
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಲಾರ್ಪಣೆ ಮಾಡಿದ ರಿಯಾಜ್ ಸಿದ್ದಾಪುರ ರ್ಯಾಲಿ ಉಸ್ತುವಾರಿ ವಹಿಸಿಕೊಂಡಿದ್ದ. ಆತ ತುಂಬಾ ಒಳ್ಳೇ ಹುಡುಗ, ಅವನಿಗೆ ಗನ್ ಲೈಸೆನ್ಸ್ ಇದೆ ಎಂದು ಕಾಂಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್ ಅವರು ಹೇಳಿದ್ದಾರೆ.
ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಪ್ರಚಾರ ನಡೆಸುವಾಗ ಭದ್ರತಾಲೋಪವಾಗಿತ್ತು.
ವಿಲ್ಸನ್ ಗಾರ್ಡನ್ ಬಳಿ ತೆರೆದ ವಾಹದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತ ರಿಯಾಜ್ ಎಂಬಾತ ಸೊಂಟದಲ್ಲಿ ಗನ್ ಇರಿಸಿಕೊಂಡು ಪ್ರಚಾರದ ವಾಹನ ಏರಿ ಮುಖ್ಯಮಂತ್ರಿಗಳಿಗೆ ಹಾರ ಹಾಕಿದ್ದು, ಈ ಘಟನೆ ಚರ್ಚೆಗೆ ಗ್ರಾಸವಾಗಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್ ಅವರು, ಹೂವಿನ ಹಾರ ತೆಗೆದುಕೊಂಡು ಎಲ್ಲರೂ ನಿಂತಿದ್ದರು. ನಾನೇ ರಿಯಾಜ್ಗೆ ಹೂವಿನ ಹಾರ ಹಾಕಲು ಮೇಲೆ ಕರೆದೆ. ಅದರಂತೆ ರಿಯಾಜ್ ಬಂದು ಹೂವಿನ ಹಾರ ಹಾಕಿದ್ದಾನೆ. ಅದು ಬಿಟ್ಟರೇ ಬೇರೆ ಯಾವುದೇ ಉದ್ದೇಶ ಇರಲಿಲ್ಲ. ಬೇರೆ ಉದ್ದೇಶದಿಂದ ಬಂದಿದ್ದರೆ ಮುಖ್ಯಮಂತ್ರಿಗಳ ರಕ್ಷಣೆಗೆ ನಾವೇ ನಿಲ್ಲುತಿದ್ದೆವು. ಇದು ಆಕಸ್ಮಿಕವಾಗಿ ನಡೆದಿರೋ ಘಟನೆ ಎಂದು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಾತನಾಡಿ, ಇಲ್ಲಿ ಭದ್ರತಾ ವೈಫಲ್ಯ ಯಾವುದೂ ಆಗಿಲ್ಲ. ಅವರವರ ರಕ್ಷಣೆಗೆ ಅವರು ಗನ್ ಇಟ್ಟುಕೊಂಡಿರುತ್ತಾರೆ. ನನ್ನ ಜೊತೆನೂ ಗನ್ ಮ್ಯಾನ್ಗಳು ಇದ್ದಾರೆ. ವಿಪಕ್ಷಗಳು ಒಳ್ಳೆಯ ವಿಷಯ ಇದ್ದರೆ ಮಾತನಾಡಬೇಕು ಎಂದು ಹೇಳಿದ್ದಾರೆ.
ಘಟನೆ ಬಳಿಕ ರಿಯಾಜ್ ಅಹಮದ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಗೊಳಪಡಿಸಿದ್ದಾರೆ.
ದೇವರಾಜ್ ಸಾಹೇಬ್ರು ಮೇಲೆ ಬಾ ಎಂದರು. ಹೀಗಾಗಿ ವೆಹಿಕಲ್ ಮೇಲೆ ಹೋಗಿ ಸಿಎಂ ಸಾಹೇಬ್ರಿಗೆ ಹಾರ ಹಾಕಿದೆ. ಅವರು ಕರೆಯದಿದ್ದರೆ ನಾನು ಸಿಎಂ ಬಳಿ ಹೋಗ್ತಿರಲಿಲ್ಲ. ನನ್ನ ಪಾಡಿಗೆ ನಾನು ಸಿಎಂ ಪ್ರಚಾರದ ವೆಹಿಕಲ್ ಬಂದಾಗ ಸೈಡಲ್ಲಿ ನಿಂತುಕೊಂಡು ನೋಡುತ್ತಿದ್ದೆ. ವೆಹಿಕಲ್ ಮೇಲೇರಿದಾಗ ಆಕಸ್ಮಿಕವಾಗಿ ಸೊಂಟದಲ್ಲಿದ್ದ ಗನ್ ಕಂಡಿದೆ. ಗನ್ ಪ್ರದರ್ಶನ ಮಾಡಬೇಕು ಎನ್ನುವ ಉದ್ದೇಶ ಇರಲಿಲ್ಲ. ನನಗೆ ಜೀವ ಬೆದರಿಕೆ ಇದೆ, ಹೀಗಾಗಿ ಪ್ರತೀ ದಿನ ಗನ್ ಇಟ್ಟುಕೊಂಡೇ ಹೊರಗೆ ಬರುತ್ತೇನೆಂದು ರಿಯಾಜ್ ಹೇಳಿದ್ದಾರೆ.
Advertisement