ಬೆಂಗಳೂರು: ಬೀಗ ಹಾಕಿ ಕೆಲಸಕ್ಕೆ ಹೋಗಿದ್ದ ಅಪ್ಪ-ಅಮ್ಮ; ಮನೆಯಲ್ಲಿದ್ದ ಮಗು ಸಜೀವ ದಹನ!

ಅಪಾರ್ಟ್‌ಮೆಂಟ್‌ವೊಂದರ ಕೊಠಡಿಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು ನಾಲ್ಕು ವರ್ಷದ ಗಂಡು ಮಗು ಸುಟ್ಟು ಕರಕಲಾಗಿರುವ ಹೃದಯ ವಿದ್ರಾವಕ ಘಟನೆ ಆರ್‌.ಟಿ.ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಪಾರ್ಟ್‌ಮೆಂಟ್‌ವೊಂದರ ಕೊಠಡಿಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು ನಾಲ್ಕು ವರ್ಷದ ಗಂಡು ಮಗು ಸುಟ್ಟು ಕರಕಲಾಗಿರುವ ಹೃದಯ ವಿದ್ರಾವಕ ಘಟನೆ ಆರ್‌.ಟಿ.ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಾಲ್ಕು ವರ್ಷದ ಬಾಲಕ ಅನೂಪ್ ಮೃತ ದುರ್ದೈವಿ. ಅನೂಪ್ ನೇಪಾಳದ ಪೂರನ್‌ ಖಂಡಕ್‌ ಮತ್ತು ಲಕ್ಷ್ಮಿ ದಂಪತಿ ಮಗ. ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಪೂರನ್‌ ಖಂಡಕ್‌ ಮತ್ತು ಲಕ್ಷ್ಮಿ ಅವರು ಕೆಲಸ ಹುಡುಕಿಕೊಂಡು ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಸುಲ್ತಾನ್‌ಪಾಳ್ಯದ ರಿಯಾನ್‌ ವುಡ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಪೂರನ್ ಭದ್ರತಾ ಸಿಬ್ಬಂದಿ ಆಗಿ ಕೆಲಸಕ್ಕೆ ಸೇರಿದ್ದರು. ಲಕ್ಷ್ಮಿ, ಮನೆಗಳಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ದಂಪತಿಗಳು ಕೆಲಸಕ್ಕೆ ಹೋಗುವ ಮುನ್ನ ಅನೂಪ್ ನನ್ನು ಮಲಗಿಸಿ ಬಾಗಿಲು ಹಾಕಿಕೊಳ್ಳುತ್ತಿದ್ದರು. ಭಾನುವಾರವೂ ಬೀಗ ಹಾಕಿಕೊಂಡು ದಂಪತಿ ಕೆಲಸಕ್ಕೆ ಹೋಗಿದ್ದರು. ಮಗು ಒಳಗೆಯೇ ಇತ್ತು ಎಂದು ಪೊಲೀಸರು ಹೇಳಿದರು.

ಸಾಂದರ್ಭಿಕ ಚಿತ್ರ
ಟಿ.ಆರ್.ಮಿಲ್ ಗೋದಾಮಿನಲ್ಲಿ ಅಗ್ನಿ ಅವಘಡ: ಭಾರೀ ಪ್ರಮಾಣದ ಟಯರ್ ಬೆಂಕಿಗಾಹುತಿ

ನಾಲ್ಕು ಮಹಡಿಯ ಅಪಾರ್ಟ್‌ಮೆಂಟ್ ಸಮುಚ್ಚಯದ ಚಾವಣಿಯಲ್ಲಿದ್ದ ಕೊಠಡಿಯಲ್ಲಿ ಪೂರನ್ ಖಂಡಕ್ ದಂಪತಿ ನೆಲೆಸಿದ್ದರು. ಅದೇ ಕೊಠಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ, ಭಾನುವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಲಕ್ಷ್ಮಿ ಕೊಠಡಿಯಿಂದ ದಟ್ಟ ಹೊಗೆ ಹೊರ ಹೊಮ್ಮುತ್ತಿರುವುದು ಕಂಡು ಬಂದಿದೆ. ಕೂಡಲೇ ಆಕೆ ತನ್ನ ಪತಿಗೆ ವಿಷಯ ತಿಳಿಸಿದ್ದಾಳೆ, ನಂತರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಳು. ಬೆಂಕಿ ನಂದಿಸಿದ ಬಳಿಕ ಬಾಲಕ ಸುಟ್ಟ ಗಾಯಗಳೊಂದಿಗೆ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾನೆಯೇ ಅಥವಾ ಉಸಿರುಕಟ್ಟುವಿಕೆಯಿಂದ ಸಾವನ್ನಪ್ಪಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ. ಸಾವಿನ ನಿಖರವಾದ ಕಾರಣವನ್ನು ಕಂಡುಹಿಡಿಯಲು ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಈ ಸಂಬಂಧ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com