
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ಪೂರ್ತಿ ಸುರಿದ ಭಾರಿ ಮಳೆ ನಗರವನ್ನು ಮತ್ತೆ ತಂಪಿನ ವಾತಾವರಣಕ್ಕೆ ಮರಳುವಂತೆ ಮಾಡಿದ್ದು, ಕಳೆದ ಕೆಲ ವಾರಗಳಿಂದ ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.
ಬೆಂಗಳೂರಿನ ಶಾಂತಿನಗರ, ಕಲಾಸಿಪಾಳ್ಯ ಸಿಟಿ ಮಾರ್ಕೇಟ್, ಜಯನಗರ, ವಿಲ್ಸನ್ ಗಾರ್ಡನ್, ಎಂಜಿ ರಸ್ತೆ, ವಿವೇಕ ನಗರ, ಕೋರಮಂಗಲ, ಹೆಚ್.ಎಸ್.ಆರ್ ಲೇಔಟ್, ಬೆಳ್ಳಂದೂರು, ವರ್ತೂರು, ಸರ್ಜಾಪುರ, ಮಾರತ್ಹಳ್ಳಿ, ಕಾಡುಗೋಡಿ, ವೈಟ್ ಫೀಲ್ಡ್, ಕೆ.ಆರ್.ಪುರಂ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದ್ದು, ಮಳೆ ಜೋರಾದ ಹಿನ್ನೆಲೆ ದ್ವಿಚಕ್ರ ವಾಹನ ಸವಾರರು ಫ್ಲೈಓವರ್‌ಗಳಲ್ಲಿ ಆಶ್ರಯ ಪಡೆದ ದೃಶ್ಯ ಕಂಡುಬಂತು. ದಿಢೀರ್ ಮಳೆಗೆ ಬೆಂಗಳೂರಿನ ರಸ್ತೆಗಳು ಜಲಾವೃತಗೊಂಡವು. ಹೆಬ್ಬಾಳದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿತು.
ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ
ಏತನ್ಮದ್ಯೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ರಸ್ತೆ ಸಂಚಾರ ಅಸ್ತವ್ಯಸ್ಥವಾಗಿತ್ತು. ಮೈಸೂರು ರಸ್ತೆ, ಜಯನಗರ, ಚಾಮರಾಜಪೇಟೆ, ಸಂಪಂಗಿ ರಾಮನಗರದಲ್ಲಿ ಮಳೆ ನೀರು ನಿಂತು ವಾಹನ ಸವಾರರು ಅವಾಂತರಪಡುವಂತಾಗಿತ್ತು.
ನೈರುತ್ಯ ಮುಂಗಾರು ವಾರಾಂತ್ಯದಲ್ಲಿ ಮತ್ತೆ ಚುರುಕುಗೊಳ್ಳುವ ಸಾಧ್ಯತೆ ಇದ್ದು, ದೇಶದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿತ್ತು. ಸೆಪ್ಟೆಂಬರ್‌ನಲ್ಲಿ ವಾಡಿಕೆ ಮಳೆ ಆಗುವ ಸಾಧ್ಯತೆ ಇದೆ. ಈ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದರೂ, ಜೂನ್-ಸೆಪ್ಟೆಂಬರ್ ಅವಧಿಯಲ್ಲಿನ ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆಯೇ ಇರಲಿದೆ ಎಂದು ಮಾಹಿತಿ ನೀಡಿದೆ.
ಉದ್ಯಾನನಗರಿಗೆ ಮರಳಿದ ತಂಪಿನ ವಾತಾವರಣ
ಇನ್ನು ರಾತ್ರಿ ಪೂರ್ತಿ ಸುರಿದ ಮಳೆಯಿಂದಾಗಿ ಬೆಂಗಳೂರಿನಲ್ಲಿ ಮತ್ತೆ ತಂಪಿನ ವಾತಾವರಣ ವಾಪಸ್ಸಾಗಿದೆ. ಕಳೆದೊಂದು ತಿಂಗಳಿನಿಂದ ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ಬೆಂಗಳೂರು ಮಂದಿಗೆ ಇಂದು ಬೆಳಗ್ಗೆ ತಂಪಿನ ಅಹ್ಲಾದಕರ ವಾತಾವರಣ ಮುದ ನೀಡಿದೆ. ನಿನ್ನೆ ಬೆಳಗ್ಗೆ 24 ಡಿಗ್ರಿ ಸೆಲ್ಸಿಯಸ್ ನಷ್ಟಿದ್ದ ತಾಪಮಾನ ಇಂದು ಬೆಳಗ್ಗೆ 20 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿದೆ. ನಿನ್ನೆ ಬೆಂಗಳೂರಿನಲ್ಲಿ ಮಧ್ಯಾಹ್ನ 12 ಗಂಟೆಗೆ ತಾಪಮಾನ ಗರಿಷ್ಟ 31 ಡಿಗ್ರಿಗೆ ತಲುಪಿತ್ತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement