ವಾಯು ಗುಣಮಟ್ಟ ಹೆಚ್ಚಳಕ್ಕೆ ನಗರದಲ್ಲಿ 'ಹವಾಮಾನ ಕ್ರಿಯಾ ಯೋಜನೆ' ಜಾರಿ: ಡಿಕೆ.ಶಿವಕುಮಾರ್

ಬೆಂಗಳೂರು ಹವಾಮಾನ ಕ್ರಿಯಾ ಯೋಜನೆ ಅನುಷ್ಠಾನಕ್ಕೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹಸಿರು ನಿಶಾನೆ ತೋರಿದ್ದಾರೆ.
ಸಭೆ ನಡೆಸುತ್ತಿರುವ ಡಿಕೆ.ಶಿವಕುಮಾರ್.
ಸಭೆ ನಡೆಸುತ್ತಿರುವ ಡಿಕೆ.ಶಿವಕುಮಾರ್.

ಬೆಂಗಳೂರು: ಬೆಂಗಳೂರು ಹವಾಮಾನ ಕ್ರಿಯಾ ಯೋಜನೆ ಅನುಷ್ಠಾನಕ್ಕೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹಸಿರು ನಿಶಾನೆ ತೋರಿದ್ದಾರೆ.

ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ (ಡಬ್ಲ್ಯುಆರ್‌ಐ) ಇಂಡಿಯಾ ಮತ್ತು ಸಿ 40 ಗ್ರೂಪ್‌ನೊಂದಿಗೆ ನಗರಾಭಿವೃದ್ಧಿ ಇಲಾಖೆಯ ಉಪ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರೊಂದಿಗೆ ಬುಧವಾರ ನಡೆಸಲಾದ ಸಭೆಯಲ್ಲಿ ಈ ಕುರಿತ ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಗಳೂರು ಸೇರಿದಂತೆ ಮುಂಬೈ, ದೆಹಲಿ, ಚೆನ್ನೈ, ಕೋಲ್ಕತಾ, ಅಹಮದಾಬಾದ್ ನಗರಗಳಲ್ಲಿ ಹವಾಮಾನ ವೈಪರೀತ್ಯ ತಡೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಅದರಲ್ಲಿ ಕೆಲವು ನಗರಗಳು ಈಗಾಗಲೇ ಕ್ರಿಯಾ ಯೋಜನೆಗಳ ಅನುಷ್ಠಾನಕ್ಕೂ ಮುಂದಾಗಿವೆ. ಇದೀಗ ಬೆಂಗಳೂರಿನಲ್ಲಿಯೂ ಹವಾಮಾನ ಕ್ರಿಯಾ ಯೋಜನೆ ಅಂತಿಮಗೊಂಡಿದ್ದು, ಅದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ಹೇಳಿದರು.

ಕ್ರಿಯಾ ಯೋಜನೆಯಲ್ಲಿರುವಂತೆ ಗ್ರೀನ್ ಹೌಸ್ ಗ್ಯಾಸ್ (ತಾಪಮಾನ ಬದಲಾವಣೆಗೆ ಕಾರಣವಾಗುವ ಅನಿಲಗಳು) ಪ್ರಮಾಣದ ಇನ್ವೆಂಟರಿ ಸಿದ್ಧಪಡಿಸುವುದು ಹಾಗೂ ಅದನ್ನು ಕಡಿಮೆ ಮಾಡುವುದಕ್ಕೆ ತಕ್ಕಂತೆ ಯೋಜನೆಗಳನ್ನು ಅನುಷ್ಠಾನಗೊಳಿಸುವುದು. ಇದಕ್ಕಾಗಿ ಕಳೆದ 30 ವರ್ಷಗಳ ಹವಾಮಾನದ ಅಂಕಿಅಂಶಗಳನ್ನು ವಿಶ್ಲೇಷಿಸಲಾಗುತ್ತದೆ. ಜೊತೆಗೆ ಬೆಂಗಳೂರಿನ ಹವಾಮಾನಕ್ಕೆ ಸಂಬಂಧಿಸಿದಂತೆ ತಾಪಮಾನ, ಪ್ರವಾಹ ಪರಿಸ್ಥಿತಿ, ನೀರಿನ ಅಭಾವ ಉಂಟಾಗುವುದು, ವಾಯು ಮಾಲಿನ್ಯ ಸೇರಿದಂತೆ ಇನ್ನಿತರ ವಿಷಯಗಳನ್ನು ಕಾಲಕಾಲಕ್ಕೆ ವಿಶ್ಲೇಷಿಸಬೇಕು. ಅಲ್ಲದೆ, 2030, 2040 ಹಾಗೂ 2050 ಹೀಗೆ ಪ್ರತಿ 10 ವರ್ಷಕ್ಕೊಂದು ಗುರಿ ನಿಗದಿ ಮಾಡಿ, ಹವಾಮಾನ ಬದಲಾವಣೆಯನ್ನು ತಡೆಯಲು ಯೋಜನೆಗಳನ್ನು ರೂಪಿಸಬೇಕು.

ಹಾಗೆಯೇ ಕಟ್ಟಡಗಳು, ಸಾರಿಗೆ, ಘನತ್ಯಾಜ್ಯ ನಿರ್ವಹಣೆ, ವಾಯು ಗುಣಮಟ್ಟ, ನೀರು, ತ್ಯಾಜ್ಯ ನೀರು ಮತ್ತು ಮಳೆ ನೀರು ನಿರ್ವಹಣೆ, ನಗರ ಯೋಜನೆ, ಹಸಿರೀಕರಣ, ಜೀವವೈವಿಧ್ಯ ಸಂರಕ್ಷಣೆ, ನೈಸರ್ಗಿಕ ವಿಪತ್ತು ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವ ಬಗ್ಗೆ ಕ್ರಿಯಾ ಯೋಜನೆಯಲ್ಲಿ ತಿಳಿಸಲಾಗಿದೆ ಅಧಿಕಾರಿಗಳು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com