ಮದ್ಯ ಸೇವಿಸಿ ಪ್ರಯಾಣಿಕರೊಂದಿಗೆ ಕಂಡಕ್ಟರ್' ದುರ್ವರ್ತನೆ: ವೇತನ ಕಡಿತ ಸರಿ ಎಂದ ಹೈಕೋರ್ಟ್

ಮದ್ಯ ಸೇವನೆ ಮಾಡಿ ಪ್ರಯಾಣಿಕರೊಂದಿಗೆ ದುರ್ವರ್ತನೆ ತೋರಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ನಿರ್ವಾಹಕನೊಬ್ಬನ ಮೂಲ ವೇತನ ಕಡಿತಗೊಳಿಸಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮದ್ಯ ಸೇವನೆ ಮಾಡಿ ಪ್ರಯಾಣಿಕರೊಂದಿಗೆ ದುರ್ವರ್ತನೆ ತೋರಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ನಿರ್ವಾಹಕನೊಬ್ಬನ ಮೂಲ ವೇತನ ಕಡಿತಗೊಳಿಸಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಕೈಗಾರಿಕಾ ನ್ಯಾಯ ಮಂಡಳಿಯ ಆದೇಶ ಪ್ರಶ್ನಿಸಿ ಬಿಎಂಟಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ನೇತೃತ್ವದ ಏಕಸದಸ್ಯ ಪೀಠ ಮಾನ್ಯ ಮಾಡಿದೆ.

“ನಿರ್ವಾಹಕನಿಗೆ ದಂಡದ ರೂಪದಲ್ಲಿ ವೇತನ ಕಡಿತ ಮಾಡಿ ಬಿಎಂಟಿಸಿ ಹೊರಡಿಸಿದ್ದ ಆದೇಶವನ್ನು ಕೈಗಾರಿಕಾ ನ್ಯಾಯ ಮಂಡಳಿ ಮಾರ್ಪಾಡು ಮಾಡಬಾರದಿತ್ತು” ಎಂದು ಹೈಕೋರ್ಟ್‌ ಆದೇಶಿಸಿದೆ.

“ಸಾರ್ವಜನಿಕ ಸಾರಿಗೆ ನಿಗಮದ ಸಿಬ್ಬಂದಿಯಾಗಿರುವ ನಿರ್ವಾಹಕನ ಜವಾಬ್ದಾರಿ ಬಸ್ ಸೇವೆಯನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವುದಾಗಿರುತ್ತದೆ. ಟಿಕೆಟ್ ನೀಡುವುದು ಹಣ ಪಡೆಯುವುದು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಇಳಿಸುವುದು, ಪ್ರಯಾಣಿಕರಿಗೆ ಸಹಕಾರ ನೀಡುವುದು, ಅವರಿಗೆ ಸೂಕ್ತ ಮಾಹಿತಿ ನೀಡುವುದು ನಿರ್ವಾಹಕರ ಆದ್ಯ ಕರ್ತವ್ಯ. ಉತ್ತಮ ನಿರ್ವಾಹಕನಾಗಿದ್ದರೆ ಎಲ್ಲರೊಂದಿಗೆ ಸ್ನೇಹಭಾವ ಹೊಂದಿರುತ್ತಾರೆ, ಸಹಕರಿಸುತ್ತಾರೆ ಹಾಗೂ ಉತ್ತಮ ಸಂವಹನವನ್ನೂ ಹೊಂದಿರುತ್ತಾರೆ” ಎಂದು ಪೀಠ ಹೇಳಿದೆ.

