
ಬೆಂಗಳೂರು: ನಗರದ ಲುಲು ಮಾಲ್‌ನಲ್ಲಿ ನಡೆದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಶಾಲಾ ಮುಖ್ಯೋಪಾಧ್ಯಾಯರೊಬ್ಬರು ಪೊಲೀಸರ ಮುಂದೆ ಶರಣಾಗಿದ್ದಾರೆ.
ಪೊಲೀಸರ ಪ್ರಕಾರ, ಅಶ್ವತ್ಥ್ ನಾರಾಯಣ (60) ಮಾಲ್‌ಗಳಲ್ಲಿ ಯುವತಿಯರು ಮತ್ತು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಮಾಲ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಆರೋಪಿ ಹಲವಾರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅವರು ವಾರಾಂತ್ಯವನ್ನು ಮಾಲ್‌ನಲ್ಲಿ ಕಳೆಯುತ್ತಿದ್ದರು ಮತ್ತು ಜನಸಂದಣಿ ವೇಳೆ ಮಹಿಳೆಯರು ಮತ್ತು ಯುವತಿಯರನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದರು.
ಆರೋಪಿ ಮುಖ್ಯೋಪಾಧ್ಯಾಯರು ಇತರೆ ಮಾಲ್‌ಗಳಲ್ಲೂ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ಮಾಲ್‌ನಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದರು.
ಕಿಕ್ಕಿರಿದ ಮಾಲ್‌ನಲ್ಲಿನ ಗೇಮ್ಸ್ ಝೋನ್ ಬಳಿ ಆರೋಪಿ ಉದ್ದೇಶಪೂರ್ವಕವಾಗಿ ಯುವತಿಯ ಹಿಂಬದಿಯನ್ನು ಸ್ಪರ್ಶಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ದುಷ್ಕೃತ್ಯದ ನಂತರ ಸಂತ್ರಸ್ತೆ ಪ್ರತಿಭಟಿಸಿಲ್ಲ.
ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಪ್‌ಲೋಡ್ ಮಾಡಿದವರು ಪ್ರಸಿದ್ಧ ಲುಲು ಮಾಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
'ಈ ಘಟನೆಯನ್ನು ಇಂದು ಸಂಜೆ 6.30 ರ ಸುಮಾರಿಗೆ ಬೆಂಗಳೂರಿನ ಲುಲು ಮಾಲ್ ಫಂಟುರಾದಲ್ಲಿ ರೆಕಾರ್ಡ್ ಮಾಡಲಾಗಿದೆ. ವಿಡಿಯೋದಲ್ಲಿರುವ ಈ ವ್ಯಕ್ತಿ ಇಲ್ಲಿ ಸುತ್ತಮುತ್ತಲಿನ ಮಹಿಳೆಯರು ಮತ್ತು ಹುಡುಗಿಯರಿಗೆ ಹೀಗೆ ಕಿರುಕುಳ ನೀಡುತ್ತಿದ್ದಾನೆ. 'ಮೊದಲಿಗೆ ಆತನನ್ನು ನೋಡಿದಾಗ ನನಗೆ ಅನುಮಾನ ಬಂದಿತು. ಆತನನ್ನು ಹಿಂಬಾಲಿಸಿ, ಈ ವಿಡಿಯೋ ರೆಕಾರ್ಡ್ ಮಾಡಿದೆ. ಈ ಬಗ್ಗೆ ಸೆಕ್ಯೂರಿಟಿಗೆ ತೆರಳಿ ದೂರು ನೀಡಿದ್ದು, ಆತನನ್ನು ಹುಡುಕಿದರೂ, ವಿಫಲವಾಯಿತು. ಈ ಬಗ್ಗೆ ಮಾಲ್ ಆಡಳಿತ ಮತ್ತು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಅಂತಹ ಜನರಿಗೆ ನಾಚಿಕೆಯಾಗಬೇಕು' ಎಂದು ಬರೆದುಕೊಂಡಿದ್ದಾರೆ.
Advertisement