ಬೆಂಗಳೂರು: ತೋಟದ ಮನೆಯಲ್ಲಿ ವಾಸವಿದ್ದ ಒಂಟಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊದು ಕಗ್ಗಲಿಪುರ ಪೊಲೀಸ್ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಶಾಂತಮ್ಮ (63) ಹತ್ಯೆಯಾದ ಮಹಿಳೆ. ಶಾಂತಮ್ಮ ಅವರ ಪುತ್ರ 5 ವರ್ಷಗಳ ಹಿಂದೆ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದ. 10 ತಿಂಗಳ ಹಿಂದೆ ಪತಿ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದರು. ಪತಿ ಹಾಗೂ ಪುತ್ರನನ್ನು ಕಳೆದುಕೊಂಡಿದ್ದ ಶಾಂತಮ್ಮ ಗಿರಿಗೌಡನ ದೊಡ್ಡಿಯಲ್ಲಿನ ಐದು ಎಕರೆ ವಿಸ್ತೀರ್ಣದ ಫಾರ್ಮ್‌ಹೌಸ್‌ನಲ್ಲಿ ಒಬ್ಬರೇ ವಾಸವಿದ್ದರು.
ಮೃತ ಮಹಿಳ ಗಿರಿನಗರದಲ್ಲಿ ಸ್ಟೀಲ್ ಫ್ಯಾಕ್ಟರಿ ಕೂಡ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಮಂಗಳೂರಿನಲ್ಲಿ ವೈದ್ಯರಾಗಿರುವ ಆಕೆಯ ಸೋದರಳಿಯ ಆಕೆಗೆ ಪರ್ಸನಲ್ ಡ್ರೈವರ್ ವ್ಯವಸ್ಥೆ ಮಾಡಿದ್ದ. ಚಾಲಕ ವೀರೇಶ್ ಆಕೆಯನ್ನು ಸ್ಟೀಲ್ ಫ್ಯಾಕ್ಟರಿ ಮತ್ತಿತರ ಕಡೆ ಕರೆದುಕೊಂಡು ಹೋಗುತ್ತಿದ್ದ.
ಶುಕ್ರವಾರ ಸಂಜೆ ಫಾರ್ಮ್ ಹೌಸ್‌ನಲ್ಲಿ ಮಹಿಳೆಯನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದು, ಆಕೆಯ ಚಾಲಕನ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ. ಘಟನೆ ಬಳಿಕ ಚಾಲಕ ಶಾಂತಮ್ಮ ಅವರ ಸೋದರಳಿಯನಿಗೆ ಮಾಹಿತಿ ನೀಡಲು ಮಂಗಳೂರಿಗೆ ತೆರಳಿದ್ದಾರೆ. ಸುದ್ದಿ ತಿಳಿದ ಬಳಿಕ ಶಾಂತಮ್ಮ ಅವರ ಸೋದರಳಿಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಕೊಲೆಗೆ ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಗಿರಿನಗರದಲ್ಲಿರುವ ಸ್ಟೀಲ್ ಫ್ಯಾಕ್ಟರಿಗೆ ಪೊಲೀಸ್ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಶಾಂತಮ್ಮ ಅವರು ಇತ್ತೀಚೆಗೆ ಎರಡು ಎಕರೆ ವಿವಾದಿತ ಭೂಮಿಯನ್ನು ಖರೀದಿಸಿದ್ದರು. ಈ ಸಂಬಂಧ ಜಮೀನಿನ ಹಿಂದಿನ ಮಾಲೀಕ ಹಾಗೂ ಶಾಂತಮ್ಮ ನಡುವೆ ಜಗಳ ನಡೆದಿತ್ತು. ತನ್ನ ಸಹಿ ಇಲ್ಲದೇ ಭೂಮಿ ಖರೀದಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಭೂಮಿ ಖರೀದಿಯೇ ಆಕೆಯ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ ಎಂದು ತನಿಖೆಯ ಭಾಗವಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೋಟದ ಮನೆಗೆ ಸಂಪೂರ್ಣವಾಗಿ ಬೇಲಿ ಹಾಕಲಾಗಿತ್ತು. ಹೊರಗಿನವರು ಒಳಗೆ ಹೋಗುವುದು ಕಷ್ಟ. ಹೀಗಾಗಿ ಒಳಗಿನವರ ಕೈವಾಡವಿರುವ ಶಂಕೆಯೂ ಇದೆ ಎಂದು ಶಾಂತಮ್ಮ ಸಂಬಂಧಿ ಹೇಳಿದ್ದಾರೆ. ಇದೀಗ ಶಾಂತಮ್ಮ ಅವರ ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಹಂತಕರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Advertisement