ಕೆಎಸ್ಆರ್​ಟಿಸಿ ಪಲ್ಲಕ್ಕಿ ಬಸ್'ಗಳಿಗೆ ಸಿಎಂ ಸಿದ್ದರಾಮಯ್ಯ, ಡಿಕೆ.ಶಿವಕುಮಾರ್ ಚಾಲನೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ 100 ನೂತನ ಕರ್ನಾಟಕ ಸಾರಿಗೆ, 40 ಹವಾ ನಿಯಂತ್ರಣ ರಹಿತ ಹಾಗೂ 4 ಎಸಿ ಅತ್ಯಾಧುನಿಕ ಸ್ಲೀಪರ್ ಬಸ್ಸುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಚಾಲನೆ ನೀಡಿದರು.
ಪಲ್ಲಕ್ಕಿ ಬಸ್'ಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ.ಶಿವಕುಮಾರ್.
ಪಲ್ಲಕ್ಕಿ ಬಸ್'ಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ.ಶಿವಕುಮಾರ್.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ 100 ನೂತನ ಕರ್ನಾಟಕ ಸಾರಿಗೆ, 40 ಹವಾ ನಿಯಂತ್ರಣ ರಹಿತ ಹಾಗೂ 4 ಎಸಿ ಅತ್ಯಾಧುನಿಕ ಸ್ಲೀಪರ್ ಬಸ್ಸುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಚಾಲನೆ ನೀಡಿದರು.

ವಿಧಾನಸೌಧದ ಪೂರ್ವದ್ವಾರ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ಬೆಳಗ್ಗೆ 10ಗಂಟೆಗೆ ಸಂಸ್ಥೆ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬಸ್ ಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು. ನೂತನ ಬಸ್ ಗಳಿಗೆ ಚಾಲನೆ ನೀಡಿದ ಬಳಿಕ ಮುಖ್ಯಮಂತ್ರಿಗಳು ಮೈಸೂರಿನತ್ತ ಪ್ರಯಾಣಿಸಿದರು.

ಈ ನಡುವೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸಂಪುಟ ಸಹೋದ್ಯೋಗಿಗಳೊಂದಿಗೆ ಬಸ್ ಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಚಿವರಾದ ಮುನಿಯಪ್ಪ, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ ಹಾಗೂ ಸಾರಿಗೆ ಅಧಿಕಾರಿಗಳು ಹಾಜರಿದ್ದರು.

ಬಸ್ ಬಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಶಕ್ತಿ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಹೆಣ್ಣುಮಕ್ಕಳ ಸಬಲೀಕರಣ ಇದರ ಉದ್ದೇಶವಾಗಿದೆ. ಈತನಕ ಯೋಜನೆ ಜಾರಿಯಾಗಿ 72 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಬಸ್ನಲ್ಲಿ ಸಂಚರಿಸಿದ್ದಾರೆ. ಕಳೆದ ಏಳೆಂಟು ವರ್ಷದಿಂದ ಸಾರಿಗೆ ನಿಗಮಗಳಲ್ಲಿ ಟಿಕೆಟ್ ಬೆಲೆ ಏರಿಕೆ ಮಾಡಿಲ್ಲ ಎಂದು ಹೇಳಿದರು,

ಮೈಸೂರಿಗೆ ಹೋಗುವಾಗ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸಿ ಸಮಾಜದ ಸಾಮಾನ್ಯ ಜನರು ಹೇಗೆ ಸಂಚರಿಸುತ್ತಾರೆ ಎಂಬ ಅನುಭವ ಪಡೆದುಕೊಳ್ಳಲು ನನ್ನ ಪತ್ನಿಗೂ ಸಲಹೆ ನೀಡಿದ್ದೇನೆ. ನಾನು ಕೂಡ ಹಿಂದೆ ಶಾಸಕನಾಗಿದ್ದಾಗ ರಾಮಲಿಂಗಾರೆಡ್ಡಿ ಅವರ ಜೊತೆ ಬೆಂಗಳೂರಿಗೆ ಶಾಸಕರಿಗೆ ಮೀಸಲಾದ ಸೀಟಲ್ಲಿ ಕೂತು ಬಸ್ ನಲ್ಲಿ ಪ್ರಯಾಣಿಸಿದ್ದಿದೆ ಎಂದು ಸ್ಮರಿಸಿದರು.

