ಲೋಕಸಭಾ ಚುನಾವಣೆ 2024: ಮತದಾನಕ್ಕೆ ಬೆಂಗಳೂರು ಜನರ ನೀರಸ ಪ್ರತಿಕ್ರಿಯೆ; ಶೇ.52.81ರಷ್ಟು ಮತದಾನ!

ರಾಜಧಾನಿ ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳಿಗೆ ನಡೆದ ಮತದಾವ ಹಿಂದಿನ ಚುನಾವಣೆಗಿಂತ ನೀರವಾಗಿ ಕಂಡು ಬಂದಿದೆ. ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತ ಮತದಾನ ನಡದಿದೆ.
ಕುಟುಂಬಸ್ಥರ ನೆರವೊಂದಿಗೆ ಮತಗಟ್ಟೆಗೆ ಬಂದ ಅಂಗವಿಕಲ ವ್ಯಕ್ತಿ.
ಕುಟುಂಬಸ್ಥರ ನೆರವೊಂದಿಗೆ ಮತಗಟ್ಟೆಗೆ ಬಂದ ಅಂಗವಿಕಲ ವ್ಯಕ್ತಿ.

ಬೆಂಗಳೂರು: ರಾಜಧಾನಿ ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳಿಗೆ ನಡೆದ ಮತದಾವ ಹಿಂದಿನ ಚುನಾವಣೆಗಿಂತ ನೀರವಾಗಿ ಕಂಡು ಬಂದಿದೆ. ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತ ಮತದಾನ ನಡದಿದೆ.

ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ ಸ್ವಲ್ಪ ಮಟ್ಟಿಗೆ ಬಿರುಸಿನ ಮತದಾನ ನಡಯಿತಾದರೂ, ಬಿಸಿಲಿನ ಝಳ ಏರುತ್ತಿದ್ದಂತೆಯೇ ಪ್ರಮಾಣ ಕ್ರಮೇಣ ಇಳಿಕೆಯಾಗಿತ್ತು. ಬಿಸಿಲು ಇಳಿಮುಖವಾಗುತ್ತಿದ್ದಂತೆ ಮತಗಟ್ಟೆಗಳಲ್ಲಿ ಸರತಿ ಸಾಲು ದೊಡ್ಡದಾಗಿ ಕಂಡು ಬಂದಿತ್ತು.

ಮತದಾನ ಪ್ರಕ್ರಿಯೆ ಬೆಳಿಗ್ಗೆ 7 ಗಂಟೆಗೆ ಆರಂಭವಾಗುತ್ತಿದ್ದಂತೆಯೇ ಧರ್ಮ ಮತ್ತು ಭಾಷೆಗಳನ್ನು ಮೀರಿ ಸರತಿ ಸಾಲಿನಲ್ಲಿ ನಿಂತು ಹಲವರು ಮತದಾನ ಮಾಡಿದರು. ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು ಹಾಗೂ ಗಾಲಿ ಕುರ್ಚಿಯಲ್ಲಿ ಕುಳಿತು ಕೆಲ ಗಾಯಾಳುಗಳೂ ಕೂಡ ತಮ್ಮ ಮತ ಹಕ್ಕು ಚಲಾಯಿಸಿದರು.

ದೇಶ ಕಟ್ಟುವ ನಾಯಕನಿಗೆ ನಾನು ನನ್ನ ಮತ ನೀಡಿದ್ದೇನೆಂದು ಮೊದಲ ಬಾರಿಗೆ ಮತ ಹಕ್ಕು ಚಲಾಯಿಸಿದ ಶಲೋಮ್ ಸಂಜಯ್ ಎಂಬ ಯುವತಿ ಹೇಳಿದ್ದಾರೆ.

ಕುಟುಂಬಸ್ಥರ ನೆರವೊಂದಿಗೆ ಮತಗಟ್ಟೆಗೆ ಬಂದ ಅಂಗವಿಕಲ ವ್ಯಕ್ತಿ.
#LoksabhaElections2024: ರಾಜ್ಯದಲ್ಲಿ ಶೇ.69.23 ರಷ್ಟು ಮತದಾನ

57 ವರ್ಷದ ನಸ್ರೀನ್ ಎಂಬುವವರು ಕಾಲು ಮುರಿದುಕೊಂಡಿದ್ದರೂ ಆಟೋದಲ್ಲಿ ಮತಗಟ್ಟೆಗೆ ಬಂದು, ಪೊಲೀಸರು ಹಾಗೂ ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳ ಸಹಾಯದೊಂದಿಗೆ ಮತದಾನ ಮಾಡಿದರು.

ನಗರದಲ್ಲಿ ಸಾಕಷ್ಟು ಮಂದಿ ಸಮಸ್ಯೆಗಳ ಹೊರತಾಗಿಯೂ ತಮ್ಮ ಹಕ್ಕು ಚಲಾಯಿಸಿದ್ದರೂ ಮತದಾನ ಪ್ರಮಾಣ ಮಾತ್ರ ಏರಿಕೆಯಾಗಿಲ್ಲ. ಶುಕ್ರವಾರ ಸಂಜೆ 5 ಗಂಟೆ ವೇಳೆಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶೇ.50.4 ರಷ್ಟು ಮತದಾನವಾಗಿತ್ತು. ಬೆಂಗಳೂರು ಕೇಂದ್ರದಲ್ಲಿ ಶೇ.48.61 ಹಾಗೂ ಬೆಂಗಳೂರು ದಕ್ಷಿಣದಲ್ಲಿ ಶೇ.49.37 ರಷ್ಟು ಮತದಾನವಾಗಿದೆ.

2019ರ ಚುನಾವಣೆಗೆ ಹೋಲಿಕೆ ಮಾಡಿದರೆ ಮತದಾನ ಪ್ರಮಾಣ ಶೇ.10ರಷ್ಟು ಮಾತ್ರ ಏರಿಕೆಯಾಗಿದೆ. ಆದರೂ ಇದು ಕಳಪೆ ಮತದಾನವಾಗಿದೆ. 2014ರ ಚುನಾವಣೆಯಲ್ಲಿ ರಾಜಧಾನಿಯಲ್ಲಿ ಮತದಾನ ಪ್ರಮಾಣ ಶೇ.55.64ರಷ್ಟಿತ್ತು. 2019 ರಲ್ಲಿ ಶೇಕಡಾ 42.43 ಕ್ಕೆ ಕುಸಿದಿತ್ತು. ಈ ಬಾರಿ ಶೇ.52.81ರಷ್ಟು ಮತದಾನವಾಗಿದೆ.

ಸತ್ತವರು ಹಾಗೂ ಬೇರೆ ಪ್ರದೇಶಗಳಿಗೆ ಸ್ಥಳಾಂತರಗೊಂಡಿರುವ ಪಟ್ಟಿಯನ್ನು ಚುನಾವಣಾ ಆಯೋಗ ಹೊಂದಿದೆ. ಈ ಕಾರಣಕ್ಕೆ ಮತದಾನ ಪ್ರಮಾಣ ಕಡಿಮೆಯಾಗಿರುವಂತೆ ಕಂಡು ಬರುತ್ತಿದೆ ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು ಐದು ವರ್ಷಗಳಿಗೊಮ್ಮೆ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲು ಮುಂದಾಗದವರ ಮನೋಭಾವವನ್ನು ದೂಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com