ಆನ್‌ಲೈನ್‌ ವಂಚನೆ ತಡೆಯಲು HSRP ಡೆಡ್ ಲೈನ್ ವಿಸ್ತರಣೆ: ಕರ್ನಾಟಕ ಸರ್ಕಾರ

HSRP ಹೆಸರಲ್ಲಿ ಆನ್‌ಲೈನ್‌ ವಂಚನೆ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ HSRP ಪ್ಲೇಟ್ ಅಳವಡಿಸಿಕೊಳ್ಳುವ ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಎಚ್‌ಎಸ್‌ಆರ್‌ಪಿ ಅಳವಡಿಕೆ
ಎಚ್‌ಎಸ್‌ಆರ್‌ಪಿ ಅಳವಡಿಕೆ
Updated on

ಬೆಂಗಳೂರು: HSRP ಹೆಸರಲ್ಲಿ ಆನ್‌ಲೈನ್‌ ವಂಚನೆ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ HSRP ಪ್ಲೇಟ್ ಅಳವಡಿಸಿಕೊಳ್ಳುವ ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಹೌದು.. ರಾಜ್ಯದಲ್ಲಿ ಎಲ್ಲ ಹಳೆಯ ವಾಹನಗಳಿಗೆ (Old Vehicles) ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ನಂಬರ್‌ ಪ್ಲೇಟ್‌ – High Security Registration Number Plate- HSRP) ಕಡ್ಡಾಯವಾಗಿ ಅಳವಡಿಸಲು ರಾಜ್ಯ ಸರ್ಕಾರ‌ ನೀಡಿದ ಗಡುವು ಸಮೀಪ ಬಂದಿರುವಂತೆಯೇ ಈ ಅಂತಿಮ ಗಡುವಿನ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಈ ವಿಚಾರ ಚರ್ಚೆಗೆ ಬಂದಿದ್ದು, ಅವಧಿ ವಿಸ್ತರಣೆ ಮಾಡುವಂತೆ ಮನವಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೂ ಮೂರು ತಿಂಗಳು ಅವಧಿಯನ್ನು ವಿಸ್ತರಣೆ ಮಾಡುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಕೆ ಗಡುವು ವಿಸ್ತರಿಸುವಂತೆ ಪರಿಷತ್‌ ಸದಸ್ಯ ಮಧು ಜಿ. ಮಾದೇಗೌಡ ಅವರು ಸರ್ಕಾರಕ್ಕೆ ಮನವಿ ಮಾಡಿದರು. ಈವರೆಗೆ ಹೆಚ್ಚಿನ ವಾಹನಗಳು ನೋಂದಣಿ ಮಾಡಿಸಿಕೊಂಡಿಲ್ಲ. 18 ಲಕ್ಷ ವಾಹನಗಳಷ್ಟೇ ಈಗ ನೋಂದಣಿ ಆಗಿವೆ. ಅಲ್ಲದೆ, ಇದರ ಬಗ್ಗೆ ಆನ್‌ಲೈನ್‌ ವಂಚನೆ ಸಹ ನಡೆಯುತ್ತಿದೆ. ಹೀಗಾಗಿ ಅವಧಿಯನ್ನು ವಿಸ್ತರಣೆ ಮಾಡುವುದರ ಜತೆಗೆ ಇಂತಹ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಆಗ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಕೆಗೆ ನೋಂದಣಿಯನ್ನು ವಿಸ್ತರಣೆ ಮಾಡುವ ಬಗ್ಗೆ ಸರ್ಕಾರವೂ ಚಿಂತನೆ ನಡೆಸಿದ್ದು, ಮತ್ತೆ ಮೂರು ತಿಂಗಳು ಮುಂದಕ್ಕೆ ಹಾಕುತ್ತೇವೆ. ಅಲ್ಲದೆ, ಈ ಸಂಬಂಧ ಆನ್‌ಲೈನ್ ವಂಚನೆ ಬಗ್ಗೆ ಗಮನಹರಿಸುತ್ತೇವೆ ಎಂದು ಹೇಳಿದರು. 

ವಂಚನೆ ಕುರಿತು ದೂರು ನೀಡಿ
HSRP ಅಳವಡಿಸಲು ಹೆಚ್ಚುವರಿ ಹಣ ವಸೂಲಿ ವಿಚಾರ ಸರ್ಕಾರದ ಗಮನಕ್ಕೆ ಬರುತ್ತಿದೆ. ಈ ಬಗ್ಗೆ ದೂರುಗಳು ಸಹ ಕೇಳಿ ಬಂದಿವೆ. ಅಲ್ಲದೆ, ಸರಿಯಾಗಿ ಅಳವಡಿಸದೇ ಇದ್ದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು. ನಾಗರಿಕರು ಹೆಚ್ಚುವರಿ ಹಣ ವಸೂಲಿ ಮಾಡುವಂತಹ ಡೀಲರ್‌ಗಳ ಮೇಲೆ ದೂರು ನೀಡಬೇಕು. ಸಾರಿಗೆ ಇಲಾಖೆಯ ಆಯುಕ್ತರಿಗೆ ದೂರು ನೀಡಿದರೆ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಪದೇ ಪದೆ ಗ್ರಾಹಕರಿಗೆ ಕಿರಿಕಿರಿ ಮಾಡಿದರೆ ಅಂತಹ ಡೀಲರ್‌ಗಳನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಇದೇ ವೇಳೆ ಸರ್ಕಾರ ಮೂರು ತಿಂಗಳು ಗಡುವು ಮುಂದೂಡಿಕೆ ಮಾಡಿದೆ. ಆದರೆ, ದಿನಾಂಕವನ್ನು ಹೇಳಿಲ್ಲ. ಹೀಗಾಗಿ ಈಗಿನ ದಿನಾಂಕಕ್ಕೆ ಸರಿಯಾಗಿ ಮುಂದಕ್ಕೆ ಹಾಕಿದರೆ ಮೇ 17ರವರೆಗೆ ಅವಕಾಶವನ್ನು ನೀಡಿದಂತಾಗಿದೆ. ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ನಿಖರ ಮಾಹಿತಿ ಗೊತ್ತಾಗಲಿದೆ. ಈ ಮೊದಲು ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗಾಗಿ (HSRP Number Plate) ಅರ್ಜಿ ಸಲ್ಲಿಸಲು ಫೆ. 17 ಕೊನೇ ದಿನ ಎಂದು ತಿಳಿಸಲಾಗಿತ್ತು. ಈಗ ಮುಂದಕ್ಕೆ ಹೋಗಿರುವುದು ವಾಹನ ಸವಾರರು ಅಲ್ಪ ನಿರಾಳವಾಗುವಂತೆ ಮಾಡಿದಂತಾಗಿದೆ.

ಅಂತಿಮ ಗಡುವು ಮತ್ತೆ ವಿಸ್ತರಣೆ
ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನ, ಪ್ರಯಾಣಿಕ ಕಾರು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ನ. 17ರೊಳಗೆ ಅಳವಡಿಸುವುದು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಬಳಿಕ ವಿಸ್ತರಣೆ ಮಾಡಲಾಗುತ್ತಾ ಬರುತ್ತಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com