ವಿವಾದಾತ್ಮಕ ಹೇಳಿಕೆ: ನಟ ಚೇತನ್ ಅಂಹಿಸಾ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮದ ಎಚ್ಚರಿಕೆ

ಪದೇ ಪದೇ ಚಿತ್ರರಂಗಕ್ಕೆ ಮುಜುಗರ ಉಂಟು ಮಾಡುವಂತಹ ಹೇಳಿಕೆಗಳನ್ನು ನೀಡುತ್ತಿರುವ ನಟ ಚೇತನ್ ಅಂಹಿಸಾ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಲಿದೆ ಎಂದು ವಾಣಿಜ್ಯ ಮಂಡಳಿ ಎಚ್ಚರಿಕೆ ನೀಡಿದೆ.
ಭಾಮಾ ಹರೀಶ್ ಮತ್ತು ಚೇತನ್
ಭಾಮಾ ಹರೀಶ್ ಮತ್ತು ಚೇತನ್

ಬೆಂಗಳೂರು: ಪದೇ ಪದೇ ಚಿತ್ರರಂಗಕ್ಕೆ ಮುಜುಗರ ಉಂಟು ಮಾಡುವಂತಹ ಹೇಳಿಕೆಗಳನ್ನು ನೀಡುತ್ತಿರುವ ನಟ ಚೇತನ್ ಅಂಹಿಸಾ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಲಿದೆ ಎಂದು ವಾಣಿಜ್ಯ ಮಂಡಳಿ ಎಚ್ಚರಿಕೆ ನೀಡಿದೆ.

ನಟ ಚೇತನ್ ಕನ್ನಡ ಚಿತ್ರರಂಗಕ್ಕೆ ಮುಜುಗರ ನೀಡುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿಯೇ ಅವರ ವಿರುದ್ಧ ಕ್ರಮ ಕೈಗೊಳ್ಳಲು ಫಿಲ್ಮಂ ಚೇಂಬರ್ ನಿರ್ಧರಿಸಿದೆ ಎನ್ನಲಾಗಿದೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಾಪಕ ಉಮೇಶ್ ಬಣಕರ್ ಅವರು, ನಟ ಅಂಬರೀಶ್ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರ ಈ ಕಾರಣದಿಂದಾಗಿಯೇ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ರಸ್ತೆ ಎಂಬುದಾಗಿ ಹೆಸರಿಟ್ಟಿದ್ದಾರೆ. ಈ ಕ್ರಮವನ್ನೇ ಪ್ರಶ್ನಿಸಿ ನಟ ಚೇತನ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.

ಅಂತೆಯೇ ನಟ ಚೇತನ್ ಪದೇ ಪದೇ ಕನ್ನಡ ಚಿತ್ರರಂಗದಲ್ಲಿ ಇದ್ದುಕೊಂಡು, ಚಿತ್ರರಂಗಕ್ಕೆ ಮುಜುಗರ ಉಂಟುಮಾಡುವ ಹೇಳಿಕೆ ನೀಡುತ್ತಿದ್ದಾರೆ. ಚಿತ್ರರಂಗದ ಒಕ್ಕೊರಲ ಅಭಿಪ್ರಾಯದ ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಈಗಾಗಲೇ ತಿಳಿ ಹೇಳಲು ಯತ್ನಿಸಿದ್ದೇವೆ. ಆದರೂ ವರ್ತನೆ ತಿದ್ದಿಕೊಳ್ಳದ ಅವರ ವರ್ತನೆ ಹೀಗೆಯೇ ಮುಂದುವರೆದರೆ ಅವರ ವಿರುದ್ಧ ಅಸಹಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

"ಈ ವಿಚಾರವಾಗಿ ಸುಮಲತಾ ಅವ್ರ ಒತ್ತಾಯ ಇರಲಿಲ್ಲ, ಚಿತ್ರರಂಗದ ಒತ್ತಾಯ ಆಗಿತ್ತು. ಚೇತನ್ ಪದೇ ಪದೇ ಮುಜುಗರಕ್ಕೀಡು ಮಾಡ್ತಾರೆ. ಇಂಡಸ್ಟ್ರಿಗೆ ಅಂಬರೀಶ್ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಕುಟುಂಬದಲ್ಲಿ ಇದ್ಕೊಂಡು ಈ ರೀತಿ ಮಾತನಾಡೋದು ತಪ್ಪು. ಇಡೀ ಚಿತ್ರರಂಗದ ಅಷ್ಟು ಆಯಾಮಗಳು ಸೇರಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಚೇತನ್ ಮಾಡಿರೋದು ಅಕ್ಷಮ್ಯ ಅಪರಾಧ. ಈ ರೀತಿಯ ಹೇಳಿಕೆಗಳನ್ನ ಕೋಡೊದ್ರಿಂದ ಅವ್ರಿಗೆ ತಿಳಿ ಹೇಳೋ ಕೆಲಸ ಮಾಡ್ತಿವಿ. ವಾಣಿಜ್ಯ ಮಂಡಳಿ ಪಧಾದಿಕಾರಿಗಳ ಜೊತೆ ಚರ್ಚೆ ಮಾಡಿ ಈ‌ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ರೀತಿ ಮಾಡ್ತಿದ್ರೆ ಅವ್ರ ಮೇಲೆ ಇಡೀ ಚಿತ್ರರಂಗ ಅಸಹಕಾರ ತೋರೋದಕ್ಕೆ ಚರ್ಚೆ ಮಾಡ್ತಿದ್ದೀವಿ. ನಾವು ಸಂಪರ್ಕ ಮಾಡಿದ್ರೆ ಅವ್ರು ಸಿಗಲಿಲ್ಲ ಇದನ್ನ ಮೀರಿದ್ರೆ ಅಂತಿಮ ಹಂತಕ್ಕೆ ಬರ್ತಿವಿ" ಎಂದು ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕರ್ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಮೌರ್ಯ ಸರ್ಕಲ್‌ನಿಂದ ಬಸವೇಶ್ವರ್‌ ಸರ್ಕಲ್‌ವರೆಗಿನ ರೇಸ್‌ ಕೋರ್ಸ್‌ ರಸ್ತೆಗೆ 'ರೆಬೆಲ್‌ ಸ್ಟಾರ್‌' ಡಾ.ಎಂ. ಎಚ್‌ ಅಂಬರೀಶ್‌ ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕ ಅನಾವರಣಗೊಳಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌, ಪುತ್ರ ಅಭಿಷೇಕ್‌ ಅಂಬರೀಶ್‌, ನಟ ರಾಘವೇಂದ್ರ ರಾಜ್‌ಕುಮಾರ್‌, ಫಿಲಂ ಚೇಂಬರ್‌ ಅಧ್ಯಕ್ಷ ಭಾ ಮ ಹರೀಶ್‌ , ರಾಕ್‌ಲೈನ್‌ ವೆಂಕಟೇಶ್‌, ಚಿನ್ನೇಗೌಡ ಮತ್ತಿತರು ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com