ನಮ್ಮ ಮೆಟ್ರೋ ಸ್ಕೈವಾಕ್'ನಲ್ಲಿ ಕಾಲೇಜು ಯುವತಿಯೊಂದಿಗೆ ಅನುಚಿತ ವರ್ತನೆ: ಪ್ರಕರಣ ದಾಖಲು

ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ನಮ್ಮ ಮೆಟ್ರೋ ಸ್ಕೈವಾಕ್'ನಲ್ಲಿ ಕಾಲೇಜು ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆಯೊಂದು ಮೆಟ್ರೋದ ಪರ್ಪಲ್ ಲೈನ್‌ನಲ್ಲಿರುವ ಬೆನ್ನಿಗಾನಹಳ್ಳಿ ನಿಲ್ದಾಣದ ಬಳಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ನಮ್ಮ ಮೆಟ್ರೋ ಸ್ಕೈವಾಕ್'ನಲ್ಲಿ ಕಾಲೇಜು ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆಯೊಂದು ಮೆಟ್ರೋದ ಪರ್ಪಲ್ ಲೈನ್‌ನಲ್ಲಿರುವ ಬೆನ್ನಿಗಾನಹಳ್ಳಿ ನಿಲ್ದಾಣದ ಬಳಿ ನಡೆದಿದೆ.

ಸ್ಕೈವಾಕ್‌ನಲ್ಲಿ ಗುರುವಾರ ಮಧ್ಯಾಹ್ನ 32 ವರ್ಷದ ವ್ಯಕ್ತಿಯೊಬ್ಬ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಈ ಸಬಂಧ ವಿದ್ಯಾರ್ಥಿನಿ ರಾಮಮೂರ್ತಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್ಐಆರ್ ಬೇಡ ಎಂದು ವಿದ್ಯಾರ್ಥಿನಿ ಹೇಳಿದ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಗುರುವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ವಿದ್ಯಾರ್ಥಿನಿ ಹಳೇ ಮದ್ರಾಸ್ ರಸ್ತೆ ದಾಟಲು ಫುಟ್ ಓವರ್ ಬ್ರಿಡ್ಜ್ ನಲ್ಲಿ ನಡೆದು ಸಾಗುತ್ತಿದ್ದಾಗ (ಬಿ ಪ್ರವೇಶದ್ವಾರದಿಂದ ಎ ಪ್ರವೇಶದ್ವಾರದವರೆಗೆ) ಈ ಘಟನೆ ಸಂಭವಿಸಿದೆ.

ವಿದ್ಯಾರ್ಥಿನಿ ನಮ್ಮ ಮೆಟ್ರೋ ಪ್ರಯಾಣಿಕಳಾಗಿರಲಿಲ್ಲ. ಆದರೆ ಕೇವಲ ರಸ್ತೆ ದಾಟಲು ಸ್ಕೈವಾಕ್ ನ್ನು ಬಳಸುತ್ತಿದ್ದರು. ಈ ವೇಳೆ ಎಸ್ಕಲೇಟರ್ ಬಳಿ ವಿದ್ಯಾರ್ಥಿನಿ ಬಂದಾಗ ಎದುರು ದಿಕ್ಕಿನಲ್ಲಿ ಬಂದ ವ್ಯಕ್ತಿ ಅನುಚಿತವಾಗಿ ವರ್ತಿಸಿದ್ದೂ ಅಲ್ಲದೆ, ಆಕೆಯನ್ನು ಹಿಂಬಾಲಿಸಲು ಆರಂಭಿಸಿದ್ದಾನೆ.

ಸಂಗ್ರಹ ಚಿತ್ರ
ಅತ್ತಿಗುಪ್ಪೆ: ಮೆಟ್ರೋ ರೈಲು ಬರುತ್ತಿದ್ದಂತೆಯೇ ಹಳಿ ಮೇಲೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ನಂತರ ವಿದ್ಯಾರ್ಥಿನಿ ಮೆಟ್ರೋ ಪ್ರವೇಶ ದ್ವಾರದ ಬಳಿ ಬಂದು ಮೆಟ್ರೋ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾಳೆ. ಈ ವೇಳೆ ಮೆಟ್ರೋ ಸಿಬ್ಬಂದಿಗಳು ಆತನನ್ನು ಹಿಡಿದಿದ್ದು, ರಾಮಮೂರ್ತಿ ನಗರ ಠಾಣೆಗೆ ಒಪ್ಪಿಸಿದ್ದಾರೆ. ನಂತರ ವಿದ್ಯಾರ್ಥಿನಿ ದೂರು ದಾಖಲಿಸಿದ್ದಾಳೆ. ಆದರೆ, ಎಫ್ಐಆರ್ ದಾಖಲಿಸಿ ಪ್ರಕರಣ ಮುಂದುವರೆಸಲು ಇಚ್ಚಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

ವಿದ್ಯಾರ್ಥಿಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿ ಭಿಕ್ಷುಕ ಹಾಗೂ ಪಾನಮತ್ತನಾಗಿದ್ದ. ಉದ್ದೇಶ ಪೂರ್ವಕವಾಗಿಯೇ ಯುವತಿಯ ಹತ್ತಿರ ಹೋಗಿ, ಆಕೆಯ ಮೈಮೇಲೆ ಬೀಳಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ನಿಂದಿಸಿ, ಹಿಂಬಾಲಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾಳೆ. ತನ್ನಷ್ಟಕ್ಕೆ ತಾನು ನಡೆಯುತ್ತಿರುವುದಾಗಿ ಆತ ಹೇಳಿದ್ದಾನೆ. ಬಳಿಕ ಯುವತಿ ಮೆಟ್ರೋ ಭದ್ರತಾ ಸಿಬ್ಬಂದಿಗಳ ಸಹಾಯ ಪಡೆದುಕೊಂಡಿದ್ದಾರೆ. ನಂತರ ಸಿಬ್ಬಂದಿಗಳು 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಯುವತಿಯ ಹೇಳಿಕೆಯಂತೆ ಆತನ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವ್ಯಕ್ತಿ ಬಳಿ ಯಾವುದೇ ಗುರುತಿನ ಚೀಟಿ ಇಲ್ಲ. ವಿಚಾರಣೆ ವೇಳೆ ಪದೇ ಪದೇ ಹೆಸರು ಬದಲಿಸುತ್ತಿದ್ದ. ಆತನಿಗೆ ಖಚಿತ ಹೆಸರು ಇಲ್ಲದ ಕಾರಣ ಅನಾಧೇಯ ಹೆಸರಿನಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಿಕ್ಷೆ ಬೇಡಿದ ಹಣದಲ್ಲಿ ಕುಡಿಯುತ್ತೇನೆ. ರಾತ್ರಿ ವೇಳೆ ಟಿನ್ ಫ್ಯಾಕ್ಟರಿಯಲ್ಲಿರುವ ದರ್ಗಾದ ಫುಟ್ ಪಾತ್ ಮೇಲೆ ಮಲಗುತ್ತೇನೆಂದು ಆತ ಹೇಳಿದ್ದಾನೆ. ಎಚ್ಚರಿಕೆ ನೀಡಿ, ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com