

ಬೆಂಗಳೂರು: ಜನಸಾಮಾನ್ಯರ ಉನ್ನತಿ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ .ಕೆಪಿಸಿಸಿ ಕಚೇರಿಯಲ್ಲಿ ನಡೆದ ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಅವರ 134ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿಕೆ ಶಿವಕುಮಾರ್, ನಾವು ಒಂದು ಟ್ರೆಂಡ್ ಸೃಷ್ಟಿಸಿದ್ದೇವೆ. ಜನ ಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಬದಲಾಯಿಸುತ್ತಿದ್ದೇವೆ. ಎಲ್ಲಾರಿಗೂ ಸಹಾಯ ಮಾಡುತ್ತಿದ್ದೇವೆ. ಇದೇ ಕಾಂಗ್ರೆಸ್ ಸರ್ಕಾರದ ಶಕ್ತಿ ಎಂದರು.
ಭಾರತದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಅವರು ಇಡೀ ದೇಶದ ಸಾಮಾಜಿಕ , ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಅಡಿಪಾಯ ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಮಕ್ಕಳೇ ಈ ದೇಶದ ಭವಿಷ್ಯ ಎಂದು ನಂಬಿದ್ದ ನೆಹರು ಅವರು ಮಕ್ಕಳ ಹಕ್ಕುಗಳಿಗಾಗಿ ಶ್ರಮಿಸಿ, ಪ್ರತಿ ಮಗುವೂ ತನ್ನ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು, ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುವ ಅವಕಾಶವನ್ನು ರೂಪಿಸಿದರು. ನೆಹರು ಅವರ ದೂರದರ್ಶಿತ್ವ, ಪ್ರಗತಿಪರ ಚಿಂತನೆಗಳು ಇಂದಿನ ಯುವ ನಾಯಕರಿಗೆ ಮಾದರಿಯಾಗಿದೆ. ದೇಶಕ್ಕಾಗಿ ಅವರು ಮಾಡಿದ ತ್ಯಾಗ , ಸಮರ್ಪಣೆಯನ್ನು ಸ್ಮರಿಸುತ್ತಾ, ಅವರು ಹಾಕಿಕೊಟ್ಟ ಹಾದಿಯಲ್ಲೇ ನಾವೆಲ್ಲಾ ಸಾಗೋಣ ಎಂದು ತಿಳಿಸಿದರು.
ಇದಕ್ಕೂ ಮುನ್ನಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಜವಹರಲ್ ನೆಹರು ಅವರಿಗೆ ಗೌರವ ನಮನ ಸಲ್ಲಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಭಾರತವನ್ನು ಶೂನ್ಯದಿಂದ ಉತ್ತುಂಗಕ್ಕೆ ಕೊಂಡೊಯ್ದ, ಆಧುನಿಕ ಭಾರತದ ಸೃಷ್ಟಿಕರ್ತ, ಪ್ರಜಾಪ್ರಭುತ್ವದ ನಿರ್ಭೀತ ಕಾವಲುಗಾರ ಮತ್ತು ನಮ್ಮ ಸ್ಫೂರ್ತಿಯ ಮೂಲ ಪಂಡಿತ್ ಜವಾಹರಲಾಲ್ ನೆಹರು ಎಂದು ಬಣ್ಣಿಸಿದರು.