ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ; 2.24 ಕೋಟಿ ರೂ. ಕಳೆದುಕೊಂಡ ಬೆಂಗಳೂರಿನ ಟೆಕ್ಕಿ!

ದೆಹಲಿಯ ಕಸ್ಟಮ್ಸ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಎಂದು ಹೇಳಿ, ನಗರದ 52 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಗೆ 2.24 ಕೋಟಿ ರೂಪಾಯಿ ವಂಚಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇತ್ತೀಚಿಗೆ ಸೈಬರ್​ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆನ್​ಲೈನ್ ವಂಚನೆಗೆ ಒಳಗಾಗಿ ಬೆಂಗಳೂರಿನ ಮಹಿಳೆಯೊಬ್ಬರು 14 ಲಕ್ಷ ರೂ. ಕಳೆದುಕೊಂಡ ಬೆನ್ನಲ್ಲೇ, ತಾವು ದೆಹಲಿಯ ಕಸ್ಟಮ್ಸ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಎಂದು ಹೇಳಿ, ನಗರದ 52 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಗೆ 2.24 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬೆಂಗಳೂರಿನ 29 ವರ್ಷದ ಮಹಿಳಾ ವಕೀಲರೊಬ್ಬರಿಗೆ 14.57 ಲಕ್ಷ ರೂಪಾಯಿ ವಂಚಿಸಿದ ರೀತಿಯಲ್ಲೇ ಜಕ್ಕೂರಿನ ಟೆಕ್ಕಿ ಕುಮಾರಸ್ವಾಮಿ ಶಿವಕುಮಾರ್ ಅವರನ್ನು ವಂಚಿಸಲಾಗಿದೆ.

ಮಾರ್ಚ್ 18 ರಿಂದ ಮಾರ್ಚ್ 27 ರ ನಡುವೆ ಸಾಫ್ಟ್‌ವೇರ್ ಇಂಜಿನಿಯರ್‌ ಕುಮಾರಸ್ವಾಮಿಗೆ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ವಂಚಕರು, ‘ನಿಮ್ಮ ಏರ್ ಪಾರ್ಸಲ್ ದೆಹಲಿಯ ಕಸ್ಟಮ್ಸ್​​​ನಲ್ಲಿ ಸೀಜ್ ಮಾಡಲಾಗಿದೆ. ಅದರಲ್ಲಿ ನಿಮ್ಮ ಹೆಸರಿನ ನಕಲಿ ಪಾಸ್ ಪೋರ್ಟ್​​, ಬ್ಯಾಂಕ್ ಎಟಿಎಂ ಕಾರ್ಡ್​​ಗಳು, ಎಂಡಿಎಂಎ ಡ್ರಗ್ಸ್ ಇದೆ’ ಎಂದು ಸುಳ್ಳು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
ಬೆಂಗಳೂರು: ಸೈಬರ್ ಕ್ರೈಂಗೆ 14.57 ಲಕ್ಷ ರೂ. ಕಳೆದುಕೊಂಡ ವಕೀಲೆ; ಕ್ಯಾಮರಾ ಮುಂದೆ ಬೆತ್ತಲಾಗುವಂತೆ ಮಾಡಿದ ವಂಚಕರು!

ನಂತರ, ಈ ವಿಚಾರ ಆ್ಯಂಟಿ ನಾರ್ಕೊಟಿಕ್ ಬ್ಯೂರೊಗೆ ತಿಳಿದಿದೆ. ಹಾಗಾಗಿ ದೂರು ದಾಖಲು ಮಾಡಬೇಕು ಎಂದಿದ್ದಾರೆ. ದೂರು ನೀಡಲು ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ವಂಚಕ ಸೂಚನೆ ನೀಡಿದ್ದು, ಅದನ್ನು‌‌ ನಂಬಿ ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿದ ಟೆಕ್ಕಿ ಅದರ ಮೂಲಕ ದೂರು ನೀಡಲು ಆರೋಪಿ ಹೇಳಿದಂತೆಯೇ ಮಾಡಿದ್ದಾರೆ.

ಡೌನ್‌ಲೋಡ್ ಮಾಡಿ, ಆನ್‌ಲೈನ್‌ಗೆ ಬರುವಂತೆ ಒತ್ತಾಯಿಸಿದ್ದಾರೆ. ನಂತರ ಪೊಲೀಸ್ ಸಮವಸ್ತ್ರದಂತೆಯೇ ಕಾಣುವ ದಿರಿಸು ಧರಿಸಿದ್ದ ವ್ಯಕ್ತಿ, ನಿಮ್ಮ ಮೇಲೆ‌ ಮನಿ‌ ಲಾಂಡರಿಂಗ್ ಪ್ರಕರಣ ಕೂಡ ಇದೆ. ಸಿಬಿಐನವರು ಈ ಬಗ್ಗೆ ವಿಚಾರಣೆ ಮಾಡುತ್ತಾರೆ ಎಂದು ಹೆದರಿಸಿದ್ದ. ಕೊನೆಗೆ ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಹಣ ನೀಡುವಂತೆ ಕೇಳಿದ್ದ. ಜೊತೆಗೆ ಕೆಲವೊಂದು ಅಕೌಂಟ್ ನಂಬರ್​ಗಳನ್ನೂ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚಕರಿಗೆ ಹಂತ ಹಂತವಾಗಿ ಆರ್‌ಟಿಜಿಎಸ್ ಮತ್ತು ಐಎಂಪಿಎಸ್ ಮೂಲಕ ಎಂಟು ಕಂತುಗಳಲ್ಲಿ 2.24 ಕೋಟಿ ರೂ.ಗಳನ್ನು ಪಾವತಿಸಿದ್ದೇನೆ ಎಂದು ಶಿವಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ.

ತಾನು ವಂಚನೆಗೆ ಒಳಗಾಗಿರುವುದನ್ನು ಅರಿತುಕೊಂಡ ಶಿವಕುಮಾರ್ ಏಪ್ರಿಲ್ 5 ರಂದು ಬೆಂಗಳೂರು ಈಶಾನ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಅಪರಿಚಿತ ವಂಚಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ತಿಂಗಳ ಆರಂಭದಿಂದ ಈಶಾನ್ಯ ಸೈಬರ್ ಕ್ರೈಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 25 ಜನರು ಈ ರೀತಿಯ ವಂಚನೆಗೆ ಬಲಿಯಾಗಿದ್ದಾರೆ ಮತ್ತು ನಾಲ್ಕು ಕೋಟಿ ರೂ. ಕಳೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com