ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಮಾಜಿ ಪ್ರಿಯಕರ ಹಲ್ಲೆ: ದೂರು ದಾಖಲು

ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿನಿಯೊಬ್ಬಳ ಮೇಲೆ ಆಕೆಯ ಮಾಜಿ ಪ್ರಿಯಕರ ಹಲ್ಲೆ ನಡೆಸಿರುವ ಘಟನೆಯೊಂದು ಕೆಂಗೇರಿ ಬಳಿ ಮಂಗಳವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿನಿಯೊಬ್ಬಳ ಮೇಲೆ ಆಕೆಯ ಮಾಜಿ ಪ್ರಿಯಕರ ಹಲ್ಲೆ ನಡೆಸಿರುವ ಘಟನೆಯೊಂದು ಕೆಂಗೇರಿ ಬಳಿ ಮಂಗಳವಾರ ನಡೆದಿದೆ.

ತರಗತಿಗೆ ಹಾಜರಾದ ಬಳಿಕ ಕಾಲೇಜಿನಿಂದ ಯುವತಿ ಹೊರ ಬರುತ್ತಿದ್ದ ವೇಳೆ ಎದುರಿಗೆ ಬಂದಿರುವ ಮಾಜಿ ಪ್ರಿಯಕರ, ಇದ್ದಕ್ಕಿದ್ದಂತೆಯ ಜಗಳಕ್ಕಿಳಿದಿದ್ದಾನೆ. ಬಳಿಕ ಆಕೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಈ ವೇಳೆ ಪರಿಚಯಸ್ಥರು ಆಕೆಯನ್ನು ರಕ್ಷಣೆ ಮಾಡಿದ್ದು, ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಲ್ಲೆ ನಡೆಸಿದ ವ್ಯಕ್ತಿಯನ್ನು ನರೇಶ್ ಎಂದು ಗುರ್ತಿಸಲಾಗಿದೆ. ನರೇಶ್ ಹಾಗೂ ವಿದ್ಯಾರ್ಥಿನಿ ಒಂದೆರಡು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಇಬ್ಬರು ದೂರಾಗಿದ್ದರು. ಆದರೆ, ಯುವತಿಗೆ ಪದೇ ಪದೇ ದೂರವಾಣಿ ಕರೆ ಮಾಡುತ್ತಿದ್ದ ನರೇಶ್, ಬೆದರಿಕೆ ಹಾಕುತ್ತಿದ್ದ.

ನರೇಶ್ ಮೈಸೂರು ರಸ್ತೆಯಲ್ಲಿರುವ ವಂಡರ್ ಲಾ ವಾಟರ್ ಅಮ್ಯೂಸ್‌ಮೆಂಟ್ ಪಾರ್ಕ್‌ನ ಟಿಕೆಟ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದು, ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸವಿದ್ದಾನೆ. ವಿದ್ಯಾರ್ಥಿನಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಯುವತಿಗೆ ಪದೇ ಪದೇ ದೂರವಾಣಿ ಕರೆ, ಸಂದೇಶಗಳನ್ನು ಕಳುಹಿಸುತ್ತಿದ್ದ. ಅದಾವುದಕ್ಕೂ ಯುವತಿ ಪ್ರತಿಕ್ರಿಯೆ ನೀಡದಿರುವುದು, ಆತನಿಗೆ ಕೋಪವನ್ನು ತರಿಸಿದೆ.

ಮಂಗಳವಾರ ಕೂಡ ನರೇಶ್, ಯುವತಿಗೆ ದೂರವಾಣಿ ಕರೆ ಮಾಡಿದ್ದಾನೆ. ಸಂದೇಶಗಳನ್ನೂ ರವಾನಿಸಿದ್ದಾನೆ. ಇದಕ್ಕೆ ಉತ್ತರಿಸದಿದ್ದಾಗ ಕಾಲೇಜು ಬಳಿ ತೆರಳಿ, ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆಂದು ಪೊಲೀಸರು ಹೇಳಿದ್ದಾರೆ.

ನರೇಶ್ ಆಂಧ್ರಪ್ರದೇಶದ ಮೂಲದವನಾಗಿದ್ದು, ಆತ ಕೆಲಸ ಮಾಡುವ ಅಮ್ಯೂಸ್‌ಮೆಂಟ್ ಪಾರ್ಕ್ ಬಳಿಯೇ ಇದ್ದಾನೆ. ಇದೀಗ ನನ್ನ ಮಗಳು ಚೇತರಿಸಿಕೊಳ್ಳುತ್ತಿದ್ದಾಳೆ. ಆದರೆ, ಆಘಾತಕ್ಕೊಳಗಾಗಿದ್ದಾಳೆ. ಆರೋಪಿ ಮಗಳು ಕಾಲೇಜಿನಿಂದ ಹೊರಬರುತ್ತಿರುವುದನ್ನೇ ಕಾಯುತ್ತಿದ್ದ. ಆಕೆ ಕಂಡ ಕೂಡಲೇ ಮುಖ ಹಾಗೂ ತಲೆಗೆ ಗುದ್ದಿದ್ದಾನೆ. ಮೊಬೈಲ್ ಕಸಿದು, ಒಡೆದು ಹಾಕಿದ್ದಾನೆಂದು ಯುವತಿಯ ಪೋಷಕರು ಹೇಳಿದ್ದಾರೆ.

ಇದೀಗ ನರೇಶ್ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com