ಅತ್ತಿಬೆಲೆ ಪಟಾಕಿ ದುರಂತ: ರಾಜಕಾರಣಿಗಳ ಪ್ರಭಾವ, ಸೀಜ್ ಆಗಿದ್ದ 2-3 ಗಂಟೆಗಳಲ್ಲೇ ಓಪನ್ ಆಗಿದ್ದ ಗೋದಾಮು!

ಅತ್ತಿಬೆಲೆಯ ಬಾಲಾಜಿ ಟ್ರೇಡರ್ಸ್‌ನ ಪಟಾಕಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು 14 ಮಂದಿ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಹಲವು ಸ್ಫೋಟಕ ಮಾಹಿತಿಗಳು ಇದೀಗ ಬಹಿರಂಗಗೊಳ್ಳುತ್ತಿವೆ.
ಗೋದಾಮು ಸುಟ್ಟು ಕರಕಲಾಗಿರುವುದು.
ಗೋದಾಮು ಸುಟ್ಟು ಕರಕಲಾಗಿರುವುದು.
Updated on

ಬೆಂಗಳೂರು: ಅತ್ತಿಬೆಲೆಯ ಬಾಲಾಜಿ ಟ್ರೇಡರ್ಸ್‌ನ ಪಟಾಕಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು 14 ಮಂದಿ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಹಲವು ಸ್ಫೋಟಕ ಮಾಹಿತಿಗಳು ಇದೀಗ ಬಹಿರಂಗಗೊಳ್ಳುತ್ತಿವೆ.

ಗೋದಾಮು ಮಾಲೀಕ ಈ ಹಿಂದೆ ಸಾಕಷ್ಟು ಬಾರಿ ನಿಯಮಗಳನ್ನು ಗಾಳಿಗೆ ತೂರಿದ್ದು, ಈಗಲೂ ನಿಯಮಗ ಮೀರಿಯೇ ಹಲವು ಕಿರಿದಾದ ಸ್ಥಳಗಳಲ್ಲಿ ಪಟಾಕಿಗಳ ಗೋದಾಮು ನಡೆಸುತ್ತಿದ್ದಾನೆಂದು ತಿಳಿದುಬಂದಿದೆ.

ಗೋದಾಮಿನ ಮಾಲೀಕನಿಗೆ ಕಳೆದ ವರ್ಷ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ನಿಯಮಗಳನ್ನು ಗಾಳಿಗೆ ತೂರಿದ್ದ ಹಿನ್ನಲೆಯಲ್ಲಿ ಅಂಗಡಿಯನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಪೊಲೀಸರು ಸೀಜ್ ಮಾಡಿದ್ದರು. ಆದರೆ, ರಾಜಕಾರಣಿಗಳ ಪ್ರಭಾವದಿಂದ 3-4 ಗಂಟೆಗಳಲ್ಲೇ ಗೋದಾಮು ಮರಳಿ ಓಪನ್ ಆಗಿತ್ತು ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ.

ಈ ಗೋದಾಮಿನ ಮಾಲೀಕ ಅತ್ತಿಬೆಲೆಯಲ್ಲಿ ಅಷ್ಟೇ ಅಲ್ಲದೆ, ಚಿಕ್ಕಪೇಟೆ ಸೇರಿದಂತೆ ನಗರದ ಹಲವು ಜನನಿಬಿಡ ಪ್ರದೇಶಗಳಲ್ಲಿಯೂ ಪಟಾಕಿ ಗೋದಾಮು ನಡೆಸುತ್ತಿದ್ದಾನೆಂದು ತಿಳಿದುಬಂದಿದೆ.

ಫುಟ್ ಬಾಲ್ ಮೈದಾನವೇ ತುಂಬುವಷ್ಟು ಪಟಾಕಿ ಸರಕುಗಳು ಈತನ ಗೋದಾಮಿನಲ್ಲಿದ್ದು, ಅದು ಕೋಟ್ಯಾಂತರ ರುಪಾಯಿ ಮೌಲ್ಯವುಳ್ಳವಾಗಿವೆ. ಪ್ರಸ್ತುತ ಅತ್ತಿಬೆಲೆಯಲ್ಲಿ ಸಂಭವಿಸಿದ ದುರಂತ ಚಿಕ್ಕದೇ ಎನ್ನಬಹುದು. ಏಕೆಂದರೆ, 1980ರಲ್ಲಿ ಈತನಿಗೆ ಸೇರಿದ 15 ಪಟಾಕಿ ಅಂಗಡಿಗಳಲ್ಲಿ ಅಗ್ನಿ ಅವಘಡ ಸಂಭವಿಸಿದ ಸುಮಾರು 28 ಮಂದಿ ಸಾವನ್ನಪ್ಪಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಸಂಭವಿಸಿರುವ ಅತ್ತಿಬೆಲೆ ಪಟಾಕಿ ಅಂಗಡಿ ದುರಂತದಲ್ಲಿ ಭ್ರಷ್ಟಾಚಾರ ದೊಡ್ಡ ಮಟ್ಟದಲ್ಲಿ ಕೈಚಳಕ ತೋರಿಸಿದೆ ಎಂದು ಮೂಲಗಳು ತಿಳಿಸಿವೆ.

