ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೊಳಕು ಕಾರಿನಲ್ಲಿ ಓಡಾಡುವುದು ಫ್ಯಾಶನ್ ಆಗಿದೆ ಎಂದರೆ ನೀವು ನೀರನ್ನು ಉಳಿಸುತ್ತಿದ್ದೀರಾ ಎಂದರ್ಥ. ಬಿಡಬ್ಲ್ಯೂಎಸ್ ಎಸ್ ಬಿ ಕಾರು ತೊಳೆಯುವುದು ಸೇರಿದಂತೆ ಅನಿವಾರ್ಯವಲ್ಲದ ಉದ್ದೇಶಗಳಿಗಾಗಿ ಕುಡಿಯುವ ನೀರು ಬಳಸುವುದನ್ನು ನಿಷೇಧಿಸಿದ ನಂತರ ಹಲವಾರು ಕಾರ್ ವಾಶ್ ಕೇಂದ್ರಗಳು ಆರ್ಥಿಕ ನಷ್ಟವನ್ನು ಅನುಭವಿಸುತ್ತಿವೆ.
ನಿಯಮ ಉಲ್ಲಂಘನೆಗೆ ರೂ 5,000 ಭಾರಿ ದಂಡ ವಿಧಿಸುವ ಆದೇಶ ನಗರದ ಜೆಸಿ ನಗರ ಮತ್ತು ಶಿವಾಜಿನಗರ ಪ್ರದೇಶಗಳಲ್ಲಿನ ಅನೇಕ ಕಾರ್ ವಾಶ್ ಘಟಕಗಳು ಮತ್ತು ಅದರ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದ್ದು, ಅವರು ಪರ್ಯಾಯ ಆದಾಯದ ಮೂಲಗಳನ್ನು ಹುಡುಕುವುದನ್ನು ಬಿಟ್ಟರೇ ಬೇರೆ ದಾರಿಯಿಲ್ಲ.
ಬಿಡಬ್ಲ್ಯೂಎಸ್ ಎಸ್ ಬಿ ಆದೇಶ ವಿರೋಧಿಸಿರುವ ಕಾರ್ ವಾಶ್ ಸೆಂಟರ್ ಗಳು, ಕಾರು ತೊಳೆಯಲು ತಮ್ಮ ಅಗತ್ಯಗಳನ್ನು ಪೂರೈಸಲು ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಿರುವುದಾಗಿ ವಾದಿಸುತ್ತಾರೆ. ಹೆಚ್ಚಿನ ಉಪ್ಪಿನ ಅಂಶದಿಂದಾಗಿ ಸಂಸ್ಕರಿಸಿದ ನೀರನ್ನು ಬಳಸುವುದು ಕಾರ್ಯಸಾಧ್ಯವಲ್ಲ, ಇದು ವಾಹನದ ಬಣ್ಣ ಮತ್ತು ಗುಣಮಟ್ಟವನ್ನು ಸಂಭಾವ್ಯವಾಗಿ ಹಾನಿಗೊಳಿಸುತ್ತದೆ ಎಂದು ಅವರು ವಿವರಿಸಿದ್ದಾರೆ.
“ನಮ್ಮ ವ್ಯವಹಾರ ಮುಂದುವರಿಸಲು, ಡ್ರೈ ವಾಶ್‌ನೊಂದಿಗೆ ನೀರು-ಸಮರ್ಥ ಬಳಕೆಗೆ ಪ್ರಯತ್ನಿಸಿದೆವು, ಬಟ್ಟೆಯಿಂದ ಕಾರನ್ನು ಸ್ವಚ್ಛಗೊಳಿಸಲು ಮತ್ತು ವ್ಯಾಕ್ಯೂಮ್ ಬಳಸಿ ಒಳಾಂಗಣ ಸ್ವಚ್ಛಗೊಳಿಸಲು ಪ್ರಯತ್ನಿಸಿದ್ದೇವು. ಆದರೆ ಗ್ರಾಹಕರು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿಲ್ಲ. ಅನೇಕರು ತಮ್ಮ ಕಾರುಗಳನ್ನು ಸ್ವತಃ ತೊಳೆಯಲು ಪ್ರಾರಂಭಿಸಿದ್ದಾರೆ. "ಈ ಪ್ರವೃತ್ತಿಯು ದೀರ್ಘಾವಧಿಯಲ್ಲಿ ಮುಂದುವರಿಯಬಹುದು ಎಂಬ ಆತಂಕವಿದೆ ಎಂದು ಶಿವಾಜಿನಗರದ ವಾಶ್ ಎನ್ ವಾಶ್ ಸೇವಾ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಹಬೀಬ್ ಟಿಎನ್‌ಐಇಗೆ ತಿಳಿಸಿದರು.
"ಸದ್ಯದ ನೀರಿನ ಬಿಕ್ಕಟ್ಟಿನಿಂದಾಗಿ, ಕಾರ್ ವಾಶ್ ಸೆಂಟರ್ ಅನ್ನು ಮುಚ್ಚಲು ಹತ್ತಿರವಾಗಿದ್ದೇವೆ" ಎಂದು ಶಿವಾಜಿನಗರದ ಹಜರತ್ ಕಾರ್ ಮತ್ತು ಬೈಕ್ ಸ್ಪಾ ಸೆಂಟರ್‌ನ ಮಾಲೀಕ ಶಾರುಖ್ ಅಲಿ ಹೇಳಿದರು. ಮೂರು ಜನರ ತಂಡವನ್ನು ಹೊಂದಿದ್ದ ಶಾರುಖ್ ಅವರಿಗೆ ಈಗ ಕೆಲಸದಲ್ಲಿ ಸಹಾಯ ಮಾಡಲು ಮಣಿ ಮಾತ್ರ ಇದ್ದಾರೆ. "ಇಬ್ಬರೂ ಉದ್ಯೋಗಿಗಳು ನಿರ್ಮಾಣ ಯೋಜನೆಗಳಲ್ಲಿ ದೈನಂದಿನ ಕೂಲಿ ಕಾರ್ಮಿಕರಾಗಿ ಬದಲಾಗಿದ್ದಾರೆ" ಎಂದು ಶಾರುಖ್ ತಿಳಿಸಿದರು.
ಜೆಸಿ ನಗರದ ಸಲೀಂ ಕಾರ್ ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದ ಜಾವೇದ್, “ಅಗತ್ಯವಲ್ಲದ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುವ ಕುಟುಂಬಗಳಿಗೆ ಬಿಡಬ್ಲ್ಯೂಎಸ್‌ಎಸ್‌ಬಿ ದಂಡ ಹೇರಿದ ನಂತರ ಜನರು ತುಂಬಾ ಜಾಗರೂಕರಾಗಿದ್ದಾರೆ. ನಮ್ಮ ಸಾಮಾನ್ಯ ಗ್ರಾಹಕರು ಸಹ ಚಿಂತಿತರಾಗಿದ್ದಾರೆ ಮತ್ತು ಅವರು ತಮ್ಮ ವಾಹನಗಳನ್ನು ತೊಳೆಯಲು ನೀರು ತಂದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಭಯಪಡುತ್ತಾರೆ ಎಂದು ತಿಳಿಸಿದರು.
Advertisement