ನಿಸ್ಸಂದೇಹವಾಗಿ ಈ ಬಾರಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ: ಸತೀಶ್ ಜಾರಕಿಹೊಳಿ (ಸಂದರ್ಶನ)

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಗೋಕಾಕದ ಅನುಭವಿ ರಾಜಕಾರಣಿ ಸತೀಶ ಜಾರಕಿಹೊಳಿ ಅವರು ಹಲವಾರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು, ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.
ಸತೀಶ್ ಜಾರಕಿಹೊಳಿ.
ಸತೀಶ್ ಜಾರಕಿಹೊಳಿ.

ಬೆಳಗಾವಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಗೋಕಾಕದ ಅನುಭವಿ ರಾಜಕಾರಣಿ ಸತೀಶ ಜಾರಕಿಹೊಳಿ ಅವರು ಹಲವಾರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು, ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.

ಸತೀಶ್ ಜಾರಕಿಹೊಳಿಯವರ ನಿರ್ಣಾಯಕ ರಾಜಕೀಯ ನಡೆಗಳು ಮತ್ತು ದಿಟ್ಟ ನಿರ್ಧಾರಗಳು ಕುಟುಂಬದಿಂದಲೇ ನಾಲ್ವರು ಶಾಸಕರು ಹೊರಹೊಮ್ಮುವಂತೆ ಮಾಡಿದೆ. ರಾಜ್ಯದ ಹಲವಾರು ಕ್ಷೇತ್ರಗಳಲ್ಲಿ ಅವರ ಅಪಾರ ಜನಪ್ರಿಯತೆ ಮತ್ತು ವಿವಿಧ ಚುನಾವಣೆಗಳಲ್ಲಿ ಕಾಂಗ್ರೆಸ್ ತನ್ನ ಸ್ಥಾನವನ್ನು ಹೆಚ್ಚಿಸಲು ಸಹಾಯ ಮಾಡಿದ ಅವರ ರಾಜಕೀಯ ತಂತ್ರಗಳನ್ನು ಗಮನಿಸಿದರೆ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಬಳಿಕ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಲಿದ್ದಾರೆಂದು ಅವರ ಬೆಂಬಲಿಗರು ಅಭಿಪ್ರಾಯಪಟ್ಟಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಸತೀಶ್ ಜಾರಕಿಹೊಳಿಯವರು, ಚುನಾವಣೆ ಸಿದ್ಧತೆಗಳು, ಗೆಲುವಿನ ತಂತ್ರಗಳ ಕುರಿತು ಮಾತನಾಡಿದ್ದಾರೆ.

ಧಾರ್ಮಿಕ ಆಧಾರದ ಮೇಲೆ ಸಮುದಾಯಗಳನ್ನು ವಿಭಜಿಸುವ ಬಿಜೆಪಿಯ ತಂತ್ರಗಳಿಂದ ಜನರು ಸಂಪೂರ್ಣವಾಗಿ ಅಸಮಾಧಾನಗೊಂಡಿದ್ದು, ಈ ಬಾರಿ ಕಾಂಗ್ರೆಸ್ ಸರ್ಕಾರ ರಚಿಸುವುದು ಖಚಿತ ಎಂದು ಹೇಳಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಹೇಗೆ ನೋಡುತ್ತೀರಿ? ಆಡಳಿತ ವಿರೋಧಿ ಅಲೆಯಿದೆಯೇ?
ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಮುಂಬರುವ ಚುನಾವಣೆಯಲ್ಲಿ ನಮಗೆ ಸಹಕಾರಿಯಾಗಲಿದೆ. ಒಂದೆಡೆ ಕಾಂಗ್ರೆಸ್‌ ಅವಧಿಯಲ್ಲಿನ ಸಾಧನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ದೊಡ್ಡ ಪಟ್ಟಿಯೇ ನಮ್ಮ ಮುಂದಿದೆ, ಇನ್ನೊಂದೆಡೆ ಬಿಜೆಪಿ ಸರ್ಕಾರದ ಶೋಚನೀಯ ಆಡಳಿತವಿದೆ. ಆಡಳಿತಾರೂಢ ಸರ್ಕಾರದ ವಿರುದ್ಧ ಪ್ರಬಲ ವಿರೋಧಿ ಆಡಳಿತವಿದೆ. ಅದು ಅಂತಿಮವಾಗಿ ಕಾಂಗ್ರೆಸ್‌ಗೆ ಸಹಾಯ ಮಾಡುತ್ತದೆ. ಬೆಲೆ ಏರಿಕೆ, ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಧರ್ಮದ ಹೆಸರಿನಲ್ಲಿ ಬಿಜೆಪಿಯ ರಾಜಕೀಯ ಮತ್ತು ಮುಸ್ಲಿಂ ವಿರೋಧಿ ಅಜೆಂಡಾದಂತಹ ಹಲವಾರು ಅಂಶಗಳು ನಮಗೆ ಸಹಾಯ ಮಾಡುತ್ತದೆ.

ಮೇ 10 ರ ಚುನಾವಣೆಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಸ್ಟಾರ್ ಪ್ರಚಾರಕರು ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದು, ಇದು ಸಹಾಯ ಮಾಡುತ್ತದೆಯೇ?
ಮೋದಿ ಮತ್ತು ಶಾ ಅವರಂತಹ ರಾಷ್ಟ್ರೀಯ ನಾಯಕರು ರ್ಯಾಲಿಗಳಲ್ಲಿ ರಾಜ್ಯದ ವಿಷಯಗಳ ಬದಲಿಗೆ ರಾಷ್ಟ್ರೀಯ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರ ಪ್ರಚಾರಗಳು ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜ್ಯದ ಜನತೆ ಬಯಸುವುದು ಅವರ ಸಮಸ್ಯೆಗಳಿಗೆ ಪರಿಹಾರ ಮತ್ತು ಅಭಿವೃದ್ಧಿ. ಈ ವಿಷಯಗಳ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿರುವುದನ್ನು ನೀವು ನೋಡುತ್ತಿರುವಿರಾ? ಮತ್ತೊಂದೆಡೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ತಮ್ಮ ರ್ಯಾಲಿಗಳಲ್ಲಿ ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಸಹ ಪ್ರಶ್ನಿಸುತ್ತಿದ್ದಾರೆ.

ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಅವರು ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ಪಕ್ಷಕ್ಕೆ ಏನಾದರೂ ಸಹಾಯವಾಗುತ್ತದೆ ಎಂದು ನೀವು ಭಾವಿಸುತ್ತೀರಾ?
ಖಂಡಿತ ಹೌದು, ಇಬ್ಬರೂ ಜನಪ್ರಿಯ ನಾಯಕರು. ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಹಿಡಿತವನ್ನು ಹೊಂದಿದ್ದಾರೆ. ಇದು ಕಾಂಗ್ರೆಸ್ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಬೆಳಗಾವಿಯಲ್ಲಿ 18 ಸ್ಥಾನಗಳ ಪೈಕಿ 10 ರಿಂದ 11 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇತ್ತು. ಸವದಿ ಅವರಿಂದಾಗಿ ಸೀಟುಗಳ ಸಂಖ್ಯೆ ಇನ್ನೂ ಒಂದು ಅಥವಾ ಎರಡು ಸ್ಥಾನಗಳು ಹೆಚ್ಚಾಗಬಹುದು. ಶೆಟ್ಟರ್ ಕಾಂಗ್ರೆಸ್ ಗೆ ಎಂಟ್ರಿ ಕೊಟ್ಟಿರುವುದರಿಂದ ಪಕ್ಷದ ಭವಿಷ್ಯ ಸುಧಾರಿಸಲಿದೆ.

ಬಜರಂಗದಳವನ್ನು ನಿಷೇಧಿಸುವ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಣೆ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಪಕ್ಷದ ನಿಲುವನ್ನು ನೀವು ಸಮರ್ಥಿಸಿಕೊಳ್ಳುತ್ತೀರಾ?
ಈ ಘೋಷಣೆಯಿಂದ ಅವರು ಸಿಟ್ಟಿಗೆದ್ದಿರಬಹುದು. ಆದರೆ, ಇದು ಚುನಾವಣೆಯಲ್ಲಿ ಪಕ್ಷದ ಭವಿಷ್ಯಕ್ಕೆ ಅಡ್ಡಿಯಾಗುವುದಿಲ್ಲ ಎಂಬುದು ನನ್ನ ಅಭಿಪ್ರಾಯ. ಇಂತಹ ಎಲ್ಲಾ ಸಮಸ್ಯೆಗಳು ಯಾವುದೇ ಬದಲಾವಣೆ ತರುವುದಿಲ್ಲ. ಕಾಂಗ್ರೆಸ್ ವಿಶ್ವಾಸದಿಂದ ಚುನಾವಣೆ ಎದುರಿಸಲಿದೆ.

ಪ್ರಚಾರ ಅಂತ್ಯಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇದೀಗ ಪಕ್ಷದ ಮುಂದಿರುವ ಪ್ರಮುಖ ಸವಾಲುಗಳೇನು?
ಬಿಜೆಪಿ ಸರ್ಕಾರದ ವೈಫಲ್ಯಗಳು, ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪಗಳು, ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಧರ್ಮದ ಹೆಸರಿನಲ್ಲಿ ಬಿಜೆಪಿಯ ರಾಜಕಾರಣದ ಕೆಲವು ವಿಷಯಗಳನ್ನು ಕಾಂಗ್ರೆಸ್ ಪ್ರಸ್ತಾಪಿಸುತ್ತಲೇ ಇದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ವಿಶೇಷವಾಗಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೆರೆ ಅಭಿವೃದ್ಧಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಬಲಗೊಳ್ಳಲು ಸಹಾಯ ಮಾಡುತ್ತದೆ.

ಯಮಕನಮರಡಿ ಕ್ಷೇತ್ರದಿಂದ ಸತತ ಮೂರನೇ ಗೆಲುವು ಖಚಿತವೇ?
ಖಂಡಿತವಾಗಿಯೂ ಹೌದು. ಯಮಕನಮರಡಿಯಲ್ಲಿ ಕಳೆದ ಕೆಲವು ವರ್ಷಗಳಿಂದ ನಾನು ಕೈಗೊಂಡಿರುವ ಕೆಲಸಗಳು ಚುನಾವಣೆಯಲ್ಲಿ ನಿರಾಯಾಸವಾಗಿ ಗೆಲ್ಲಲು ನನಗೆ ಸಹಾಯ ಮಾಡಲಿದೆ. ಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಸರಿಸಮನಾಗಿ ನನ್ನ ಕ್ಷೇತ್ರದಲ್ಲಿ ಪಕ್ಷದ ಪ್ರಚಾರ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಬೆಳಗಾವಿ ಮತ್ತು ಬಾಂಬೆ-ಕರ್ನಾಟಕದ ಇತರೆ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸ್ಥಾನವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com