ಈ ಪ್ರಕರಣದಲ್ಲಿ ನಿರ್ವಾಹಕ ಪ್ರಯಾಣಿಕರಿಗೆ ದುಸ್ವಪ್ನವಾಗಿದ್ದಾರೆ. ಕೆಲಸದಲ್ಲಿದ್ದಾಗಲೇ ಮದ್ಯ ಸೇವಿಸಿ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿರುವುದು ಸರಿಯಲ್ಲ. ಹೀಗಾಗಿ, ಆತನ ಮೂಲ ವೇತನದಲ್ಲಿ ಕಡಿತಗೊಳಿಸಿರುವ ಆದೇಶ ಸರಿಯಾಗಿಯೇ ಇದೆ. ಆದರೆ, ಕೈಗಾರಿಕಾ ನ್ಯಾಯ ಮಂಡಳಿ ತನಗೆ ಅಧಿಕಾರವಿಲ್ಲದಿದ್ದರೂ ಸಹ ದಂಡನಾ ಆದೇಶ ಮಾರ್ಪಾಡು ಮಾಡಿರುವುದು ಸರಿಯಲ್ಲ. ಅದು ತಪ್ಪೆಸಗಿದೆ’’ ಎಂದು ಪೀಠ ಆದೇಶಿಸಿದೆ.

ಏನಿದು ಪ್ರಕರಣ?
ನಿರ್ವಾಹಕ ಸಿದ್ದರಾಜಯ್ಯ 2006ರ ಜುಲೈ 11ರಂದು ಬಿಎಂಟಿಸಿ ಬಸ್‌ನಲ್ಲಿದ್ದ ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತಿಸಿದ್ದರಲ್ಲದೆ, ಮದ್ಯ ಸೇವನೆ ಮಾಡಿದ್ದರು ಎಂದು ಪ್ರಯಾಣಿಕರು ದೂರು ಸಲ್ಲಿಸಿದ್ದರು. ಆನಂತರ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಮದ್ಯಪಾನ ಮಾಡಿದ್ದು ದೃಢಪಟ್ಟಿತ್ತು.

ಆ ಕುರಿತು ಡಿಪೋ ಮ್ಯಾನೇಜರ್ ವರದಿಯನ್ನು ಸಲ್ಲಿಸಿದ್ದರು. ಆ ವರದಿಯನ್ನು ಆಧರಿಸಿ ಅವರ ವಿರುದ್ಧ ಆರೋಪಗಳನ್ನು ನಿಗದಿ ಮಾಡಲಾಗಿತ್ತು. ಶಿಸ್ತು ಪ್ರಾಧಿಕಾರ ತನಿಖಾಧಿಕಾರಿಯನ್ನು ನೇಮಕ ಮಾಡಿತ್ತು. ತನಿಖಾಧಿಕಾರಿ ಎಲ್ಲ ಅಂಶಗಳನ್ನು ಪರಿಶೀಲಿಸಿ ವಿವರವಾದ ತನಿಖೆ ನಡೆಸಿ ಆರೋಪಗಳು ದೃಢಪಟ್ಟಿವೆ. ಹೀಗಾಗಿ ದಂಡ ವಿಧಿಸಲು ಶಿಫಾರಸ್ಸು ಮಾಡಿದ್ದರು. ಶಿಸ್ತು ಪ್ರಾಧಿಕಾರ ಆ ಶಿಫಾರಸ್ಸು ಅಂಗೀಕರಿಸಿ ನಿರ್ವಾಹಕನಿಗೆ ದಂಡದ ರೂಪದಲ್ಲಿ ಮೂಲ ವೇತನದಲ್ಲಿ ಕಡಿತಗೊಳಿಸಿ ಆದೇಶ ಹೊರಡಿಸಿತ್ತು.

ಅದನ್ನು ಪ್ರಶ್ನಿಸಿ ಅರ್ಜಿದಾರರು ಕೈಗಾರಿಕಾ ನ್ಯಾಯ ಮಂಡಳಿ ಮೊರೆ ಹೋಗಿದ್ದರು. ನ್ಯಾಯಮಂಡಳಿ, ಸಾರಿಗೆ ಸಂಸ್ಥೆ ನಡೆಸಿದ ಆಂತರಿಕ ತನಿಖೆ ನ್ಯಾಯಯುತವಾಗಿ ನಡೆದಿದೆ ಎಂದು ಒಪ್ಪಿದ್ದರೂ ಸಹ ವೇತನ ಕಡಿತ ಆದೇಶವನ್ನು ಮಾರ್ಪಾಡು ಮಾಡಿತ್ತು. ಹೀಗಾಗಿ, ಬಿಎಂಟಿಸಿ ಕೈಗಾರಿಕಾ ನ್ಯಾಯ ಮಂಡಳಿಯ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com