
ಬೆಂಗಳೂರು: ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವ ಸದುದ್ದೇಶದಿಂದ ಶಿವಾಜಿ ನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಾದ ಬೌರಿಂಗ್ ಆಸ್ಪತ್ರೆಯನ್ನು ಮೇಲ್ದರ್ಜೇಗೇರಿಸಲಾಗುತ್ತಿದೆ. ಮುಂದಿನ ತಿಂಗಳು 10 ಅಂತಸ್ತಿನ ನೂತನ ಬೌರಿಂಗ್ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಲಿದೆ.
ಈ ಹಿಂದೆ ಇದ್ದ ಬೌರಿಂಗ್ ಆಸ್ಪತ್ರೆಯನ್ನು ನೆಲಸಮಗೊಳಿಸಿದ ನಂತರ ನೂತನ ಹತ್ತು ಅಂತಸ್ತಿನ 500 ಹಾಸಿಗೆಗಳ ಸೌಲಭ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮುಂದಿನ ತಿಂಗಳು ಶಂಕುಸ್ಥಾಪನೆ ನೆರವೇರಲಿದೆ ಎಂದು ವೈದ್ಯಕೀಯ ಶಿಕ್ಷಣ, ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಇದೆ ವೇಳೆ ಅಲ್ಲಿನ ಡೆಂಘೀ ವಾರ್ಡ್ ಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಅಸ್ಪತ್ರೆಯಲ್ಲಿ ವೈದ್ಯರು ಸೂಕ್ತವಾದ ಚಿಕಿತ್ಸೆ ನೀಡುತ್ತಿದ್ದಾರೆಯೇ? ಬೆಳಗಿನ ಉಪಹಾರ, ಮಧ್ಯಾಹ್ನಾದ ಬೋಜನ ಸಮಯಕ್ಕೆ ಸರಿಯಾಗಿ ನೀಡುತ್ತಿದ್ದಾರೆಯೇ ಎಂದು ರೋಗಿಗಳಿಂದ ಮಾಹಿತಿ ಪಡೆದುಕೊಂಡರು.
ಇನ್ನೊಂದು ತಿಂಗಳಲ್ಲಿ ಚರಕ ಆಸ್ಪತ್ರೆ ಲೋಕಾರ್ಪಣೆ: ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜುನಿಂದ ಶಿವಾಜಿನಗರದ ಚರಕ ಆಸ್ಪತ್ರೆಗೆ ಕಾಲ್ನಡಿಗೆಯಲ್ಲಿ ಭೇಟಿ ನೀಡಿದ ಸಚಿವರು, ಮಧ್ಯಮ ವರ್ಗದ ಜನರಿಗೆ ಅನುಕೂಲ ಅಗುವಂತೆ ಚರಕ ಆಸ್ಪತ್ರೆ ನಿರ್ಮಿಸಲಾಗಿದ್ದು, ಕೆಲವೇ ದಿನದಲ್ಲಿ ಲೋಕಾರ್ಪಣೆ ಆಗಲಿದೆ ಎಂದು ಹೇಳಿದರು.
ಬಿಬಿಎಂಪಿಯಿಂದ ಕಟ್ಟಡ ನಿರ್ಮಿಸಲಾಗಿದ್ದು, ಇನ್ಫೋಸಿಸ್ ಸಂಸ್ಥೆಯಿಂದ ಮೂಲಸೌಕರ್ಯಗಳ ಕೊಡುಗೆ ನೀಡಲಾಗಿದೆ. ಕಾರ್ಡಿಯಾಕ್, ನ್ಯೂರೋ, ನೆಫ್ರಾಲಜಿ ಸೇರಿದಂತೆ ಎಲ್ಲಾ ಚಿಕಿತ್ಸೆ ಚರಕ ಆಸ್ಪತ್ರೆಯಲ್ಲಿ ನೀಡಲಾಗುತ್ತೆ. ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಚಿಕಿತ್ಸೆ ಸಿಗಲಿದೆ ಎಂದು ಪಾಟೀಲ್ ಮಾಹಿತಿ ನೀಡಿದರು.
Advertisement