ತಮಿಳುನಾಡಿಗೆ ಕಾವೇರಿ ನೀರು: ಸಿಡಬ್ಲ್ಯೂಎಂಎ, ಸುಪ್ರೀಂ ಕೋರ್ಟ್ ಮುಂದೆ ವಾಸ್ತವ ಸ್ಥಿತಿಗತಿ ಮಂಡನೆ- ಸಿಎಂ ಸಿದ್ದರಾಮಯ್ಯ

ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ಕುರಿತು ರಾಜ್ಯದ ವಾಸ್ತವ ಸ್ಥಿತಿಗತಿಗಳನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಮತ್ತು ಸುಪ್ರೀಂ ಕೋರ್ಟ್‌ನ ಮುಂದಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ.
ಆಲಮಟ್ಟಿಯಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಆಲಮಟ್ಟಿಯಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ಕುರಿತು ರಾಜ್ಯದ ವಾಸ್ತವ ಸ್ಥಿತಿಗತಿಗಳನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಮತ್ತು ಸುಪ್ರೀಂ ಕೋರ್ಟ್‌ನ ಮುಂದಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಕೊರತೆಯಿಂದಾಗಿ ಕಾವೇರಿ ನದಿ ಜಲಾನಯನ ಪ್ರದೇಶ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಕಾವೇರಿ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡುವುದರ ಜೊತೆಗೆ ಬಾಕಿಯಿರುವ ಎಲ್ಲಾ ಯೋಜನೆಗಳ ಅನುಮೋದನೆಗಾಗಿ ಸರ್ವ ಪಕ್ಷ ನಿಯೋಗವೊಂದನ್ನು ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಅಪಾಯಿಂಟ್ಮೆಂಟ್ ಕೇಳಿದಿರುವುದಾಗಿ ಳಿಸಿದರು.

ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿಯು ಹೇಳಿದ್ದರೂ ನೀರು ಹರಿಸಲು ನಮಗೆ ನೀರಿನ ಕೊರತೆಯಿದೆ. ಮೊದಲು 15,000 ಕ್ಯೂಸೆಕ್ ನೀರು ಹರಿಸಬೇಕೆಂದು ಸೂಚಿಸಿದ್ದರು. ಆದರೆ, ನಂತರ ನಾವು ಮನವಿ ಮಾಡಿದ ನಂತರ10,000 ಕ್ಯೂಸೆಕ್‌ಗೆ ಇಳಿಸಿದರು, ಈಗ ಮತ್ತೆ ರಾಜ್ಯದ ಮನವಿಯ ನಂತರ 5,000 ಕ್ಯೂಸೆಕ್‌ಗೆ ನೀರು ಬಿಡಬೇಕು ಎಂದು ಆದೇಶಿಸಿರುವುದಾಗಿ ಮಾಹಿತಿ ನೀಡಿದರು. 

ತಮಿಳುನಾಡು 24 ಸಾವಿರ ಕ್ಯೂಸೆಕ್‌ ಬಿಡುಗಡೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಕರ್ನಾಟಕ ಅದನ್ನು ಗೌರವಿಸುವ ಸ್ಥಿತಿಯಲ್ಲಿಲ್ಲ. 'ನೀರಿಲ್ಲದೆ ಅಷ್ಟು ಪ್ರಮಾಣದ ನೀರನ್ನು ಎಲ್ಲಿಂದ ಹರಿಸಲಾಗುತ್ತದೆ? ನಮ್ಮ ರಾಜ್ಯದಲ್ಲಿ ಬೆಳೆ ರಕ್ಷಿಸಬೇಕು, ಕುಡಿಯುವ ನೀರು ಕೊಡಬೇಕು. ಆ ಮೂಲಕ ನಾವು ರಾಜ್ಯದ ಹಿತವನ್ನು ರಕ್ಷಿಸುತ್ತೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್‌ಗೆ ವಾಸ್ತವ ಸಂಗತಿಗಳನ್ನು ಮನವರಿಕೆ ಮಾಡಿಕೊಡುತ್ತವೆ ಎಂದರು.

