ಎಸ್‌ಎಂ ಕೃಷ್ಣ
ಎಸ್‌ಎಂ ಕೃಷ್ಣ

ಬ್ರ್ಯಾಂಡ್ ಬೆಂಗಳೂರು ನಿರ್ಮಾಣಕ್ಕೆ ಎಲ್ಲಾ ಸರ್ಕಾರಿ ಸಂಸ್ಥೆಗಳು ಒಗ್ಗೂಡಿ ಕೆಲಸ ಮಾಡಬೇಕು: ಎಸ್‌ಎಂ ಕೃಷ್ಣ (ಸಂದರ್ಶನ)

ಕಳೆದ ವರ್ಷ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್‌ಎಂ ಕೃಷ್ಣ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ‘ಬ್ರಾಂಡ್ ಬೆಂಗಳೂರು’, ನೀರಿನ ಸಮಸ್ಯೆ, ಭಾರತದ ವಿದೇಶಾಂಗ ನೀತಿ, ಕೆಫೆ...

ಬೆಂಗಳೂರು: ಕಳೆದ ವರ್ಷ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್‌ಎಂ ಕೃಷ್ಣ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ‘ಬ್ರಾಂಡ್ ಬೆಂಗಳೂರು’, ನೀರಿನ ಸಮಸ್ಯೆ, ಭಾರತದ ವಿದೇಶಾಂಗ ನೀತಿ, ಕೆಫೆ ಕಾಫಿ ಡೇ ಸೇರಿ ಬೆಂಗಳೂರಿನ ಇತರೆ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಂತಿವೆ...

Q

ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ತವದಲ್ಲಿ ಬ್ರ್ಯಾಂಡ್ ಬೆಂಗಳೂರು ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ ಎಂದೆನಿಸುತ್ತಿದೆಯೇ?

A

ಬ್ರ್ಯಾಂಡ್ ಬೆಂಗಳೂರನ್ನು ಕೆಲವೇ ತಿಂಗಳುಗಳಲ್ಲಿ ಪುನಶ್ಚೇತನಗೊಳ್ಳುವಂತೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ನಿರಂತರ ಪ್ರಯತ್ನಗಳು ಬೇಕು. ಶಿವಕುಮಾರ್ ಅವರ ಆತಂಕ ಚಿಂತನೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ಇದಕ್ಕೆ ಹೆಚ್ಚಿನ ಪ್ರಯತ್ನದ ಅಗತ್ಯವಿದೆ ಎಂಬುದು ನನ್ನ ಭಾವನೆ. ಒಳ್ಳೆಯ ಉದ್ದೇಶಗಳೇನೋ ಕಂಡು ಬರುತ್ತಿದೆ. ಆದ್ದರಿಂದ ಪ್ರಾಯೋಗಿಕವಾಗಿ ಮಾಡಲು ಎಲ್ಲಾ ಸರ್ಕಾರಿ ಸಂಸ್ಥೆಗಳು ಒಗ್ಗೂಡಿ ಕೆಲಸ ಮಾಡಬೇಕು.

Q

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಎದುರಾಗಿದೆ. ನೀವು ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ರೀತಿಯ ನೀರಿನ ಕೊರತೆ ಇತ್ತು. ಈ ನೀರಿನ ಬಿಕ್ಕಟ್ಟಿನಿಂದ ಹೊರಬರುವ ಮಾರ್ಗವೇನು?