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಮಾತನಾಡಿ, ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ 24,000 ಬಸ್ ಗಳು ಸಂಚರಿಸುತ್ತಿವೆ. ಪ್ರತಿ ವರ್ಷ ಶೇಕಡಾ 10ರಷ್ಟು ಬಸ್ ಗಳು ಗುಜರಿಗೆ ಸೇರ್ತೀವೆ. ನಾಲ್ಕೂ ನಿಗಮಗಳಲ್ಲಿ ಹಲವು ವರ್ಷಗಳಿಂದ ನೇಮಕಾತಿ ಆಗಿಲ್ಲ. ಕಳೆದ 6 ವರ್ಷದಿಂದ ಹೊಸ ಬಸ್ ಖರೀದಿ ಮಾಡಿರಲಿಲ್ಲ. ಇನ್ನೊಂದು ವರ್ಷದಲ್ಲಿ 1,000 ಬಸ್ ಗಳು ನಿಗಮಗಳಿಗೆ ಸೇರ್ಪಡೆಯಾಗಲಿವೆ. ಬಾಕಿ ಇರುವ ನೇಮಕಾತಿಯೂ ಆಗಲಿದೆ. ಜನಸಂಖ್ಯೆಗೆ ಅನುಗುಣವಾಗಿ ಬಸ್ ಗಳು ಇಲ್ಲ, ಕೊರತೆ ಇದೆ. ಜನಸಂಖ್ಯೆಗೆ ಅನುಗುಣವಾಗಿ 12,000 ಬಸ್ ಗಳ ಅಗತ್ಯವಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 2 ಕೋಟಿ ಜನಸಂಖ್ಯೆ ಇದೆ. ಆ ಜನಸಂಖ್ಯೆಗೆ ಅನುಗುಣವಾಗಿ ಬಸ್ ಗಳನ್ನು ಒದಗಿಸುತ್ತೇವೆ ಎಂದರು.

ನಾನ್ ಎಸಿ ಸ್ಲೀಪರ್ ಬಸ್ ಗಳಿಗೆ ಬೇಡಿಕೆ ಇತ್ತು. ಹಾಗಾಗಿ, ಇವತ್ತು ವಿನೂತನ ಮಾದರಿಯ ನಾನ್ ಎಸಿ ಬಸ್ ಗಳಿಗೆ ಚಾಲನೆ ನೀಡಲಾಗಿದೆ. 100 ಹೊಸ ನಾನ್ ಎಸಿ ಬಸ್ ಗಳು ಕೆ ಎಸ್ ಆರ್ ಟಿಸಿಗೆ ಸೇರ್ಪಡೆಯಾಗಿವೆ ಎಂದು ತಿಳಿಸಿದರು.

ಇಂದು ಒಟ್ಟು 148 ಹೊಸ ಬಸ್​ಗಳಿಗೆ ಚಾಲನೆ ನೀಡಲಾಗಿದ್ದು, ಈ ಪೈಕಿ 44 ಎಸಿ ಸ್ಲೀಪರ್ ಮತ್ತು ನಾಲ್ಕು ನಾನ್ ಎಸಿ ಸ್ಪೀಪರ್ ಬಸ್​ಗಳು ಒಳಗೊಂಡಿವೆ. ಆದರೆ, ಸ್ಲೀಪರ್ ಬಸ್​ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. 40 ನಾನ್ ಎಸಿ ಸ್ಲೀಪರ್ ಹಾಗೂ 100 ನಗರ ಸಾರಿಗೆ ಬಸ್ಸುಗಳು, ಅಶೋಕ ಲೇಲ್ಯಾಂಡ್ ಕಂಪನಿಗೆ ಸೇರಿದ್ದು, ನಾಲ್ಕು ನಾನ್ ಎಸಿ ಸ್ಲೀಪರ್, ನಾಲ್ಕು ಎಸಿ ಸ್ಲೀಪರ್ ಬಸ್​ಗಳು ಟಾಟಾ ಕಂಪನಿಯದ್ದಾಗಿವೆ.

ಪಲ್ಲಕ್ಕಿ ಬಸ್​'ಗಳ ವಿಶೇಷತೆ ಇಂತಿದೆ...

