
ಬೆಂಗಳೂರು: ನಗರದ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆ(ಕೆಎಂಐಒ) ಮತ್ತು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಬುಧವಾರ ದಿಢೀರ್ ಭೇಟಿ ನೀಡಿದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ವೈದ್ಯರಿಗೆ ಎಚ್ಚರಿಕೆ ನೀಡಿದರು.
ರೋಗಿಗಳಿಗೆ ಕಳಪೆ ಚಿಕಿತ್ಸೆ ನೀಡುತ್ತಿರುವ ಕುರಿತು ಆಸ್ಪತ್ರೆ ವಿರುದ್ಧ ಹಲಲು ದೂರುಗಳು ಬಂದ ಹಿನ್ನೆಲೆಯಲ್ಲಿ ಸಚಿವರು ಇಂದು ದಿಢೀರ್ ಭೇಟಿ ನೀಡಿ, ವೈದ್ಯರು ಮತ್ತು ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಶರಣ ಪ್ರಕಾಶ್ ಪಾಟೀಲ್ ಅವರು ಮೊದಲು ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿಗೆ ದಿಢೀರ್ ಭೇಟಿ ನೀಡಿ, ವಾರ್ಡ್‍ನಲ್ಲಿ ಪರಿಶೀಲನೆ ನಡೆಸಿ ರೋಗಿಗಳ ಯೋಗ ಕ್ಷೇಮ ವಿಚಾರಿಸಿದರು. ವಸತಿ ಸೌಲಭ್ಯ ಹೇಗಿದೆ? ಯಾವೆಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದೀರಿ? ಎಷ್ಟು ರೋಗಿಗಳು ಇಲ್ಲಿ ದಾಖಲಾಗುತ್ತಿದ್ದಾರೆ ಎಂದು ಕಿದ್ವಾಯಿ ಆಸ್ಪತ್ರೆಯ ಆಡಳಿತಾಧಿಕಾರಿ ಮಂಜುಶ್ರೀ ಹಾಗೂ ನಿರ್ದೇಶಕರಾದ ಡಾ. ಲೋಕೇಶ್ ಅವರನ್ನು ಪ್ರಶ್ನೆ ಮಾಡಿದರು.
"ಸಚಿವರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ ಫಾಸ್ಟ್ ಟ್ರ್ಯಾಕ್ ಯೋಜನೆಯ ಉಸ್ತುವಾರಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ರೋಗಿಗಳಿಗೆ ಚಿಕಿತ್ಸೆ ಕೊಡಲು ಎಷ್ಟು ದಿನ ಬೇಕು? ಕ್ಯಾನ್ಸರ್ ಪತ್ತೆಗೆ ಎಷ್ಟು ದಿನ ತೆಗೆದುಕೊಳ್ಳುತ್ತದೆ? ಚಿಕಿತ್ಸೆ, ಅಂತಿಮ ಚಿಕಿತ್ಸೆ ನೀಡಲು ಎಷ್ಟು ದಿನ ತೆಗೆದುಕೊಳ್ಳುತ್ತಿದ್ದೀರಿ? ಕ್ಯಾನ್ಸರ್ ಪತ್ತೆ ಬಳಿಕ ರೋಗಿಯನ್ನು ಎಷ್ಟು ದಿನದ ನಂತರ ದಾಖಲು ಮಾಡಿಕೊಳ್ಳುತ್ತಿದ್ದೀರಿ? ಯಾವ ಸಮಯದಲ್ಲಿ ಗರಿಷ್ಠ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ ಎಂದು ಪ್ರಶ್ನೆಗಳ ಸುರಿಮಳೆಗೈದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ರಾಜ್ಯದ ನಾನಾ ಭಾಗಗಳಿಂದ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರಲು ರೋಗಿಗಳು ಪರದಾಡುತ್ತಿದ್ದಾರೆ. ಹೀಗಾಗಿ ತುಮಕೂರು, ಶಿವಮೊಗ್ಗ, ಮಂಡ್ಯ, ಕಾರವಾರದಲ್ಲಿ ಕಿದ್ವಾಯಿ ಮಾದರಿಯ ಆಸ್ಪತ್ರೆ ತೆರೆಯಲು ಸರ್ಕಾರ ