ರಾಜ್ಯದ ನೂತನ 7 ವಿಶ್ವವಿದ್ಯಾನಿಲಯಗಳಿಗೆ ಕುಲಪತಿಗಳನ್ನು ನೇಮಿಸಿ ಸರ್ಕಾರ ಆದೇಶ

ರಾಜ್ಯದ ನೂತನ 7 ವಿಶ್ವವಿದ್ಯಾನಿಲಯಗಳಿಗೆ ಕುಲಪತಿಗಳನ್ನು ನೇಮಿಸಿ ರಾಜ್ಯ  ಸರ್ಕಾರ ಆದೇಶಿಸಿದೆ. ರಾಜ್ಯ ಸರ್ಕಾರ ನೂತನವಾಗಿ ಸ್ಥಾಪಿಸಿರುವ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯಗಳಿಗೆ ಚೊಚ್ಚಲ ಕುಲಪತಿಗಳನ್ನು ನೇಮಿಸಿ, ಸೋಮವಾರ ಆದೇಶ ಹೊರಡಿಸಿದೆ.
ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ. ರವಿ
ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ. ರವಿ

ಬೆಂಗಳೂರು: ರಾಜ್ಯದ ನೂತನ 7 ವಿಶ್ವವಿದ್ಯಾನಿಲಯಗಳಿಗೆ ಕುಲಪತಿಗಳನ್ನು ನೇಮಿಸಿ ರಾಜ್ಯ  ಸರ್ಕಾರ ಆದೇಶಿಸಿದೆ. ರಾಜ್ಯ ಸರ್ಕಾರ ನೂತನವಾಗಿ ಸ್ಥಾಪಿಸಿರುವ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯಗಳಿಗೆ ಚೊಚ್ಚಲ ಕುಲಪತಿಗಳನ್ನು ನೇಮಿಸಿ, ಸೋಮವಾರ ಆದೇಶ ಹೊರಡಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್  ಡಾ.ಬಿ ಕೆ ರವಿ ಅವರನ್ನು ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿಯನ್ನಾಗಿ ನೇಮಿಸಲಾಗಿದೆ.  ಬಾಗಲಕೋಟೆಯ ತೋಟಗಾರಿಕೆ ವಿ.ವಿಯ ಡಾ.ಅಶೋಕ ಸಂಗಪ್ಪ ಆಲೂರು ಅವರನ್ನು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿಯನ್ನಾಗಿ,  ಮೈಸೂರು ವಿಶ್ವವಿದ್ಯಾನಿಲಯದ ಮಾನವಶಾಸ್ತ್ರ ವಿಭಾಗದ ಡಾ.ಎಂ ಆರ್ ಗಂಗಾಧರ ಅವರನ್ನು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ.

ಬೆಳಗಾವಿಯ ಕೆ.ಎಸ್‌.ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಆನಂದ್‌ ಶರದ್‌ ದೇಶಪಾಂಡೆ ಅವರನ್ನು ಬಾಗಲಕೋಟೆ ವಿವಿ ಕುಲಪತಿಯನ್ನಾಗಿ, ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ ಎಸ್‌ ಬಿರಾದಾರ್ ಅವರನ್ನು ಬೀದರ್‍‌ ವಿವಿ ಕುಲಪತಿಯನ್ನಾಗಿ ನೇಮಿಸಲಾಗಿದೆ.

ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ವಿಭಾಗದ ಡಾ.ಸುರೇಶ್‌ ಎಚ್‌ ಜಂಗಮಶೆಟ್ಟಿ ಅವರನ್ನು ಹಾವೇರಿ ವಿವಿ ಮತ್ತು ಧಾರವಾಡದ ಕರ್ನಾಟಕ ವಿವಿನಿವೃತ್ತ ಪ್ರೊಫೆಸರ್ ಡಾ.ಟಿ ಸಿ ತಾರಾನಾಥ್‌ ಅವರನ್ನು ಹಾಸನ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. ಸರ್ಕಾರ ಜಿಲ್ಲೆಗೆ ಒಂದಾದರೂ ವಿಶ್ವವಿದ್ಯಾಲಯ ಇರಬೇಕು ಎನ್ನುವ ತತ್ತ್ವದಡಿಯಲ್ಲಿ ಈ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com