  • 3 ಮೀಟರ್ ಉದ್ದದ ನಾನ್ ಎಸಿ ಬಸ್
  • ಬಿಎಸ್-6 ತಂತ್ರಜ್ಞಾನದ ಮಾದರಿಯ ಹೆಚ್.ಪಿ. ಇಂಜಿನ್
  • ಹೈಟೆಕ್ ವಿನ್ಯಾಸದ 30 ಸ್ಲೀಪರ್ ಬರ್ತ್ ಸೀಟ್​ಗಳು
  • ಪ್ರತಿ ಸೀಟಿಗೆ ಮೊಬೈಲ್ ಹಾಗೂ ಲ್ಯಾಪ್ ಟಾಪ್​ಗಳ ಚಾರ್ಜಿಂಗ್ ಹಾಗೂ ಮೊಬೈಲ್ ಸ್ಟ್ಯಾಂಡ್ ವ್ಯವಸ್ಥೆ
  • ಸೀಟ್ ನಂಬರ್ ಮೇಲೆ ಎಲ್​ಇಡಿ ಅಳವಡಿಕೆ
  • ಓದಲು ಉತ್ತಮ ಬೆಳಕಿನ ಎಲ್​ಇಡಿ ಲೈಟ್ ಅಳವಡಿಕೆ
  • ಬಸ್​ನಲ್ಲಿ ಅಡಿಯೋ ಸ್ವೀಕರ್​ಗಳ ಮೂಲಕ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ
  • ಡಿಜಿಟಲ್ ಗಡಿಯಾರ, ಹಾಗೆ ಎಲ್​ಇಡಿ ಫ್ಲೋರ್
  • ಪ್ರತಿ ಪ್ರಯಾಣಿಕರಿಗೆ ಚಪ್ಪಳಿ‌ ಇಡಲು ಸ್ಥಳಾವಕಾಶದ ವ್ಯವಸ್ಥೆ
  • ಪ್ರಯಾಣಿಕರಿಗೆ ತಲೆದಿಂಬಿನ ವ್ಯವಸ್ಥೆ
  • ಚಾಲಕರಿಗೆ ಸಹಾಯವಾಗಲೂ ಬಸ್ ಹಿಂಭಾಗದಲ್ಲಿ ಹೈಟೆಕ್ ಕ್ಯಾಮರಾ ಅಳವಡಿಕೆ
  • 40 ಬಸ್‌ಗಳ ಪೈಕಿ 30 ಬಸ್‌ಗಳು ರಾಜ್ಯದೊಳಗೆ ಸಂಚರಿಸಲಿವೆ
  • ಉಳಿದ 10 ಬಸ್‌ಗಳು ಬೆಂಗಳೂರಿನಿಂದ‌ ಹೊರರಾಜ್ಯಗಳಿಗೆ ಸಂಚರಿಸಲಿವೆ.
  • ಈ ಬಸ್‌ ಸೇವೆಯು‌ ಇಂದಿನಿಂದಲೇ ಆರಂಭವಾಗಲಿದೆ
  • ಕೆಎಸ್‌ಆರ್‌ಟಿಸಿಯಲ್ಲಿ ನಾನ್‌ ಎಸಿ ಸ್ಲೀಪರ್‌ ಬಸ್‌ಗಳು ಆರಂಭವಾಗಿ ಸಾಕಷ್ಟು ವರ್ಷಗಳಾಗಿವೆ
  • ನಾನ್ ಎಸಿ ಸ್ಲೀಪರ್ ಬಸ್‌ಗಳಿಗೆ ಯಾವುದೇ ಹೆಸರಿಟ್ಟು ಬ್ರ್ಯಾಂಡಿಂಗ್‌ ಮಾಡಿರಲಿಲ್ಲ
  • ಸದ್ಯ ಪಲ್ಲಕ್ಕಿ (‘ಸಂತೋಷವು ಪ್ರಯಾಣಿಸುತ್ತಿದೆ’ ಎಂಬ ಉಪಶೀರ್ಷಿಕೆ) ಎಂಬ ಬ್ರ್ಯಾಂಡ್ ನೇಮ್‌ ಇಡಲಾಗಿದ್ದು, ಈ ಹೆಸರನ್ನು ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com