್ಬರು ಹೇಳಿದ್ದಾರೆ.

ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಆರ್.ಎಲ್.ದೀಪಕ್ ಮಾತನಾಡಿ, ಇಂತಹ ಅಕ್ರಮ ಬ್ಯಾನರ್‌ಗಳನ್ನು ಕಿತ್ತೊಗೆಯುವಂತೆ ಮತ್ತು ಹೈಕೋರ್ಟ್ ಆದೇಶ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸುವಂತೆ ಎಲ್ಲಾ ವಲಯಗಳಲ್ಲಿನ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕರ್ನಾಟಕ ತೆರೆದ ಸ್ಥಳಗಳ (ವಿಕಾರ ತಡೆಗಟ್ಟುವಿಕೆ) ಕಾಯಿದೆ, 1981 ರ ಪ್ರಕಾರ, ಒಬ್ಬ ವ್ಯಕ್ತಿಯು ಲಿಖಿತ ಅನುಮತಿಯಿಲ್ಲದೆ ಜಾಹೀರಾತಿಗಾಗಿ ಬ್ಯಾನರ್ ಅಥವಾ ಫ್ಲೆಕ್ಸ್‌ಗಳನ್ನು ಹಾಕುವಂತಿಲ್ಲ. ನಿಯಮ ಉಲ್ಲಂಘಿಸುವವರಿಗೆ ರೂ 1,000 ದಂಡ ಅಥವಾ ಆರು ತಿಂಗಳ ಜೈಲು ಶಿಕ್ಷೆ ವಿಧಿಸಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com