ಹುಟ್ಟುಹಬ್ಬ ಸಂಭ್ರಮದಲ್ಲಿ ವಿದ್ಯುತ್'ಗೆ ಬಲೂನ್ ತಗುಲಿ ಸ್ಫೋಟ: ಐವರಿಗೆ ಗಾಯ
ಮಗುವಿನ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ತರಲಾಗಿದ್ದ ಹೀಲಿಯಂ ಬಲೂನ್ ಗಳು ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಗುಲಿ ಸ್ಫೋಟಗೊಂಡು ಅಗ್ನಿ ಅವಘಟ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಮಕ್ಕಳು ಸೇರಿ ಐವರು ಗಾಯಗೊಂಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Published: 02nd October 2023 11:26 AM | Last Updated: 02nd October 2023 01:32 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮಗುವಿನ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ತರಲಾಗಿದ್ದ ಹೀಲಿಯಂ ಬಲೂನ್ ಗಳು ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಗುಲಿ ಸ್ಫೋಟಗೊಂಡು ಅಗ್ನಿ ಅವಘಟ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಮಕ್ಕಳು ಸೇರಿ ಐವರು ಗಾಯಗೊಂಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೆಚ್ಎಎಲ್ ಉದ್ಯೋಗಿ ವಿಜಯ್ ಆದಿತ್ಯಕುಮಾರ್ (44), ಪುತ್ರರಾದ ಧ್ಯಾನಚಂದ್ (7), ಸೋಹಿಲ್ ಕುಮಾರ್ (3), ನೆರೆ ಮನೆಯ ಮಕ್ಕಳಾದ ಇಶಾನ್ (2), ಸಂಜಯ್ (8) ಗಾಯಗೊಂಡವರು. ಸದ್ಯ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಖಾಸಗಿ ಕ್ಷಣಗಳ ಫೋಟೋ, ವಿಡಿಯೋ ಬಳಸಿ ಬ್ಲ್ಯಾಕ್ ಮೇಲ್: ಮನೆಗೆ ಕರೆಸಿ ಚಾಕುವಿನಿಂದ ಹಲ್ಲೆ
ಹೆಚ್ಎಎಲ್ ಉದ್ಯೋಗಿಯೊಬ್ಬರ ಒಂದು ವರ್ಷದ ಮಗುವಿನ ಹುಟ್ಟುಹಬ್ಬ ಆಚರಣೆಯಲ್ಲಿ ವಿಜಯ್ ಆದಿತ್ಯಕುಮಾರ್ ಹಾಗೂ ಅವರ ಇಬ್ಬರು ಮಕ್ಕಳು ಹಾಗೂ ನೆರೆ ಮನೆಯ ಮಕ್ಕಳು ಭಾಗಿಯಾಗಿದ್ದರು. ಸಂಭ್ರಮಾಚರಣೆಗೆಂದು ತಂದಿದ್ದ ಹೀಲಿಯಂ ಬಲೂನ್ ಗಳನ್ನು ಹಿಡಿದುಕೊಂಡು ವಿಜಯ್ ಆದಿತ್ಯ ಅವರು ಮನೆಯ ತಾರಸಿಗೆ ತೆರಳುತ್ತಿದ್ದರು.
ಈ ವೇಳೆ ಮಕ್ಕಳು ಬಲೂನ್ ಪಡೆದುಕೊಳ್ಳಲು ಅವರ ಹಿಂದೆ ಹೋಗಿದ್ದರು. ಈ ವೇಳೆ ಮನೆ ಮುಂದೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಬಲೂನ್ ಗಳು ತಾಕಿ ಸ್ಫೋಟಗೊಂಡು ಬೆಂಕಿ ಹೊತ್ತುಕೊಂಡ ಪರಿಣಾಮ ನಾಲ್ವರು ಮಕ್ಕಳು ಹಾಗೂ ವಿಜಯ್ ಆದಿತ್ಯ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.