ಜೇನು ಸಾಕಾಣಿಕೆ ಮಾಡುವ ಬುಡಕಟ್ಟು ಕುಟುಂಬಗಳಿಗೆ ನೆರವು: ಯೋಜನೆ ರೂಪಿಸಿ ಜೇನುತುಪ್ಪ ಮಾರಾಟ ಮಾಡಲು ಅರಣ್ಯ ಇಲಾಖೆ ಮುಂದು!
ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯದಲ್ಲಿ ತಯಾರಿಸಲಾದ ಶುದ್ಧ ಜೇನುತುಪ್ಪವನ್ನು ನೇರವಾಗಿ ಜನರ ಕೈಸೇರುವಂತೆ ಮಾಡಲು ಅರಣ್ಯ ಇಲಾಖೆ ಯೋಜನೆಯೊಂದನ್ನು ರೂಪಿಸಿದೆ.
Published: 31st May 2023 01:59 PM | Last Updated: 31st May 2023 05:43 PM | A+A A-

ಫಲಾನುಭವಿಗೆ ಪ್ರಮಾಣಪತ್ರ ಹಸ್ತಾಂತರಿಸುತ್ತಿರುವ ಕಾಳಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ ಮರಿಯಾ ಕ್ರಿಸ್ತು ರಾಜಾ.
ಹುಬ್ಬಳ್ಳಿ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯದಲ್ಲಿ ತಯಾರಿಸಲಾದ ಶುದ್ಧ ಜೇನುತುಪ್ಪವನ್ನು ನೇರವಾಗಿ ಜನರ ಕೈಸೇರುವಂತೆ ಮಾಡಲು ಅರಣ್ಯ ಇಲಾಖೆ ಯೋಜನೆಯೊಂದನ್ನು ರೂಪಿಸಿದೆ.
ಯೋಜನೆ ಮೂಲಕ ಜೇನು ಉತ್ಪಾದನೆಯಲ್ಲಿ ಸ್ಥಳೀಯರನ್ನು ತೊಡಗಿಸಿಕೊಳ್ಳುವ ಅಧಿಕಾರಿಗಳು, ಇನ್ನು ಕೆಲವೇ ತಿಂಗಳುಗಳಲ್ಲಿ ಇಲಾಖೆಯ ಮೂಲಕ ಶುದ್ಧ ಜೇನುತುಪ್ಪವನ್ನು ಮಾರುಕಟ್ಟೆಗೆ ತರುವ ಪ್ರಯತ್ನ ನಡೆಸುತ್ತಿದೆ.
ಯೋಜನೆಯಡಿಯಲ್ಲಿ 60 ಬುಡಕಟ್ಟು ಕುಟುಂಬಗಳನ್ನು ಆಯ್ಕೆ ಮಾಡಿರುವ ಅಧಿಕಾರಿಗಳು, ಈ ಕುಟುಂಬಕ್ಕೆ ಜೇನು ಪೆಟ್ಟಿಗೆ ನೀಡಿದೆ. ಜೇನು ಕೃಷಿಕರು ಮತ್ತು ತೋಟಗಾರಿಕಾ ತಜ್ಞರ ತಂಡವು ಇವರಿಗೆ ಜೇನುಸಾಕಣೆ, ಜೇನು ಉತ್ಪಾದನೆ ಮತ್ತು ಪ್ಯಾಕಿಂಗ್ ಕುರಿತು ತರಬೇತಿಗಳನ್ನು ನೀಡುತ್ತಿದ್ದಾರೆಂದು ತಿಳಿದುಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ಮಧ್ಯಭಾಗದಲ್ಲಿರುವ ಈ ಮೀಸಲು ಪ್ರದೇಶದಲ್ಲಿ ನೂರಾರು ಕುಟುಂಬಗಳು ವಾಸ ಮಾಡುತ್ತಿವೆ. ಇದೊಂದು ಕುಗ್ರಾಮವಾಗಿದ್ದು, ಈ ಕುಗ್ರಾಮಕ್ಕೆ ಆಧುನಿಕ ಪ್ರಪಂಚದ ಸಂಪರ್ಕವಿಲ್ಲದಂತಾಗಿದೆ. ಇಲ್ಲಿ ಉತ್ಪತ್ತಿಯಾಗುವ ಜೇನುತುಪ್ಪವು ವಿಶಿಷ್ಟವಾದ ಔಷಧೀಯ ಗುಣಗಳನ್ನು ಹೊಂದಿದೆ.