A

ಪ್ರತಿ ಬೇಸಿಗೆಯಲ್ಲಿ ನಾವು ಈ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುತ್ತೇವೆ. ನಾವೆಲ್ಲರೂ ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಸೋಮನಹಳ್ಳಿ, ಮದ್ದೂರಿನಲ್ಲಿ ನಮ್ಮದು ಒಂದು ಚಿಕ್ಕ ತೊಟ್ಟಿಯಿತ್ತು. ಇದೇ ರೀತಿ ಹಲವಾರು ತೊಟ್ಟಿಗಳು ನೀರು ಸಂಗ್ರಹಿಸಲು ಇದ್ದವು. ಆದರೆ, ಈಗ ಏನಾಗಿದೆ ಎಂದರೆ ಅವೆಲ್ಲವೂ ಹೂಳು ತುಂಬಿ ಹೋಗಿವೆ. ಇದರ ಪರಿಣಾಮವಾಗಿ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ. ಕೆಲವೊಮ್ಮೆ, ಇವುಗಳನ್ನು ನಿರ್ಮೂಲನೆ ಮಾಡುವುದು ಆರ್ಥಿಕವಾಗಿ ಕಾರ್ಯಸಾಧ್ಯವಾಗುವುದಿಲ್ಲ. ಆದ್ದರಿಂದ ನಾವು ಕೆಲವೊಮ್ಮೆ ಸಮಸ್ಯೆಗಳು ಎದುರಾಗುತ್ತದೆ. ಆದರೆ, ಹೂಳುಗಳ ನಿರ್ಮೂಲನೆ ನಿಜವಾಗಿಯು ಪರಿಹಾರವಾಗಲಿದೆ.

Q

ನೀವು ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದೀರಿ. ಇದೀಗ ರಾಷ್ಟ್ರೀಯವಾಗಿ ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದಂತೆ ತುಂಬಾ ಬದಲಾವಣೆಯಾಗಿದೆ. ಭಾರತದ ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಕುರಿತು ನೀವು ಏನನ್ನು ಹೇಳಲು ಬಯಸುವಿರಿ?

A

ಪ್ರಸ್ತುತ ವಿದೇಶಾಂಗ ವ್ಯವಹಾರಗಳು ಅತ್ಯಂತ ಸಮರ್ಥ ವ್ಯಕ್ತಿ ಜೈಶಂಕರ್ ಅವರ ಕೈಯಲ್ಲಿವೆ. ಶ್ರೀ ಜೈಶಂಕರ್ ಉತ್ತಮ ನಾಯಕರಲ್ಲಿ ಒಬ್ಬರು. ಅಮೆರಿಕಾ ಮತ್ತು ಚೀನಾದಲ್ಲಿ ರಾಯಭಾರಿಯಾಗಿದ್ದರು. ನಾನು ವಿದೇಶಾಂಗ ಸಚಿವನಾಗಿದ್ದಾಗ ಭಾರತಕ್ಕೆ ಇಂದು ಪ್ರಪಂಚದಾದ್ಯಂತ ಇರುವಂತಹ ವರ್ಚಸ್ಸು ಇರಲಿಲ್ಲ. 10 ವರ್ಷಗಳಲ್ಲಿ, ವಿದೇಶಾಂಗ ವ್ಯವಹಾರಗಳ ಮೇಲೆ ಭಾರತದ ಛಾಪು ಬಹಳ ಬಹಳ ನಿರರ್ಗಳವಾಗಿ ಬೆಳೆದಿದೆ. ವಿಶ್ವ ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಪ್ರಧಾನಿ ಮೋದಿಯವರೂ ವಿಶ್ವದಾದ್ಯಂತ ಅಪಾರವಾದ ಮೆಚ್ಚುಗೆ ಪಡೆದಿದ್ದಾರೆ, ಇದು ನಮ್ಮ ಅದೃಷ್ಟ. ಹಾಗಾಗಿ ಭಾರತಕ್ಕೆ ಹಕ್ಕಿದೆ, ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಭಾರತಕ್ಕಿದೆ.

Q

ಬಹಳಷ್ಟು ಜನರು ಪುಸ್ತಕ ಬರೆಯಲು ಕೇಳುತ್ತಿದ್ದಾರೆ. ನಿಮ್ಮ ಜೀವನ ಮತ್ತು ಸಮಯದ ಬಗ್ಗೆ ನೀವು ಆತ್ಮಚರಿತ್ರೆ ಬರೆಯುತ್ತೀರಾ?

