ಹೊಸ ತೊಡಕು ಆಚರಣೆ, ಮದ್ಯ-ಮಾಂಸ ವಿತರಣೆ: HDK ಬಿಡದಿ ತೋಟದ ಮನೆಗೆ ಚುನಾವಣಾಧಿಕಾರಿಗಳ ಭೇಟಿ, ಪರಿಶೀಲನೆ

ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದಾರೆಂದು ತಿಳಿದುಬಂದಿದೆ.
ಚುನಾವಣಾಧಿಕಾರಿಗಳು.
ಚುನಾವಣಾಧಿಕಾರಿಗಳು.

ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದಾರೆಂದು ತಿಳಿದುಬಂದಿದೆ.

ಯುಗಾದಿ ಹಬ್ಬದ ಹೊಸ ತೊಡಕು ಹೆಸರಲ್ಲಿ ಕುಮಾರಸ್ವಾಮಿಯವರು ಮತದಾರರು ಹಾಗೂ ಕಾರ್ಯಕರ್ತರಿಗೆ ಬಿಡದಿಯಲ್ಲಿ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.

ಈ ಬಗ್ಗೆ ರಾಜ್ಯ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡು, ಜೆಡಿಎಸ್ ವಿರುದ್ಧ ಕಿಡಿಕಾರಿತ್ತು.

ಜೆಡಿಎಸ್ ಪಕ್ಷದ ಹೆಡ್ಡಾಫೀಸ್‌ನಂತಿರುವ ಬಿಡದಿ ತೋಟದ ಮನೆಯಿಂದ ಮದ್ಯ ಹಾಗೂ ಬಾಡೂಟದ ಘಮಲು ಹೊರಬರುತ್ತಿದೆಯಂತೆ? ಸೋಲಿನ ಭೀತಿಯಿಂದ ಹೊಸ ತೊಡಕಿನ ಹೆಸರಲ್ಲಿ ಮತದಾರರಿಗೆ, ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡಿರುವ ಕುರಿತು ಮಾಹಿತಿಗಳಿದ್ದರೂ ಚುನಾವಣಾ ಅಧಿಕಾರಿಗಳಿ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಿರುವುದೇಕೆ? ಎಂದು ಪ್ರಶ್ನಿಸಿತ್ತು.

ಸೋಲಿನ ಭಯದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮದ್ಯ, ಮಾಂಸದ ರುಚಿ ತೋರಿಸಿ ಮತ ಕೇಳಲು ಮುಂದಾಗಿವೆಯೇ? ರಾಮನಗರ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಬಾಡೂಟದ ಆಮಿಷವನ್ನು ತಡೆಯದೇ ವಾಮಮಾರ್ಗದ ಚುನಾವಣೆಗೆ ಬೆಂಬಲ ನೀಡುತ್ತಿದ್ದಾರೆಯೇ? ಎಂದು ಪೋಸ್ಟ್ ಮಾಡಿತ್ತು.

ಆರೋಪ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಬಿಡದಿಯ ಕೇತಗಾನಹಳ್ಳಿ ತೋಟದ ಮನೆ ಮಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಊಟದ ವ್ಯವಸ್ಥೆ, ಖುರ್ಚಿ, ಪೆಂಡಾಲ್ ಪರಿಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಚುನಾವಣಾ ಅಧಿಕಾರಿ ರಮೇಶ್ ಅವರು ಮಾತನಾಡಿ, 50ಕ್ಕೂ ಮಂದಿ ಸೇರಿದರೆ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆಗುತ್ತದೆ. ಕುಟುಂಬಸ್ಥರಿಗೆ ಊಟದ ವ್ಯವಸ್ಥೆ ಮಾಡಬಹುದು. ಆದರೆ ರಾಜಕೀಯ ನಾಯಕರು, ಮುಖಂಡರು ಬರುವ ಹಾಗಿಲ್ಲ. ಒಂದು ವೇಳೆ ರಾಜಕೀಯ ಮುಖಂಡರು ಬಂದರೆ ಎಲ್ಲವನ್ನೂ ಸೀಜ್ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಸದ್ಯ ಒಳಗೆ ಯಾವುದೇ ರಾಜಕೀಯ ಮುಖಂಡರು, ನಾಯಕರು ಇಲ್ಲ. ಒಂದು ಟೀಂ ಇಲ್ಲೇ ಇದ್ದು ಎಲ್ಲವನ್ನೂ ಪರಿಶೀಲನೆ ನಡೆಸಲಿದೆ. ನೀತಿ ಸಂಹಿತೆ ಉಲ್ಲಂಘನೆಯಾದರೆ ಕಾನೂನು ರೀತಿಯ ಕ್ರಮವಹಿಸುತ್ತೇವೆ. ಈಗಾಗಲೇ ಖುರ್ಚಿಗಳನ್ನು ತೆರವು ಮಾಡಲಾಗಿದೆ ಎಂದು ಹೇಳಿದ್ದಾರೆ.

