ತಾಯಿಯೊಂದಿಗೆ ಜಗಳ: BMRCL ಕಾರ್ಮಿಕ ಆತ್ಮಹತ್ಯೆಗೆ ಶರಣು
ಬೆಂಗಳೂರು: ತಾಯಿಯೊಂದಿಗೆ ಜಗಳ ಮಾಡಿಕೊಂಡ ಬಿಎಂಆರ್‌ಸಿಎಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಬೈಯಪ್ಪನಹಳ್ಳಿ ಡಿಪೋದಲ್ಲಿ ನಡೆದಿದೆ.
ರಾಜಾ ಸಿಂಗ್ (24) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಜಾರ್ಖಾಂಡ್ ಮೂಲದ ಅವರು ಬಿಎಂಆರ್‌ಸಿಎಲ್ ನಲ್ಲಿ ಬಾರ್ ಬೆಂಡರ್ ಆಗಿ ಕೆಲಸ ಮಾಡುತ್ತಿದ್ದರು.
ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚೌಹಾಣ್ ಅವರು ಮಾತನಾಡಿ, ಮೃತ ಕಾರ್ಮಿಕನು ಡಿಪೋ ಪುನರ್‌ನಿರ್ಮಾಣ ಕಾರ್ಯದಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ. ಕೆಲಸದ ಬಳಿಕ ಕಾರ್ಮಿಕರಿಗೆ ಒದಗಿಸಲಾದ ಶಿಬಿರದಲ್ಲಿ ಉಳಿದುಕೊಳ್ಳುತ್ತಿದ್ದ ಎಂದು ಹೇಳಿದ್ದಾರೆ.
ಮೃತ ವ್ಯಕ್ತಿ ಭಾನುವಾರ ರಾತ್ರಿ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಜಗಳವಾಡಿದ್ದಾನೆ. ತಾಯಿಯೊಂದಿಗೆ ಜಗಳವಾಡುತ್ತಿದ್ದುದ್ದನ್ನು ಸಹೋದ್ಯೋಗಿಗಳು ಕೇಳಿಸಿಕೊಂಡಿದ್ದಾರೆ. ಕೊನೆಯದಾಗಿ ಸ್ನೇಹಿತರಿಗೆ ಭಾನುವಾರ ರಾತ್ರಿ 11.30 ರ ಹೊತ್ತಿಗೆ ಕಾಣಿಸಿಕೊಂಡಿದ್ದಾನೆ. ನಂತರ, ಡಿಪೋ ಪಕ್ಕದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ವ್ಯಕ್ತಿಯ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಸದ್ಯಕ್ಕೆ ಸಾವಿನ ಬಗ್ಗೆ ಯಾವುದೇ ಅನುಮಾನಗಳು ವ್ಯಕ್ತವಾಗಿಲ್ಲ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣದಂತೆಯೇ ಕಾಣುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿಗೆ ನಿಖರ ಕಾರಣಗಳು ತಿಳಿದುಬರಲಿದೆ ಎಂದು ತಿಳಿಸಿದ್ದಾರೆ.
ಮೃತದೇಹವನ್ನು ಸಿವಿ ರಾಮನ್ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಸಿಂಗ್ ಸಹೋದರ ಉಡುಪಿಯಲ್ಲಿ ಕೆಲಸ ಮಾಡುತ್ತಿದ್ದು, ಮೃತದೇಹವನ್ನು ಪಡೆಯಲು ನಗರಕ್ಕೆ ಬರುತ್ತಿದ್ದಾರೆಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