ಆಗಸ್ಟ್ 29 ರಿಂದ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡುವಂತೆ CWMA ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲ್ಯುಆರ್‌ಸಿ) ಶಿಫಾರಸಿನ ಮೇರೆಗೆ ಸಿಡಬ್ಲ್ಯುಎಂಎ ಈ ನಿರ್ಧಾರ ಕೈಗೊಂಡಿದೆ. ರಾಜ್ಯದ ಹಿತಾಸಕ್ತಿ ಕಾಪಾಡುವ ಬಗ್ಗೆ ತಮ್ಮ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ ಎಂದು ಹೇಳಿದ ಮುಖ್ಯಮಂತ್ರಿ, ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಪ್ರಧಾನಮಂತ್ರಿ ಮತ್ತು ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಅಪಾಯಿಂಟ್‌ಮೆಂಟ್ ಕೇಳಿದ್ದೇನೆ ಎಂದು ಹೇಳಿದರು.

ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಈಗಾಗಲೇ ರಾಜ್ಯದ ಕಾನೂನು ತಂಡವನ್ನು ಭೇಟಿ ಮಾಡಿದ್ದಾರೆ ಮತ್ತು ನೆಲದ ವಾಸ್ತವಗಳ ಬಗ್ಗೆ ಅವರಿಗೆ ಅರಿವು ಮೂಡಿಸಿದ್ದಾರೆ ಮತ್ತು ರಾಜ್ಯದ ವಾದದ ಮಾರ್ಗ ಹೇಗಿರಬೇಕು ಎಂಬುದರ ಕುರಿತು ಅವರಿಗೆ ಅಗತ್ಯ ಸೂಚನೆ ನೀಡಿದ್ದಾರೆ. ಬುಧವಾರ ಸುಪ್ರೀಂಕೋರ್ಟ್ ಈ ಕುರಿತು ವಿಚಾರಣೆ ನಡೆಯಲಿದೆ. ಪ್ರಧಾನಮಂತ್ರಿಯವರ  ಅಪಾಯಿಂಟ್ಮೆಂಟ್ ಸಿಕ್ಕ ನಂತರ  ಕೃಷ್ಣಾ ಮೇಲ್ದಂಡೆ ಯೋಜನೆಗೆ ಗೆಜೆಟ್ ನೋಟಿಫಿಕೇಶನ್, ಮಹದಾಯಿ ಯೋಜನೆಗೆ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ, ಕಾವೇರಿ ನದಿಯಾದ್ಯಂತ ಮೇಕೆದಾಟು ಸಮತೋಲಿತ ಜಲಾಶಯ ಯೋಜನೆ ಅನುಷ್ಠಾನಕ್ಕೆ ಅಗತ್ಯ ಅನುಮತಿ ನೀಡುವಂತೆ ಒತ್ತಾಯಿಸಲಾಗುವುದು ಎಂದರು. 

ಕಾವೇರಿ ಜಲಾನಯನ ಪ್ರದೇಶದಲ್ಲಿ ಸಂಕಷ್ಟದ ಕಾಲದಲ್ಲಿದ್ದೇವೆ, ಮಳೆ ಕೊರತೆಯಿದೆ, ಜಲಾಶಯಗಳಲ್ಲಿ ನೀರಿಲ್ಲ, ಕುಡಿಯುವ ನೀರಿಗೆ ಹಾಹಾಕಾರದ ಭೀತಿ ಎದುರಾಗಿದೆ .ಜಲನೀತಿಯ ಪ್ರಕಾರ ಕುಡಿಯುವ ನೀರಿಗೆ ಮೊದಲ ಆದ್ಯತೆ ಎಂದು ತಿಳಿಸಿದರು.

ತಮಿಳುನಾಡಿಗೆ ನೀರು ಬಿಡುವ ಸರ್ಕಾರದ ಕ್ರಮವನ್ನು ವಿರೋಧಿಸಿ ಕಾವೇರಿ ಹೃದಯ ಭಾಗದ ಮೈಸೂರು, ಮಂಡ್ಯ ಮತ್ತು ಚಾಮರಾಜನಗರದಲ್ಲಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಕರ್ನಾಟಕದ ಹಿತ ಕಾಪಾಡಲು ಕಾಂಗ್ರೆಸ್ ಸರ್ಕಾರ ಏನೂ ಮಾಡಿಲ್ಲ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

ಇದಕ್ಕೂ ಮುನ್ನಾ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಕೃಷ್ಣಾ ನದಿಗೆ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com