ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಧಾರವಾಡ ಕ್ಷೇತ್ರ ಪ್ರವೇಶಕ್ಕೆ ಹೈಕೋರ್ಟ್ ನಕಾರ, ಅರ್ಜಿ ವಜಾ
ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಪ್ರವೇಶಕ್ಕೆ ಶಾಸಕ ವಿನಯ್ ಕುಲಕರ್ಣಿ ಷರತ್ತು ಸಡಿಲಿಕೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ಶನಿವಾರ ವಜಾಗೊಳಿಸಿದೆ. ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರು 2016ರ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.
Published: 24th September 2023 12:36 PM | Last Updated: 24th September 2023 12:36 PM | A+A A-

ವಿನಯ್ ಕುಲಕರ್ಣಿ
ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಪ್ರವೇಶಕ್ಕೆ ಶಾಸಕ ವಿನಯ್ ಕುಲಕರ್ಣಿ ಷರತ್ತು ಸಡಿಲಿಕೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ಶನಿವಾರ ವಜಾಗೊಳಿಸಿದೆ.
ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರು 2016ರ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಕುಲಕರ್ಣಿ ಅವರು ಈ ವರ್ಷ ಮೇನಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗಲೂ ಕ್ಷೇತ್ರ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿತ್ತು. ಇದೀಗ ಶಾಸಕರಾಗಿ ಆಯ್ಕೆಯಾದ ಬಳಿಕ ಷರತ್ತು ಸಡಿಲಿಕೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ವಿನಯ್ ಕುಲಕರ್ಣಿ ಅವರು ತಾವು ಶಾಸಕರಾಗಿರುವ ಕಾರಣಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಲು ಧಾರವಾಡಕ್ಕೆ ಭೇಟಿ ನೀಡಲು ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಶನಿವಾರ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿದೆ.
ಸಿಬಿಐ ಪರ ವಕೀಲ ಪ್ರಸನ್ನಕುಮಾರ್, ವಿನಯ್ ಕುಲಕರ್ಣಿ ಈಗಾಗಲೇ ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ ಗಂಭೀರ ಆರೋಪ ಎದುರಿಸುತ್ತಿದ್ದಾರೆ ಮತ್ತು ಪ್ರಮುಖ ಸಾಕ್ಷಿಗಳ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಹಾಗಾಗಿ ಷರತ್ತು ಸಡಿಲಿಕೆ ಕೋರಿದ್ದ ಅರ್ಜಿ ವಜಾಗೊಳಿಸಿಗೊಳಿಸಬೇಕು ಎಂದು ವಾದ ಮಂಡಿಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಧಾರವಾಡ ಪ್ರವೇಶಕ್ಕೆ ಹೈಕೋರ್ಟ್ ನಕಾರ
ಬಿಜೆಪಿ ಮುಖಂಡ ಯೋಗೇಶ್ ಗೌಡ ಅವರನ್ನು 2016ರ ಜೂನ್ 15ರಂದು ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಸಿಬಿಐಗೆ ವರ್ಗಾಯಿಸಿತ್ತು. 8 ಮಂದಿ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.
ಪ್ರಕರಣದ ಮೊದಲ ಆರೋಪಿ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತು ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಇದರಿಂದ ಅವರು ಸುಪ್ರಿಂಕೋರ್ಟ್‌ಗೆ ಮೊರೆ ಹೋಗಿದ್ದರು. 2021ರ ಆಗಸ್ಟ್‌ನಲ್ಲಿ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರು ಮಾಡಿದ್ದ ಸುಪ್ರೀಂಕೋರ್ಟ್, ನ್ಯಾಯಾಲಯದ ಅನುಮತಿ ಪಡೆಯದೆ ಧಾರವಾಡ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂಬುದು ಸೇರಿ 4 ಷರತ್ತು ವಿಧಿಸಿತ್ತು.