ಕಾವೇರಿ ಉಗಮಸ್ಥಳದಲ್ಲೇ 'ಕಾವೇರದ ಬಂದ್'; ಜನಜೀವನ ಸಾಮಾನ್ಯ, ರೈತಸಂಘಟನೆಗಳಿಂದ ಸಾಂಕೇತಿಕ ಪ್ರತಿಭಟನೆ
ಕಾವೇರಿ ನೀರಿಗಾಗಿ ಇಂದು ನಡೆಯುತ್ತಿರುವ ಕರ್ನಾಟಕ ಬಂದ್ ಗೆ ಕಾವೇರಿ ನದಿ ಜನ್ಮಸ್ಥಳ ತಲಕಾವೇರಿಯಲ್ಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಜೀವನ ಎಂದಿನಂತೆ ಸಾಗಿದೆ.
Published: 29th September 2023 03:33 PM | Last Updated: 29th September 2023 03:35 PM | A+A A-

ಕಾವೇರಿ ಬಂದ್ ನಿಮಿತ್ತ ಗೋಣಿಕೊಪ್ಪದಲ್ಲಿ ಸಾಂಕೇತಿಕ ಪ್ರತಿಭಟನೆ
ಮಡಿಕೇರಿ: ಕಾವೇರಿ ನೀರಿಗಾಗಿ ಇಂದು ನಡೆಯುತ್ತಿರುವ ಕರ್ನಾಟಕ ಬಂದ್ ಗೆ ಕಾವೇರಿ ನದಿ ಜನ್ಮಸ್ಥಳ ತಲಕಾವೇರಿಯಲ್ಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಜೀವನ ಎಂದಿನಂತೆ ಸಾಗಿದೆ.
ಹೌದು.. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಂದ್ ಕರೆ ಕೊಡಗಿನ ಕಾವೇರಿ ನಾಡಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಎಲ್ಲಾ ಅಂಗಡಿಗಳು, ಸಂಸ್ಥೆಗಳು, ಖಾಸಗಿ ಸಾರಿಗೆ ಸೌಲಭ್ಯಗಳು, ಶಾಲಾ-ಕಾಲೇಜುಗಳು ಶುಕ್ರವಾರವೂ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಿದವು. ಮಡಿಕೇರಿಯಲ್ಲಿ ಶುಕ್ರವಾರದ ಮಾರುಕಟ್ಟೆ ಎಂದಿನಂತೆ ತೆರೆದಿತ್ತು. ಆದರೆ, ಮೈಸೂರು ಮತ್ತು ಹಾಸನ ಗಡಿಯಲ್ಲಿ ಸಂಚಾರ ನಿರ್ಬಂಧದಿಂದಾಗಿ ತರಕಾರಿ ಮತ್ತಿತರ ದಿನಸಿ ಮಾರಾಟ ಮಾಡಲು ಸಾಮಾನ್ಯವಾಗಿ ಹೊರ ಜಿಲ್ಲೆಗಳಿಂದ ನಗರಕ್ಕೆ ಆಗಮಿಸುವ ಮಾರಾಟಗಾರರು ಸುಳಿಯಲಿಲ್ಲ.
ಇದನ್ನೂ ಓದಿ: ಕರ್ನಾಟಕ ಬಂದ್ ಸಂಪೂರ್ಣ ಶಾಂತಿಯುತ; ಡಿಕೆ ಶಿವಕುಮಾರ್, ಅ. 5ಕ್ಕೆ ಕೆಆರ್‌ಎಸ್ ಅಣೆಕಟ್ಟೆಗೆ ಮುತ್ತಿಗೆ ಎಂದ ವಾಟಾಳ್ ನಾಗರಾಜ್
ಕುಶಾಲನಗರ, ಸೋಮವಾರಪೇಟೆ, ಪೊನ್ನಂಪೇಟೆ, ವಿರಾಜಪೇಟೆ ತಾಲೂಕುಗಳಲ್ಲೂ ಬಂದ್ ಪರಿಣಾಮ ಬೀರಲಿಲ್ಲ. ಆದರೆ ಗೋಣಿಕೊಪ್ಪಲಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ರೈತರು ದನಿ ಎತ್ತಿದ್ದು, ಕರ್ನಾಟಕದ ರೈತರ ನೆರವಿಗೆ ಬಾರದ ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಖಂಡಿಸಿದರು. ಜಿಲ್ಲಾ ಬಿಜೆಪಿ ಸದಸ್ಯರು ಬಂದ್ ಕರೆಗೆ ಸಾಂಕೇತಿಕವಾಗಿ ಬೆಂಬಲ ವ್ಯಕ್ತಪಡಿಸಿದರು. ಆದರೆ, ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಯಾವುದೇ ಪ್ರತಿಭಟನೆ ನಡೆಸಲಿಲ್ಲ.
ಇದನ್ನೂ ಓದಿ: 'ಕಾವೇರಿ ಸಂಕಷ್ಟ ಸೂತ್ರ'ಕ್ಕೆ ಒತ್ತಡದ ಅಗತ್ಯವಿದೆ, ತಜ್ಞರ ತಂಡದ ಜೊತೆ ಚರ್ಚೆ ಬಳಿಕ ತೀರ್ಮಾನ- ಸಿಎಂ ಸಿದ್ದರಾಮಯ್ಯ
ಜಿಲ್ಲೆಯ ಇತರ ಎಲ್ಲ ಕನ್ನಡ ಪರ ಸಂಘಟನೆಗಳು ಕೂಡ ಬಂದ್ ಕರೆಗೆ ಬೆಂಬಲ ನೀಡಿಲ್ಲ. ಬಹುತೇಕ ವ್ಯಾಪಾರಗಳು ಅಡೆತಡೆಯಿಲ್ಲದೆ ಮುಂದುವರಿದರೆ, ಮೈಸೂರು-ಕೊಡಗು ಗಡಿಯಲ್ಲಿನ ನಿರ್ಬಂಧಗಳಿಂದಾಗಿ ವಿವಿಧ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದ ಪ್ರವಾಸಿಗರು ಬಾರದೆ ಇರುವುದರಿಂದ ಆತಿಥ್ಯ ಕ್ಷೇತ್ರವು ಸಣ್ಣ ನಷ್ಟವನ್ನು ಅನುಭವಿಸಿತು. ದೀರ್ಘ ವಾರಾಂತ್ಯಕ್ಕೆ ಜಿಲ್ಲೆಗೆ ಭೇಟಿ ನೀಡಬೇಕಿದ್ದ ಹಲವು ಪ್ರವಾಸಿಗರು ಬಂದ್ ಕರೆ ಹಿನ್ನೆಲೆಯಲ್ಲಿ ನಿರ್ಬಂಧಗಳಿಂದ ಮೈಸೂರು ಗಡಿಯಿಂದ ಹೊರಬರಲು ಸಾಧ್ಯವಾಗಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.