ಕಾಲಮಿತಿಯೊಳಗೆ ತನಿಖೆ ಪೂರ್ಣಗೊಳಿಸಿ: ಲೋಕಾಯುಕ್ತಕ್ಕೆ ಹೈಕೋರ್ಟ್ ನಿರ್ದೇಶನ

ಲೋಕಾಯುಕ್ತರು  ತನಿಖೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಮೂಲಕ ತಮ್ಮ ಮನೆಯನ್ನು ಕ್ರಮಬದ್ಧಗೊಳಿಸಬೇಕು, ಇಲ್ಲವಾದರೆ ಪ್ರಾಸಿಕ್ಯೂಷನ್ ಎಂಬ ಕತ್ತಿಯು ಸಾರ್ವಜನಿಕ ಸೇವಕರ ತಲೆಯ ಮೇಲೆ ತೂಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಲೋಕಾಯುಕ್ತ
ಲೋಕಾಯುಕ್ತ
Updated on

ಬೆಂಗಳೂರು: ಲೋಕಾಯುಕ್ತರು  ತನಿಖೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಮೂಲಕ ತಮ್ಮ ಮನೆಯನ್ನು ಕ್ರಮಬದ್ಧಗೊಳಿಸಬೇಕು, ಇಲ್ಲವಾದರೆ ಪ್ರಾಸಿಕ್ಯೂಷನ್ ಎಂಬ ಕತ್ತಿಯು ಸಾರ್ವಜನಿಕ ಸೇವಕರ ತಲೆಯ ಮೇಲೆ ತೂಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹಲವಾರು ಪ್ರಕರಣಗಳಲ್ಲಿ ವರ್ಷಗಳ ಕಾಲ ತನಿಖೆ ನಡೆದು ಯಾವುದೇ ಅಂತಿಮ ವರದಿ ಸಲ್ಲಿಸದಿರುವುದು ಪ್ರಾಸಿಕ್ಯೂಷನ್, ಲೋಕಾಯುಕ್ತರ ಲೋಪದೋಷದ ಧೋರಣೆಯನ್ನು ಹೇಳುತ್ತದೆ ಎಂದು ಹೇಳಿದೆ. 

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಕಲ್ಲಪ್ಪ ಅವರು ತಮ್ಮ ವಿರುದ್ಧ ದಾಖಲಾಗಿರುವ ಅಕ್ರಮ ಆಸ್ತಿ ಪ್ರಕರಣದ ತನಿಖೆ ಪೂರ್ಣಗೊಳಿಸಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಪ್ರಕರಣದಲ್ಲಿ, ಅರ್ಜಿದಾರರು ಹೊಂದಿರುವ ಹಲವಾರು ಖಾತೆಗಳನ್ನು ಬಹಿರಂಗಪಡಿಸದ ಕಾರಣ ವಿಳಂಬವಾಗಿದೆ. ಹಲವು ವರ್ಷಗಳ ಕಾಲ ತನಿಖೆ ನಡೆದು ಅಂತಿಮ ವರದಿ ಸಲ್ಲಿಕೆಯಾಗದ ಹಲವಾರು ಪ್ರಕರಣಗಳು ಈ ನ್ಯಾಯಾಲಯಕ್ಕೆ ಬಂದಿವೆ. ಇಚ್ಛಾಶಕ್ತಿಯ ಕೊರತೆಯಿಂದ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಲು ಈ ಪ್ರಕರಣ ಕಣ್ಣು ತೆರೆಸುವ ನಿರೀಕ್ಷೆಯಿದೆ  ಎಂದು ನ್ಯಾಯಾಲಯ ಹೇಳಿದೆ.

ಅಂತಿಮ ವರದಿಯನ್ನು ಸಲ್ಲಿಸಲು ವಿಳಂಬವಾಗಿರುವುದರಿಂದ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸುವ ಹಕ್ಕಿನಿಂದ ಅರ್ಜಿದಾರರು ವಂಚಿತರಾಗಿದ್ದಾರೆ ಎಂದು ವಕೀಲರ ವಾದವನ್ನು ಒಪ್ಪದ ನ್ಯಾಯಾಲಯ, ಈ ಪರಿಸ್ಥಿತಿಗೆ ಅವರ ಕೃತ್ಯವು ಕಾರಣ ಎಂದು ಹೇಳಿದೆ. ಎಲ್ಲಾ ಮಾಹಿತಿಯನ್ನು ಅರ್ಜಿದಾರರು ಬಹಿರಂಗಪಡಿಸಿದ್ದರೆ, ಈಗ ಉದ್ಭವಿಸಿರುವ ಪರಿಸ್ಥಿತಿ ಇರುತ್ತಿರಲಿಲ್ಲ. ಎರಡು ತಿಂಗಳೊಳಗೆ ಅಂತಿಮ ವರದಿ ಸಲ್ಲಿಸುವಂತೆ ಲೋಕಾಯುಕ್ತಕ್ಕೆ ಸೂಚಿಸಿದ ನ್ಯಾಯಾಲಯ, ಅದನ್ನು ಮಾಡದಿದ್ದರೆ, ಲೋಕಾಯುಕ್ತ ವಿರುದ್ಧ ಪ್ರತಿಕೂಲ ತೀರ್ಮಾನಗಳನ್ನು ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಸ್ವಾತಂತ್ರ್ಯವಿದೆ ಎಂದು ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com