ಹೊಸಕೆರೆ ಹಳ್ಳಿ ಕೆರೆ ಮಧ್ಯೆ ಶಾಶ್ವತ ರಸ್ತೆ ನಿರ್ಮಿಸುತ್ತಿಲ್ಲ: ಸಚಿವ ಮುನಿರತ್ನ ಸ್ಪಷ್ಟನೆ
ಹೂಳು ತೆಗೆಯಬೇಕಾಗಿರುವ ಹಿನ್ನೆಲೆಯಲ್ಲಿ ಹೊಸಕೆರೆ ಹಳ್ಳಿ ಕೆರೆ ಮಧ್ಯೆ ತಾತ್ಕಾಲಿಕ ರಸ್ತೆ ನಿರ್ಮಿಸಲಾಗುತ್ತಿದೆ. ಇದು ಶಾಶ್ವತ ರಸ್ತೆಯಲ್ಲ ಎಂದು ಸ್ಥಳೀಯ ಶಾಸಕ ಮುನಿರತ್ನ ಅವರು ಸ್ಪಷ್ಟನೆ ನೀಡಿದ್ದಾರೆ.
Published: 22nd March 2023 01:43 PM | Last Updated: 22nd March 2023 01:45 PM | A+A A-

ಆರ್.ಆರ್.ನಗರದ ಹೊಸಕೆರೆಹಳ್ಳಿಯಲ್ಲಿ ಬಿಬಿಎಂಪಿ ಬ್ಯಾನರ್ ಹಾಕಿರುವುದು.
ಬೆಂಗಳೂರು: ಹೂಳು ತೆಗೆಯಬೇಕಾಗಿರುವ ಹಿನ್ನೆಲೆಯಲ್ಲಿ ಹೊಸಕೆರೆ ಹಳ್ಳಿ ಕೆರೆ ಮಧ್ಯೆ ತಾತ್ಕಾಲಿಕ ರಸ್ತೆ ನಿರ್ಮಿಸಲಾಗುತ್ತಿದೆ. ಇದು ಶಾಶ್ವತ ರಸ್ತೆಯಲ್ಲ ಎಂದು ಸ್ಥಳೀಯ ಶಾಸಕ ಮುನಿರತ್ನ ಅವರು ಸ್ಪಷ್ಟನೆ ನೀಡಿದ್ದಾರೆ.
''ಕೆರೆಯು 50 ಎಕರೆ ಪ್ರದೇಶದಲ್ಲಿದ್ದು, ಕಳೆದ 100 ವರ್ಷಗಳಿಂದ ಹೂಳು ಸಂಗ್ರಹವಾಗಿದೆ. ಮಳೆಗಾಲ ಬರುವಷ್ಟರಲ್ಲಿ ಹೂಳು ತೆಗೆಯುವುದು ಅಗತ್ಯವಿದೆ. ಈ ಪ್ರದೇಶದಲ್ಲಿ ಉತ್ತಮ ರಸ್ತೆಯ ಅಗತ್ಯವೂ ಇದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಬಿಬಿಎಂಪಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದೆ, ಇಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಯಾವುದೇ ಸಂಸ್ಥೆಯೂ ಸಹಾಯ ಮಾಡುತ್ತಿಲ್ಲ. ಎಲ್ಲವೂ ನಿಯಮಾನುಸಾರ ನಡೆಯುತ್ತಿದೆ. ಹೂಳು ತೆಗೆಸಿ ಟೆಂಡರ್ ನಿಯಮಗಳನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದರು.
“ಕೆರೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದೂ, ಉದ್ಯಾನವನವನ್ನೂ ಸ್ಥಾಪಿಸಲಾಗುತ್ತಿದೆ. ಇದು ಆರ್‌ಆರ್‌ನಗರ ಮಾದರಿಯ ಕೆರೆಯಾಗಲಿದೆ. ಕೆಲವರು ದುರುದ್ದೇಶದಿಂದ ಗೊಂದಲ ಸೃಷ್ಟಿಸುತ್ತಿದ್ದು, ವದಂತಿಗಳ ತಪ್ಪಿಸಲು ಬಿಬಿಎಂಪಿ ಕಾಮಗಾರಿಗೆ ಸಂಬಂಧಿಸಿದ ಬ್ಯಾನರ್'ನ್ನು ಹಾಕಿದೆ ಎಂದು ತಿಳಿದ್ದಾರೆ.
ಬಿಬಿಎಂಪಿ ಮಳೆನೀರು ಚರಂಡಿಗಳ ಕಾರ್ಯಪಾಲಕ ಎಂಜಿನಿಯರ್ ಮೇಘಾ ಅವರು ಮಾತನಾಡಿ, ಕೆರೆ ಸುಧಾರಣೆಯ ಭಾಗವಾಗಿ ಕೆರೆ ಕಟ್ಟೆಯ ಬಳಿ ತಡೆಗೋಡೆ ನಿರ್ಮಿಸಲಾಗುತ್ತಿದೆ. ''ರಸ್ತೆ ನಿರ್ಮಾಣ ಬಗ್ಗೆ ನಮಗೆ ಮಾಹಿತಿ ಇಲ್ಲ. ನನಗೆ ತಿಳಿದಂತೆ ಎಸ್‌ಡಬ್ಲ್ಯೂಡಿ ಇಲಾಖೆಯಿಂದ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಕೆರೆ ಸಂರಕ್ಷಣೆ ಹೋರಾಟಗಾರರು ಮಾತನಾಡಿ, ಕೆರೆ ಬಳಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಇಲ್ಲಿನ ಅಧಿಕಾರಿಗಳು ನಮಗೆ ಮಾಹಿತಿ ನೀಡುತ್ತಿಲ್ಲ. ನೂರಾರು ಟ್ರಕ್ ಗಳಷ್ಟು ಅವಶೇಷಗಳನ್ನು ಕೆರೆಯೊಳಗೆ ಹಾಕಲಾಗಿದೆ ಎಂದು ಹೇಳಿದ್ದಾರೆ.
ಕೆರೆ ಸಂರಕ್ಷಣಾಧಿಕಾರಿ ಜೋಸೆಫ್ ಹೂವರ್ ಅವರು ಮಾತನಾಡಿ, ಬಿಬಿಎಂಪಿ ಹೇಳಿಕೆ ಬಿಡುಗಡೆ ಮಾಡಿದ್ದೇ ಆದರೆ, ಎಲ್ಲಾ ಗೊಂದಲಗಳು ನಿವಾರಣೆಯಾಗಲಿದೆ ಎಂದು ತಿಳಿಸಿದ್ದಾರೆ.