A

ಹೌದು, ನಾನು ವಿದೇಶಾಂಗ ವ್ಯವಹಾರಗಳ ಸಚಿವನಾಗಿದ್ದ ನಂತರದ ಜೀವನದ ಕುರಿತು ಪುಸ್ತಕ ಬರೆಯಲು ಚಿಂತಿಸುತ್ತಿದ್ದೇನೆ. ಇದಕ್ಕಾಗಿ ಕೋಲ್ಕತ್ತಾದ ನನ್ನ ಪತ್ರಕರ್ತ ಸ್ನೇಹಿತನ ಸಹಾಯವನ್ನು ತೆಗೆದುಕೊಳ್ಳುತ್ತಿದ್ದೇನೆ. ನನ್ನ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಈಗಾಗಲೇ ಶೇಷಗಿರಿರಾವ್ ಮತ್ತು ಜವರೇಗೌಡ ಅವರ ಬಳಿ ‘ಕೃಷ್ಣ ಪಥ’ ಎಂಬ ಪುಸ್ತಕವಿದೆ, ಅವರಿಬ್ಬರೂ ಈಗ ಇಲ್ಲ.

Q

ನಿಮ್ಮ ಸಮಯವನ್ನು ಹೇಗೆ ಕಳೆಯುತ್ತೀರಿ?

A

ನಾನು ಇಂಟರ್ನೆಟ್ ಮತ್ತು ಯೂಟ್ಯೂಬ್ ಅನ್ನು ನೋಡುತ್ತೇನೆ. ಅದು ಸಂಪೂರ್ಣ ಬೆಳವಣಿಗೆಗಳನ್ನು ತಿಳಿಸುತ್ತದೆ. ಈ ಬೆಳವಣಿಗೆಗಳನ್ನು ತಿಳಿದುಕೊಳ್ಳುತ್ತೇನೆ.

Q

ನೂರಾರು ಜನರ ಆರೋಗ್ಯ ಸಮಸ್ಯೆಗಳಿಗೆ ನೆರವಾಗುವ ಯಶಸ್ವಿನಿ ಯೋಜನೆ ನಿಮ್ಮ ಕಾಲದಲ್ಲೇ ಆರಂಭವಾಯಿತು...?

A

ಬಹಳ ವಿನೂತನವಾದ ಮಂತ್ರಿಗಳನ್ನು ಪಡೆದ ನಾನು ಅದೃಷ್ಟಶಾಲಿಯಾಗಿದ್ದೆ. ನನ್ನ ಸರ್ಕಾರದಲ್ಲಿ ಸಚಿವ ಎ.ಎಚ್.ವಿಶ್ವನಾಥ್ ಅವರು, ಬಿಸಿಯೂಟ ಹಾಗೂ ಯಶಸ್ವಿನಿ ಯೋಜನೆಯನ್ನು ಜಾರಿಗೆ ತಂದಿದ್ದರು. ಹಲವಾರು ಜನರು ಈ ಯೋಜನೆಗಳ ಪ್ರಯೋಜನ ಪಡೆದರು. ಬೊಮ್ಮಾಯಿ ಸಿಎಂ ಆಗಿದ್ದಾಗ ಯಶ್ವಸ್ವಿನಿ ಯೋಜನೆ ಪುನಶ್ಚೇತನಗೊಂಡಿತು. ರಾಷ್ಟ್ರಮಟ್ಟದಲ್ಲಿಯೂ ಆಯುಷ್ಮಾನ್ ಭಾರತ್ ಜಾರಿಗೆ ಬಂದಿತು.

Q

ಕೆಫೆ ಕಾಫಿ ಡೇ ಕೆಲವು ಸವಾಲುಗಳನ್ನು ಎದುರಿಸುತ್ತಿದೆಯೇ?

A

ಅವರು ಕಷ್ಟದ ಸಮಯದಲ್ಲಿ ಬಂದವರು. ಈಗ ಅವರು ಉತ್ತಮವಾಗಿದ್ದಾರೆ. ನನ್ನ ಮಗಳು ಮತ್ತು ಮೊಮ್ಮಕ್ಕಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಯಶಸ್ವಿಯಾಗಿದ್ದಾರೆ. ಮುಂದೆ ಇನ್ನೂ ದಾರಿಯಿದೆ. ಕಂಪನಿಯ ವ್ಯವಹಾರಗಳನ್ನು ನಿರ್ವಹಿಸಲು ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ. ಉತ್ತಮ ಹಾದಿಯಲ್ಲಿ ಸಾಗುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com