ಲೂಟಿಗಾಗಿ ಸಿಎಂ-ಡಿಸಿಎಂ ನಡುವೆ ಪೈಪೋಟಿ; ತಾನೆಷ್ಟು ದಿನ ಸಿಎಂ ಎಂಬುದು ಸಿದ್ದುಗೇ ಗೊತ್ತಿಲ್ಲ: ಸಂಚಲನ ಮೂಡಿಸಿದ ಪ್ರಧಾನಿ ಹೇಳಿಕೆ

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಹಾಳಾಗಿದ್ದು, ತಾವು ಎಷ್ಟು ದಿನ ರಾಜ್ಯದ ಮುಖ್ಯಮಂತ್ರಿಯಾಗಿರುತ್ತೇನೆ ಎಂಬುದು ಸಿದ್ದರಾಮಯ್ಯ ಅವರಿಗೆ ತಿಳಿಯದಂತಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿರುವ ಹೇಳಿಕೆಯೊಂದು ಭಾರೀ ಸಂಚನ ಮೂಡಿಸಿದೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಖಂಡ್ವಾ/ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಹಾಳಾಗಿದ್ದು, ತಾವು ಎಷ್ಟು ದಿನ ರಾಜ್ಯದ ಮುಖ್ಯಮಂತ್ರಿಯಾಗಿರುತ್ತೇನೆ ಎಂಬುದು ಸಿದ್ದರಾಮಯ್ಯ ಅವರಿಗೆ ತಿಳಿಯದಂತಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿರುವ ಹೇಳಿಕೆಯೊಂದು ಭಾರೀ ಸಂಚನ ಮೂಡಿಸಿದೆ.

ಮಧ್ಯಪ್ರದೇಶದ ಖಂಡವಾದಲ್ಲಿ ಭಾನುವಾರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೇವಲ ಆರು ತಿಂಗಳ ಹಿಂದೆ ರಚನೆಯಾದ ಕಾಂಗ್ರೆಸ್ ಸರ್ಕಾರವನ್ನು ನೋಡಿದರೆ ಎಲ್ಲವೂ ಗೊತ್ತಾಗುತ್ತದೆ. ಸಿಎಂ ಸಿದ್ದರಾಮಯ್ಯ ಎಷ್ಟು ದಿನ ರಾಜ್ಯಭಾರ ನಡೆಸುತ್ತಾರೋ ಎಂದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿಯ ಮುಂದುವರಿಕೆ ಬಗ್ಗೆಯೇ ಗೊಂದಲಗಳು ಎದ್ದಿದ್ದು, ಅಭಿವೃದ್ಧಿ ಕುಂಠಿತಗೊಂಡಿದೆ. ಅಧಿಕಾರ ಹಿಡಿದಿರುವ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಭಾಗಿಯಾದ್ದರಿಂದ ಕರ್ನಾಟಕವನ್ನು ಅವರು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಪಕ್ಷ ಎಡವಟ್ಟಿನಿಂದ ಯಾವಾಗೆಲ್ಲಾ ಸರ್ಕಾರ ರಚನೆ ಮಾಡುತ್ತದೋ, ಆಗೆಲ್ಲಾ ಅಧಿಕಾರಕ್ಕೇರಿದ ರಾಜ್ಯವನ್ನು ಲೂಟಿ ಮಾಡಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವೆ ಪೈಪೋಟಿ ಏರ್ಪಡುತ್ತದೆ. ಅಂತಹ ಸುದ್ದಿ ಇದೀಗ ಕರ್ನಾಟಕದಿಂದ ಬರುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಬಿಜೆಪಿ ನಾಯಕರು ಮೊದಲಿನಿಂದಲೂ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಇರಲ್ಲ ಎಂದು ಹೇಳುತ್ತಾ ಬರುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಖುದ್ದು ಪ್ರಧಾನಿ ಮೋದಿ ಅವರೇ ಸಿದರಾಮಯ್ಯ ಮುಖ್ಯಮಂತ್ರಿ ಹುದ್ದೆ ಕುರಿತು ಮಾತನಾಡಿರುವುದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ.

ಕಾಂಗ್ರೆಸ್​ನಲ್ಲಿ ಸಿಎಂ ಅಧಿಕಾರ ಹಂಚಿಕೆ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣಗಳ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಇದರ ಮಧ್ಯೆ ಹಿರಿಯ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆ. ಇವೆಲ್ಲದರ ಮಧ್ಯೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಅಂದರೆ ಜೆಡಿಎಸ್ ಶಾಸಕರು ಬೆಂಬಲ ಕೊಡಲಿದ್ದಾರೆ ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ. ಈ ಮೂಲಕ ಕಾಂಗ್ರೆಸ್​ ಅನ್ನು ಒಡೆಯು ಅಸ್ತ್ರ ಪ್ರಯೋಗಿಸಿದ್ದಾರೆ.

ಇತ್ತ ಬಿಜೆಪಿ ನಾಯಕರು ಹಾಗೂ ಪ್ರಧಾನಿ ಮೋದಿ ಅವರ ಈ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಲೋಕಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸರ್ಕಾರ ಪತನವಾಗುತ್ತಾ? ಮಹಾರಾಷ್ಟ್ರದ ರೀತಿಯ ರಾಜಕೀಯ ಬೆಳವಣಿಗೆಗಳು ಕರ್ನಾಟಕದಲ್ಲಿ ಆಗಲಿದೆಯೇ? ಅಥವಾ ರಾಷ್ಟ್ರಪತಿ ಆಡಳಿ ಬರುತ್ತದೆಯೇ? ಎಂಬ ಹಲವು ಪ್ರಶ್ನೆಗಳು ಮೂಡತೊಡಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com