ಸಣ್ಣ ಅಂಗಡಿಗಳಿಗೆ ಪರವಾನಗಿ ನೀಡುವ ಅಧಿಕಾರ ಜಿಲ್ಲಾಧಿಕಾರಿಗೆ ಇದೆ. ಹಲವು ದಿನಗಳಿಂದ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತಿದೆ. ಪರವಾನಗಿ ನೀಡುವಾಗ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸ್ ಠಾಣೆ, ಬೆಸ್ಕಾಂ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯ. ಜೊತೆಗೆ, ಸ್ಥಳದ ಸುರಕ್ಷತೆ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ನೀಡಿದ ವರದಿ ಅನ್ವಯ ಪ್ರಕ್ರಿಯೆ ಮುಂದುವರಿಸಲು ನಿಯಮವಿದೆ. ಈ ನಿಯಮಗಳನ್ನು ಗಾಳಿಗೆ ಗೋದಾಮು ಮಾಲೀಕ ಗಾಳಿಗೆ ತೂರಿರುವುದು ಇದೀಗ ಬೆಳಕಿಗೆ ಬಂದಿದೆ.

ಸಿಐಡಿ ತನಿಖೆ ಆರಂಭ
ಅಗ್ನಿ ದುರಂತ ಸಂಬಂಧ ಸೋಮವಾರ ಕೇಂದ್ರ ಅಪರಾಧ ದಳದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಘಟನಾ ಸ್ಥಳಕ್ಕೆ ಐಜಿಪಿ ಪ್ರವೀಣ್ ಪವಾರ್ ಮತ್ತು ಎಸ್ಪಿ (ಹತ್ಯೆ ಮತ್ತು ಕಳ್ಳತನ) ವೆಂಕಟೇಶ್ ನೇತೃತ್ವದ ಸಿಐಡಿ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.

ಇದೇ ವೇಳೆ ಅಗ್ನಿಶಾಮಕ ದಳ ಹಾಗೂ ಕಂದಾಯ ಅಧಿಕಾರಿಗಳು ಅತ್ತಿಬೆಲೆ ಬಳಿ ಸುಮಾರು 35 ಅಂಗಡಿಗಳ ಸಮೀಕ್ಷೆ ನಡೆಸಿದ್ದು, ಬಹುತೇಕ ಅಂಗಡಿಗಳಲ್ಲಿ ಪರವಾನಗಿ ಪಡೆಯದೇ ಅಕ್ರಮ ನಡೆಸುತ್ತಿರುವುದನ್ನು ಪತ್ತೆ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಅವರು ಮಾತನಾಡಿ, "ಅಗ್ನಿಶಾಮಕ ಸುರಕ್ಷತಾ ಇಲಾಖೆಯು ನಿಯಮಗಳ ರೂಪಿಸಿ ಆ ನಿಯಮಗಳ ಜಾರಿಗೊಳಿಸುವವರೆಗೆ ಎಲ್ಲಾ ಅಂಗಡಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ 7 ಮಂದಿಯ ಪೈಕಿ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಸಿಎಂ ಸಭೆ

ಈ ನಡುವೆ ದೀಪಾವಳಿ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಉನ್ನತಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ಕರೆದು, ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಮುನ್ನೆಚ್ಚರಿಕೆಗಳ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಡಿಜಿ ಮತ್ತು ಐಜಿಪಿ, ಡಿಜಿಪಿ, ಅಗ್ನಿಶಾಮಕ ಸೇವೆ ಮತ್ತು ಪೊಲೀಸ್ ಆಯುಕ್ತರು ಭಾಗವಹಿಸಲಿದ್ದರು ಎಂದು ವರದಿಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com