ಚಿಕ್ಕಬಳ್ಳಾಪುರದಲ್ಲಿ ವೋಲ್ವೋ ಬಸ್ ಸೇವೆ ಆರಂಭಿಸಿದ ಬಿಎಂಟಿಸಿ: ದಶಕಗಳ ಕನಸು ನನಸು

ಯುಗಾದಿ ಹಬ್ಬಕ್ಕೆ ಚಿಕ್ಕಬಳ್ಳಾಪುರಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಿಹಿಸುದ್ದಿಯೊಂದನ್ನು ನೀಡಿದೆ. ಚಿಕ್ಕಬಳ್ಳಾಪುರಕ್ಕೆ ವೋಲ್ವೋ ಎರಡು ಹವಾನಿಯಂತ್ರಿತ ಬಸ್​ಗಳ ಸೇವೆಯನ್ನು ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿದೆ.
ಸಚಿವ ಡಾ.ಕೆ.ಸುಧಾಕರ್
ಸಚಿವ ಡಾ.ಕೆ.ಸುಧಾಕರ್
Updated on

ಬೆಂಗಳೂರು: ಯುಗಾದಿ ಹಬ್ಬಕ್ಕೆ ಚಿಕ್ಕಬಳ್ಳಾಪುರಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಿಹಿಸುದ್ದಿಯೊಂದನ್ನು ನೀಡಿದೆ. ಚಿಕ್ಕಬಳ್ಳಾಪುರಕ್ಕೆ ವೋಲ್ವೋ ಎರಡು ಹವಾನಿಯಂತ್ರಿತ ಬಸ್​ಗಳ ಸೇವೆಯನ್ನು ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿದೆ.

ಇದು ಬಿಎಂಟಿಸಿಯ ಅತಿ ಉದ್ದದ ಸೇವೆಯಾಗಿದ್ದು, ಇದೇ ಮೊದಲ ಬಾರಿಗೆ ನಿಗಮವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಬಸ್‌ಗಳನ್ನು ನಿರ್ವಹಣೆ ಮಾಡಲು ಮುಂದಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (ಕೆಎಸ್‌ಆರ್‌ಟಿಸಿ) ಅನುಮತಿ ಪಡೆದ ನಂತರವೇ ಬಿಎಂಟಿಸಿ ಈ ಸೇವೆಯನ್ನು ವಿಸ್ತರಿಸಬಹುದಾಗಿದೆ. ಮಾರ್ಗ ಸಂಖ್ಯೆ 298ಎಂಎನ್ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಹೆಬ್ಬಾಳ, ಯಲಹಂಕ ಮತ್ತು ರಾಣಿ ಕ್ರಾಸ್/ದೇವನಹಳ್ಳಿ ಮೂಲಕ ಚಿಕ್ಕಬಳ್ಳಾಪುರಕ್ಕೆ ಈ ಬಸ್ ಗಳು ಚಲಿಸಲಿವೆ.

ಚಿಕ್ಕಬಳ್ಳಾಪುರ ಸಿವಿಲ್ ಬಸ್ ನಿಲ್ದಾಣದಲ್ಲಿ ಸ್ಥಳೀಯ ಶಾಸಕ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಬಸ್ ಸಂಚಾರಕ್ಕೆ ಚಾಲನೆ ನೀಡಿದರು.

ಎರಡು ವೋಲ್ವೋ ಬಸ್‌ಗಳನ್ನು ಈ ಮಾರ್ಗದಲ್ಲಿ ನಿಯೋಜಿಸಲಾಗಿದ್ದು, ಪ್ರತಿ ದಿನ ಆರು ರೌಂಡ್ ಟ್ರಿಪ್‌ಗಳನ್ನು ಈ ಬಸ್'ಗಳು ಮಾಡಲಿವೆ. ಸಂದರ್ಭಕ್ಕೆ ಅನುಗುಣವಾಗಿ ಟಿಕೆಟ್ ದರವನ್ನು ರೂ.80ಕ್ಕೆ ನಿಗದಿ ಮಾಡಲಾಗಿದೆ.

ಪ್ರಾಯೋಗಿಕ ಹಂತವಾಗಿರುವ ಕಾರಣ ಚಿಕ್ಕಬಳ್ಳಾಪುರ ಬಸ್ ಸಂಚಾರಕ್ಕೆ ಕಡಿಮೆ ದರವನ್ನು ನಿಗದಿ ಮಾಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಯಾವ ಬಸ್ ನಿಲ್ದಾಣಗಳಿಂದ ಎಷ್ಟು ಗಂಟೆಗೆ ಬಸ್​ ಹೊರಡಲಿದೆ ವೇಳಾಪಟ್ಟಿ ಇಲ್ಲಿದೆ..

ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಿಂದ ಬಸ್​ ಹೊರಡಲಿರುವ ಸಮಯ
ಬೆಳಿಗ್ಗೆ 8.10, 8.20, ಮಧ್ಯಾಹ್ನ 12.35, 1.05, ಸಂಜೆ 7.15, 7.35 ಕ್ಕೆ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಹೊರಡಲಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಬಸ್​ ಹೊರಡಲಿರುವ ಸಮಯ
ಬೆಳಿಗ್ಗೆ 10.25, 11.00, ಸಂಜೆ 5.30, 5.45, ರಾತ್ರಿ 9.15, 9. 35 ಕ್ಕೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸಂಚರಿಸಲಿದೆ.

ಯುಗಾದಿ ಕೊಡುಗೆ ಎಂದ ಸಚಿವ ಸುಧಾಕರ್​
ಆರೋಗ್ಯ ಸಚಿವ ಡಾ.ಕೆ ಸುಧಾಕರ್​ ಟ್ವೀಟ್​ ಮಾಡಿ “ಚಿಕ್ಕಬಳ್ಳಾಪುರ ಜನತೆಗೆ ಯುಗಾದಿ ಕೊಡುಗೆ ಎಂದು ಹೇಳಿದ್ದಾರೆ.  
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸುವ ಜಿಲ್ಲೆಯ ಜನತೆಯ ಬಹುನಿರೀಕ್ಷಿತ ಬೇಡಿಕೆಯಂತೆ ಬಿಎಂಟಿಸಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ಇನ್ನು ಮುಂದೆ ಬಿಎಂಟಿಸಿ ಬಸ್ಸುಗಳು ನಮ್ಮ ಚಿಕ್ಕಬಳ್ಳಾಪುರಕ್ಕೂ ಸಂಚರಿಸಲಿವೆ.

ಇದರಿಂದ ರೈತರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಸ್ಥರು, ಉದ್ಯೋಗಿಗಳು ಸೇರಿದಂತೆ ದಿನನಿತ್ಯ ಬೆಂಗಳೂರಿಗೆ ಓಡಾಡುವ ಚಿಕ್ಕಬಳ್ಳಾಪುರದ ಎಲ್ಲ ನಾಗರಿಕರಿಗೂ ಇದರಿಂದ ಅನುಕೂಲವಾಗಲಿದ್ದು, ಜಿಲ್ಲೆಯ ಆರ್ಥಿಕ ಪ್ರಗತಿಗೂ ವೇಗ ದೊರೆಯಲಿದೆ.

ಚಿಕ್ಕಬಳ್ಳಾಪುರದ ಜನತೆಯ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಗಳು. ಈ ಬೇಡಿಕೆಯನ್ನು ಸಾಕಾರಗೊಳಿಸಲು ಶ್ರಮಿಸಿದ ಬಿಎಂಟಿಸಿ ಉಪಾಧ್ಯಕ್ಷರಾದ ನವೀನ್ ಕಿರಣ್ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com