ಪ್ರಧಾನಿ ಮೋದಿ ಬೆಂಗಳೂರು ರೋಡ್ ಶೋ ಮುಂದೂಡಿ: HD ಕುಮಾರಸ್ವಾಮಿ ಆಗ್ರಹ... ಕಾರಣ ಏನು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ರೋಡ್ ಶೋವನ್ನು ಮುಂದೂಡಬೇಕು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ಮತ್ತು ಮೋದಿ ರೋಡ್ ಶೋ
ಎಚ್ ಡಿ ಕುಮಾರಸ್ವಾಮಿ ಮತ್ತು ಮೋದಿ ರೋಡ್ ಶೋ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ರೋಡ್ ಶೋವನ್ನು ಮುಂದೂಡಬೇಕು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ 5 ದಿನಗಳು ಮಾತ್ರ ಬಾಕಿ ಇದ್ದು ರಾಜಕೀಯ ಪಕ್ಷಗಳ ಭರ್ಜರಿ ಪ್ರಚಾರ ಮುಂದುವರೆದಿದೆ. ಏತನ್ಮಧ್ಯೆ ಬಿಜೆಪಿ ಕೂಡ ರಾಜಧಾನಿ ಬೆಂಗಳೂರಿನಲ್ಲಿ ಸಾಕಷ್ಟು ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಪೈಕಿ ಬೆಂಗಳೂರು ದಕ್ಷಿಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಕೂಡ ಪ್ರಮುಖವಾಗಿದೆ. ಆದರೆ ಇದೇ ರೋಡ್ ಶೋ ಕಾರ್ಯಕ್ರಮವನ್ನು ಮುಂದೂಡಬೇಕು ಎಂದು ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕುಮಾರಸ್ವಾಮಿ ಅಗ್ರಹಕ್ಕೆ ಕಾರಣವೇನು?
ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪರೀಕ್ಷೆ ಕೋರ್ಸ್ ಪ್ರವೇಶಕ್ಕೆ ದೇಶಾದ್ಯಂತ ನಡೆಸುವ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಇದೇ ಮೇ 7 ರಂದು ಭಾನುವಾರ ನಡೆಯಲಿದೆ. ಆದರೆ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಲ್ಲಿ ಸಂಚಾರ ಆತಂಕ ಎದುರಾಗಿದ್ದು, ಅದನ್ನು ದೂರ ಮಾಡಲು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನೀಟ್ ಪರೀಕ್ಷೆ ದಿನವೇ ಚುನಾವಣೆ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ನಡೆಯಲಿದೆ. ಅಂದು ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆ ಆಗದಂತೆ ರೋಡ್ ವೇಳಾಪಟ್ಟಿ ಬದಲಿಸಿಕೊಳ್ಳಬೇಕೆಂದು ಎಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯಿಸಿದ್ದಾರೆ. ಜೆಪಿ ನಗರದ ನಿವಾಸದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಭಾನುವಾರ ನೀಟ್ ಪರೀಕ್ಷೆಯ ನಡುವೆಯೂ ಪ್ರಧಾನಿ ಮೋದಿ ರೋಡ್ ಶೋನಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಲಿದೆ. ಈ ವಿಚಾರದ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರಿಂದ ಬರುತ್ತಿರುವ ಟೀಕೆಗಳ ಬಗ್ಗೆ ನನಗೆ ಮಾಹಿತಿ ಇದೆ. ರೋಡ್ ಶೋಗಳಿಂದ ಮಕ್ಕಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಾರದು ಎಂದು ಹೇಳಿದರು.

ಸಾರ್ವಜನಿಕ ವಲಯದಲ್ಲಿ ಬಿಜೆಪಿ ರೋಡ್ ಶೋ ನಿರ್ಧಾರ ಇದು ಸರಿಯಾಗಿದ್ದಾ ಇಲ್ಲವೇ ತಪ್ಪಾ? ಎಂದು ಚರ್ಚೆ ನಡೆದರೂ ಅದನ್ನು ಬಿಜೆಪಿಯವರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ದೇಶದ ಪ್ರಧಾನಮಂತ್ರಿಗಳು ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟ ಆಡುವುದು ಸರಿಯಲ್ಲ. ನೀಟ್ ಪರೀಕ್ಷೆಗೆ ತೊಂದರೆ ಕೊಡಬಾರದು. ಮಕ್ಕಳ ಭವಿಷ್ಯದ ಬಗ್ಗೆ ಅವರಿಗೆ ಏನಾದರೂ ಕಿಂಚಿತ್ತು ಕಾಳಜಿ ಇದ್ದರೆ ಮೇ 7ರಂದು ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ರೋಡ್ ಶೋ ಅನ್ನು ಮುಂದೂಡುವುದು ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.

ಮೋದಿ ರೋಡ್ ಶೋ; ರಸ್ತೆಗಳು ಬಂದ್: ಸ್ಪಷ್ಟತೆ ಇಲ್ಲದೇ ಗೊಂದಲ
ನೀಟ್ ಪರೀಕ್ಷೆಗಾಗಿ 20 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಆ ಪೈಕಿ ಬೆಂಗಳೂರಿನಲ್ಲಿ ಸಾವಿರಾರು ಮಂದಿ ಪರೀಕ್ಷೇ ಎದುರಿಸುತ್ತಿದ್ದಾರೆ. ಸಂಚಾರ ಪೊಲೀಸರ ಪ್ರಕಾರ, ಅಂದು ಬೆಳಗ್ಗೆ 08 ಗಂಟೆಯಿಂದ ಮಧ್ಯಾಹ್ನ 03 ಗಂಟೆವರೆಗೆ ರಸ್ತೆಗಳು ಬಂದ್ ಆಗಿರಲಿವೆ ಎಂಬ ಸೂಚನೆ ನೀಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ವಾಹನ ಸವಾರರಿಗೆ ಮಾತ್ರವಲ್ಲದೇ ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ನಿವಾಸದಿಂದ ಪರೀಕ್ಷಾ ಕೇಂದ್ರಗಳಿಗೆ ತಲುಪುವುದು ಕಷ್ಟವಾಗಲಿದೆ. ಈ ಸಂಬಂಧ ಸ್ಪಷ್ಟ ಮಾಹಿತಿ ಇಲ್ಲದೆ ಜನರು, ವಿದ್ಯಾರ್ಥಿಗಳು ಪೋಷಕರು ಗೊಂದಲದಲ್ಲಿ ಸಿಲುಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com