ಇದನ್ನೂ ಓದಿ: ನೀವು ಬಳಸುತ್ತಿರುವ ಜೇನುತುಪ್ಪ ಶುದ್ಧವಾಗಿದೆಯೇ..? ಪರೀಕ್ಷಿಸಲು ಬರುತ್ತಿದೆ ಪ್ರಯೋಗಾಲಯಗಳು!
ಇದನ್ನು ಅರಿತ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಇತ್ತೀಚೆಗೆ ಸ್ವಯಂ ಹೆಸರಿನ ಕಾರ್ಯಕ್ರಮವೊಂದನ್ನು ಆರಂಭಿಸಿದ್ದು, ಅದರ ಅಡಿಯಲ್ಲಿ ಜೇನು ಮಾರಾಟ ಯೋಜನೆಯನ್ನೂ ಕೈಗೆತ್ತಿಕೊಳ್ಳಲು ಮುಂದಾಗಿದೆ.
ಯೋಜನೆಯಿಂದಾಗಿ ಬುಡಕಟ್ಟು ಕುಟುಂಬಗಳ ಆದಾಯವನ್ನು ಸುಧಾರಿಸಲಿದೆ ಎಂದು ಕಾಳಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ ಮರಿಯಾ ಕ್ರಿಸ್ತು ರಾಜಾ ಅವರು ಹೇಳಿದ್ದಾರೆ.
ಇಲ್ಲಿ ಬಹುತೇಕ ಬುಡುಕಟ್ಟು ಜನರು ಕಾಡು ಜೇನು ತೆಗೆಯುವುದು, ಜೇನುನೊಣಗಳ ನಿಭಾಯಿಸುವುದು ಹೇಗೆ ಎಂಬುದನ್ನು ತಿಳಿದಿದ್ದಾರೆ. ಈ ಕಾರ್ಯಕ್ರಮವು ಸಮುದಾಯಕ್ಕೆ ಲಾಭಕರವಾಗಿರಲಿದೆ ಎಂದು ತಿಳಿಸಿದ್ದಾರೆ.
ಆಸಕ್ತಿಯುಳ್ಳ ಕುಟುಂಬಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಕುಟುಂಬಗಳಿಗೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ವೃತ್ತಿಪರ ಜೇನುಸಾಕಣೆದಾರರಿಂದ 2 ದಿನಗಳ ಕಾಲ ತರಬೇತಿ ನೀಡಲಾಗಿದೆ. ಈ ಯೋಜನೆ ಯಶಸ್ವಿಯಾಗಿದ್ದೇ ಆದರೆ, ಇತರೆ ಪ್ರದೇಶಗಳಿಗೂ ವಿಸ್ತರಿಸುವ ಚಿಂತನೆಗಳಿವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಳ್ಳಿಯ ಮಕ್ಕಳಿಗೆ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿ: ಈ ಲಾರಿ ಚಾಲಕರ ಶ್ಲಾಘನೀಯ ಸೇವೆ ಇತರರಿಗೂ ಮಾದರಿ!
ಡಿಗ್ಗಿ, ಕುಂಬಾರವಾಡ ಮತ್ತು ಅಣಶಿ ಎಂಬ ಪ್ರದೇಶದಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಯೋಜನೆಯಿಂದಾಗಿ ಮುಂದಿನ ದಿನಗಳಲ್ಲಿ ಜೇನು ಸಾಕಾಣಿಕೆಗೆ ಕುಟುಂಬಗಳು ಮತ್ತಷ್ಟು ಜೇನು ಪೆಟ್ಟಿಗೆಗಳನ್ನು ಖರೀಸಲು ಸಾಧ್ಯವಾಗಲಿದೆ. ಜೇನುತುಪ್ಪ ಉತ್ಪಾದಕರಿಗೆ ಗರಿಷ್ಠ ಲಾಭವನ್ನು ನೀಡಲಾಗುವುದು, ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಮೇಲ್ವಿಚಾರಣೆಯನ್ನು ಮಾಡಲಾಗುವುದು ಎಂದು ತೋಟಗಾರಿಕಾ ಇಲಾಖೆಯ ತರಬೇತುದಾರರು ಮಾಹಿತಿ ನೀಡಿದ್ದಾರೆ.