
ಬಳ್ಳಾರಿ: ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಬಿ. ನಾಗೇಂದ್ರ ಅವರಿಗೆ ಕಿಡಿಗೇಡಿಗಳಿಬ್ಬರು ಕತ್ತಿ ತೋರಿಸಿ ಬೆದರಿಕೆ ಹಾಕಿದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿದೆ.
ಕರ್ನಾಟಕ ವಿಧಾನಸಭಾ ಚುಣಾವಣಾ ಫಲಿತಾಂಶ ಹೊರ ಬಿದ್ದ ಶನಿವಾರ ರಾತ್ರಿ 8 ಗಂಟೆಯ ಸಮಯದಲ್ಲಿ ಶಾಸಕ ನಾಗೇಂದ್ರ ಆಪ್ತರೊಬ್ಬರ ಮನೆಗೆ ಹೋಗಿ ವಾಪಸ್ ಬರುವ ಸಂದರ್ಭ ರಸ್ತೆ ಬದಿಯಲ್ಲಿದ್ದ ಇಬ್ಬರು ಕೈಯಲ್ಲಿದ್ದ ಕತ್ತಿ ಝಳಪಿಸಿ ಬೆದರಿಕೆ ಹಾಕಿದ್ದಾರೆಂದು ಹೇಳಲಾಗುತ್ತಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಗೇಂದ್ರ ಬೆಂಬಲಿಗರು ಹಾಗೂ ಕಾಂಗ್ರೆಸ್'ನ ಹಿರಿಯ ಮುಖಂಡರು ಘಟನೆಯನ್ನು ಖಂಡಿಸಿತ್ತು. ಅಲ್ಲದೆ. ಹೊಸದಾಗಿ ಆಯ್ಕೆಯಾದ ಎಲ್ಲಾ ಕಾಂಗ್ರೆಸ್ ಶಾಸಕರಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು.
ನಾಗೇಂದ್ರ ಅವರು ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕ ಬಿ ಶ್ರೀರಾಮುಲು ಅವರನ್ನು ಸುಮಾರು 29,000 ಮತಗಳಿಂದ ಸೋಲಿಸಿದ್ದರು.
ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬಳ್ಳಾರಿಗೆ ನಾಗೇಂದ್ರ ಅವರು ಆಗಮಿಸಿದ್ದರು. ಈ ವೇಳೆ ವೆಂಕಟೇಶ್ ರಾಮಾಂಜೆನೇಯಲು (27), ರಮೇಶ್ ಕೆ (31), ರಮ್ಯಾ (30) ಮತ್ತು ಹನುಮೇಶ್ (29) ಎಂಬ ನಾಲ್ವರು ನಾಗೇಂದ್ರ ಅವರ ಮೇಲೆ ಹಲ್ಲೆಗೆ ಯತ್ನಿಸಿದರು. ಈ ವೇಳೆ ನಾಗೇಂದ್ರ ಅವರ ಭದ್ರತಾಪಡೆಗಳು ರಮ್ಮಾ ಹಾಗೂ ವೆಂಕಟೇಶ್ ಅವರನ್ನು ಹಿಡಿದು, ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದರು. ಆದರೆ, ಇನ್ನಿಬ್ಬರು ರಮೇಶ್ ಹಾಗೂ ಹನುಮೇಶ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದೀಗ ಇಬ್ಬರೂ ತಲೆಮರೆಸಿಕೊಂಡಿದ್ದು, ಇಬ್ಬರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಈ ಮಧ್ಯೆ, ತಲೆಮರೆಸಿಕೊಂಡಿರುವ ಇಬ್ಬರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.
Advertisement