ಚುನಾವಣಾಧಿಕಾರಿಗಳು.
ಲೋಕಸಭಾ ಚುನಾವಣೆ: NDA ಗೆದ್ದರೆ ಕೃಷಿ ಸಚಿವನಾಗಲು ಬಯಸುತ್ತೇನೆ- ಹೆಚ್ ಡಿ ಕುಮಾರಸ್ವಾಮಿ

ಆರೋಪ ಕುರಿತು ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿಯವರು, ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ತಹಶೀಲ್ದಾರ್​ಗೆ ಪದೇ ಪದೇ ಕರೆ ಮಾಡಿ ಒತ್ತಡ ಹಾಕಿಸಿದ್ದಾರೆ. ನಮ್ಮ ಮನೆಯಲ್ಲಿ ಪರಿಶೀಲಿಸಿದ್ದಾರೆ. ಅಲ್ಲಿ ಏನೂ ಸಿಕ್ಕಿಲ್ಲ. ನನ್ನ ತೋಟದ ಮನೆಯಲ್ಲಿ 120 ಜನ ಕೆಲಸ ಮಾಡುತ್ತಿದ್ದಾರೆ. ಕೆಲಸಗಾರರಿಗೆ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದೇನೆ. ನಾನು ಬಿಡದಿಯ ಕೇತಗಾನಹಳ್ಳಿ ತೋಟದ ಮನೆಗೆ ಹೋಗಲ್ಲ. ನಾವು ಪಕ್ಷದ ಕೆಲ ಮುಖಂಡರನ್ನು ಕರೆದು ಸಭೆ ನಡೆಸಲಿದ್ದೆವು ಎಂದು ಹೇಳಿದ್ದಾರೆ.

ಕಾಂಗ್ರೆಸ್​ಗೆ ಕೆಪಿಸಿಸಿ ಕಚೇರಿ, ಬಿಜೆಪಿಗೆ ಕೇಶವ ಕೃಪ ಹೆಡ್ ಆಫೀಸ್​ ಇದ್ದ ಹಾಗೆ, ನಮಗೆ ನಮ್ಮ ತೋಟದ ಮನೆ ಹೆಡ್​ ಆಫೀಸ್​​. ನನಗೂ ತಲೆ ಇದೆ. ಏನು ಮಾಡಬೇಕು ಎಂಬುದು ಗೊತ್ತಿದೆ. ಜಾತ್ಯಾತೀತ ಅಂತ ಹೇಳುವವರು, ಪ್ರತಿ ದಿನ ಜಾತಿ ಬಗ್ಗೆಯೇ ಮಾತಾಡುತ್ತಾರೆ. ನಮ್ಮ ಸಮಾಜದ ಜನ ದಡ್ಡರಲ್ಲ. ನಮ್ಮ ಸಮುದಾಯದ ಸ್ವಾಮೀಜಿಗಳನ್ನು ನಾವು ರಾಜಕೀಯವಾಗಿ ದುರುಪಯೋಗ ಮಾಡಿಕೊಂಡಿಲ್ಲ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com