ಭೀಕರ ಅಪಘಾತ: ರಸ್ತೆಯ ಡಿವೈಡರ್ ಮೇಲೆ ಕುಳಿತಿದ್ದವರ ಮೇಲೆ ವೇಗವಾಗಿ ಬಂದ ಟ್ರಕ್‌ ಹರಿದು ನಾಲ್ವರು ಸಾವು

ಸರ್ವಿಸ್ ರಸ್ತೆಯ ಡಿವೈಡರ್ ಮೇಲೆ ಕುಳಿತು ಮಾತನಾಡುತ್ತಿದ್ದವರ ಮೇಲೆ ವೇಗವಾಗಿ ಬಂದ ಟ್ರಕ್‌ ಹರಿದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವಿಗೀಡಾಗಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯ ಟೋಲ್ ಗೇಟ್ ಬಳಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ವಿಜಯಪುರ: ಸರ್ವಿಸ್ ರಸ್ತೆಯ ಡಿವೈಡರ್ ಮೇಲೆ ಕುಳಿತು ಮಾತನಾಡುತ್ತಿದ್ದವರ ಮೇಲೆ ವೇಗವಾಗಿ ಬಂದ ಟ್ರಕ್‌ ಹರಿದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವಿಗೀಡಾಗಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯ ಟೋಲ್ ಗೇಟ್ ಬಳಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಅಪಘಾತದ ಬಳಿಕ ಟ್ರಕ್ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.

ಮೃತರನ್ನು ವಿಜಯಪುರ ನಗರದ ವಜ್ರ ಹನುಮಾನ್ ನಗರ ನಿವಾಸಿಗಳಾದ ಶಿವಾನಂದ ಚೌಧರಿ (25), ಸುನೀಲ್ (26), ಈರಣ್ಣ (26) ಮತ್ತು 40 ವರ್ಷದ ಪ್ರವೀಣ್ ಪಾಟೀಲ್ ಎಂದು ಗುರುತಿಸಲಾಗಿದೆ.

ಹಿಟ್ನಳ್ಳಿ ಟೋಲ್ ಪ್ಲಾಜಾ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ.

ನಾಲ್ಕು ಮಂದಿ ಹೆದ್ದಾರಿಯ ಟ್ರಕ್ ಬೇ ಸರ್ವೀಸ್ ರಸ್ತೆಯಲ್ಲಿ ತಮ್ಮ ಬೈಕ್ ಗಳನ್ನು ನಿಲ್ಲಿಸಿದ್ದರು. ಸಮೀಪದ ಹೋಟೆಲ್‌ನಲ್ಲಿ ಊಟ ಮುಗಿಸಿ ರಸ್ತೆಯ ಡಿವೈಡರ್ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದ ವೇಳೆ, ವೇಗವಾಗಿ ಬಂದ ಟ್ರಕ್ ಚಾಲಕನ ನಿಯಂತ್ರಣ ಕಳೆದುಕೊಂಡು ನಾಲ್ವರ ಮೇಲೆ ಹರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಎರಡು ಬೈಕ್‌ಗಳು ಜಖಂಗೊಂಡಿವೆ.

ಸಿಸಿಟಿವಿ ಕ್ಯಾಮೆರಾಗಳು ಈ ಘಟನೆಯನ್ನು ಸೆರೆ ಹಿಡಿದಿವೆ. ಹಿಟ್ ಅಂಡ್ ರನ್ ಪ್ರಕರಣದಲ್ಲಿ ಭಾಗಿಯಾಗಿರುವ ವಾಹನ ಮಹಾರಾಷ್ಟ್ರದ್ದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ವಿಜಯಪುರ ಗ್ರಾಮಾಂತರ ಪೊಲೀಸರು ಬೈಕ್ ಗಳ ನೋಂದಣಿ ಸಂಖ್ಯೆ ಪಡೆದು ಮಾಮೃತರ ವಿವರಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com