ಮೋದಿ ರೋಡ್ ಶೋ: 'ಕಮಲಾಧಿಪತಿ'ಗೆ ಹೂವಿನ ಸುರಿಮಳೆ, ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ ಜನ-ಎಲ್ಲೆಡೆ 'ನಮೋ' ಜಪ

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಮತದಾರರ ಮನಗೆಲ್ಲಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಗರದಲ್ಲಿ ಶನಿವಾರ ರೋಡ್ ಶೋ ನಡೆಸಿದರು.
ನಗರದಲ್ಲಿ ರೋಡ್ ಶೋ ನಡೆಸುತ್ತಿರುವ ಪ್ರಧಾನಿ ಮೋದಿ.
ನಗರದಲ್ಲಿ ರೋಡ್ ಶೋ ನಡೆಸುತ್ತಿರುವ ಪ್ರಧಾನಿ ಮೋದಿ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಮತದಾರರ ಮನಗೆಲ್ಲಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಗರದಲ್ಲಿ ಶನಿವಾರ ರೋಡ್ ಶೋ ನಡೆಸಿದರು.

ನಗರದ ಸೋಮೇಶ್ವರ ಸಭಾಭವನದಿಂದ ಮೋದಿಯವರು ರೋಡ್ ಶೋ ಆರಂಭಿಸಿದ್ದು, ಪ್ರಧಾನಮಂತ್ರಿಗಳೊಂದಿಗೆ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಅವರು ಸಾಥ್ ನೀಡಿದರು.

ಮೋದಿಯವರ ರೋಡ್ ಶೋ ವೇಳೆ ಮಾರ್ಗದುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಹೂವಿನ ಮಳೆ ಸುರಿದು, ಮೋದಿ ಪರ ಜೈಕಾರ ಕೂಗಿದರು.

ಈ ನಡುವೆ ಮೋದಿಯವರ ರೋಡ್ ಶೋ ನೋಡಲು ಭೂತಾನ್, ಮಾಲ್ಡೀವ್ಸ್, ನೇಪಾಳದಿಂದ ಅಧಿಕಾರಿಗಳು ಆಗಮಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 26.5 ಕಿ.ಮೀ ನಡೆಸಿದ್ದು, ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಮಲ್ಲೇಶ್ವರಂ 18ನೇ ಕ್ರಾಸ್‌ ವರೆಗೆ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯಿತು. ರೇಷ್ಮೆಯ ಕೇಸರಿ ಮೈಸೂರು‌ ಪೇಟಾದಲ್ಲಿ ಕಂಗೊಳಿಸಿದ್ದು, ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆಸಿದರು.

ಈ ಸಂದರ್ಭದಲ್ಲಿ ವಿವಿಧೆಡೆ ಜಾನಪದ ಕಲಾತಂಡಗಳ ಪ್ರದರ್ಶನ ನೀಡಿದ್ದು, ಇಡೀ ರೋಡ್ ಶೋ ಮೇಳದಂತೆ ಕಂಗೊಳಿಸಿತು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸುವುದಾಗಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ರೋಡ್ ಶೋ ವೇಳೆ ಹಲವಾರು ಕಲಾವಿದರು ಹನುಮನ ವೇಷ ಧರಿಸಿ, ಕಾಂಗ್ರೆಸ್'ಗೆ ತಿರುಗೇಟು ನೀಡಿದ್ದು ಕಂಡು ಬಂದಿತು.

ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಕಾರ್ಮಿಕರು ಸೇರಿದಂತೆ ಹಲವರು ಮೋದಿಯವರ ರೋಡ್'ಶೋಗೆ ಸಾಕ್ಷಿಯಾಗಿದ್ದು, ಮಕ್ಕಳು ಕೂಡ ಮೋದಿಯವರ ಪೋಸ್ಟರ್ ಮತ್ತು ಪೇಂಟಿಂಗ್‌ಗಳನ್ನು ಹಿಡಿದುಕೊಂಡಿದ್ದು, ರೋಡ್ ಶೋಗೆ ಸಂತಸ ವ್ಯಕ್ತಪಡಿಸಿದರು.

ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ ಧ್ವಜಗಳು ಕಂಡು ಬಂದಿದ್ದು, ಎಲ್ಲೆಡೆ ಕೇಸರಿ ಬಣ್ಣಗಳೇ ರಾರಾಜಿಸುತ್ತಿವೆ. ಪಕ್ಷದ ಸಾವಿರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಕೇಸರಿ ಶಾಲು ಮತ್ತು ಕ್ಯಾಪ್ಗಳನ್ನು ಧರಿಸಿರುವುದು ಕಂಡು ಬಂದಿತು. ರಸ್ತೆಯುದ್ದಕ್ಕೂ ಸಾಂಸ್ಕೃತಿಕ ಕಲಾತಂಡಗಳು ಪ್ರದರ್ಶನ ನೀಡಿದ್ದು, ಇದು ನೋಡುಗರ ಕಣ್ಮನ ಸೆಳೆಯುವಂತೆ ಮಾಡಿತು.

ರಾಜ್ಯದಲ್ಲಿ ಭರ್ಜರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಪ್ರಧಾನಿ ಮೋದಿ

ರೋಡ್ ಶೋ ವೇಳೆ ಮಾತನಾಡಿದ ಮೋದಿಯವರು, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ರೋಡ್‌ಶೋ ಮತ್ತು ಬಿಜೆಪಿ ಸಮಾವೇಶದಲ್ಲಿ ಸೇರುತ್ತಿರುವ ಜನಸ್ತೋಮವು ಪಕ್ಷವು ಮೇಲುಗೈ ಸಾಧಿಸುತ್ತಿದೆ ಎಂಬುದನ್ನು ತೋರಿಸುತ್ತಿದೆ ಎಂದು ಹೇಳಿದರು. ಅಲ್ಲದೆ, 'ಬಜರಂಗ ಬಲಿ ಕೀ ಜೈ' (ಹನುಮಾನ್‌ಗೆ ಜಯವಾಗಲಿ) ಎಂದು ಕೂಗಿದ್ದಾರೆ. ಈದೇ ವೇಳೆ ಕುವೆಂಪು ಅವರ ಕವಿತೆಯ ಸಾಲೊಂದನ್ನೂ ತಿಳಿಸಿದರು.

ಮೇ 10 ರಂದು ರಾಜ್ಯ ವಿಧಾನಸಭಾ ಚನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com