ಬೆಂಗಳೂರು: ಮೇ 31 ರ ಮೊದಲು HSRP ನಂಬರ್ ಪ್ಲೇಟ್ ಹಾಕಿಸಿ; ಇಲ್ಲದಿದ್ದರೆ ಬೀಳುತ್ತೆ ದಂಡ!

ಸಾರಿಗೆ ಇಲಾಖೆಯು ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಕೆಯ ಗಡುವನ್ನು ಕಳೆದ ವರ್ಷ ನವೆಂಬರ್ ಮತ್ತು ಫೆಬ್ರವರಿಯಲ್ಲಿ ವಿಸ್ತರಿಸಿತ್ತು,
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾರಿಗೆ ಇಲಾಖೆಯು ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಕೆಯ ಗಡುವನ್ನು ಕಳೆದ ವರ್ಷ ನವೆಂಬರ್ ಮತ್ತು ಫೆಬ್ರವರಿಯಲ್ಲಿ ವಿಸ್ತರಿಸಿತ್ತು, ಆದರೆ ಇನ್ನೂ ಮುಂದೆ ಯಾವುದೇ ಕಾರಣಕ್ಕೂ ಗಡುವು ವಿಸ್ತರಿಸುವುದಿಲ್ಲ, ಹೀಗಾಗಿ ಮೇ 31ರ ಮೊದಲು ಎಚ್‌ಎಸ್‌ಆರ್‌ಪಿ ಅಳವಡಿಸಲು ಇಲಾಖೆ ಆದೇಶ ನೀಡಿದೆ.

ಸಾರಿಗೆ ಇಲಾಖೆಯು ಕಳೆದ ವರ್ಷ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸುವ ಮೂಲಕ ರಾಜ್ಯದಲ್ಲಿ ಏಪ್ರಿಲ್ 1, 2019 ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿತ್ತು. ಸಾರಿಗೆ ಅಧಿಕಾರಿಗಳ ಪ್ರಕಾರ, ಸುಮಾರು ಎರಡು ಕೋಟಿ ವಾಹನಗಳು ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಪಡೆಯಬೇಕಾಗಿದೆ.

ಎರಡು ಬಾರಿ ಗಡುವು ವಿಸ್ತರಿಸಿದ್ದರೂ ಸಹ ರಾಜ್ಯದಲ್ಲಿ ಕೇವಲ 34 ಲಕ್ಷ ಎಚ್‌ಎಸ್‌ಆರ್‌ಪಿ ನೋಂದಾಯಿಸಿದೆ. ಫೆಬ್ರವರಿಯಿಂದ ಸುಮಾರು 18 ಲಕ್ಷ ನೋಂದಣಿಯಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯ ವಾಹನಗಳು ಎಚ್‌ಎಸ್‌ಆರ್‌ಪಿ ಆಯ್ಕೆ ಮಾಡಿಕೊಳ್ಳಬೇಕಾಗಿದೆ ಎಂದು ಸಾರಿಗೆ (ಜಾರಿ) ಹೆಚ್ಚುವರಿ ಆಯುಕ್ತ ಸಿ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ಆನ್‌ಲೈನ್‌ ವಂಚನೆ ತಡೆಯಲು HSRP ಡೆಡ್ ಲೈನ್ ವಿಸ್ತರಣೆ: ಕರ್ನಾಟಕ ಸರ್ಕಾರ

ಮೇ 31 ರ ವರೆಗೆ ಎಚ್ ಎಸ್ ಆರ್ ಪಿ ಅಳವಡಿಸಲು ಸಮಯ ನೀಡಿ ಕಾಯುತ್ತೇವೆ. 75 ಲಕ್ಷ ಸಂಖ್ಯೆ ಮುಟ್ಟುವ ನಿರೀಕ್ಷೆಯಿದೆ, ಅದರ ನಂತರ ನಾವು ಮತ್ತೆ ಗಡುವು ವಿಸ್ತರಿಸದಂತೆ ಸರ್ಕಾರಕ್ಕೆ ಮನವಿ ಮಾಡಿ, ದಂಡ ಜಾರಿಗೊಳಿಸಲು ಒತ್ತಾಯಿಸುತ್ತೇವೆ ಎಂದಿದ್ದಾರೆ.

ಮೊದಲ ಬಾರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು, ವಾಹನ ಮಾಲೀಕರು ಎಚ್ಚೆತ್ತುಕೊಳ್ಳದಿದ್ದರೇ ಎಚ್‌ಎಸ್‌ಆರ್‌ಪಿ ಅಳವಡಿಸುವವರೆಗೆ 1,000 ರೂ. ದಂಡ ವಿಧಿಸುತ್ತೇವೆ. ಮಾದರಿ ನೀತಿ ಸಂಹಿತೆ ಮುಗಿಯುವವರೆಗೆ ನಾವು ಕಾಯುತ್ತೇವೆ. ಸರ್ಕಾರದ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತೇವೆ. ಎಚ್‌ಎಸ್‌ಆರ್‌ಪಿ ಅಳವಡಿಕೆ ತೃಪ್ತಿಕರವಾಗಿಲ್ಲದಿದ್ದರೆ ಕಟ್ಟುನಿಟ್ಟಾದ ನಿಯಮ ಜಾರಿಗಾಗಿ ನಾವು ಸರ್ಕಾರವನ್ನು ವಿನಂತಿಸಲಿದ್ದೇವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com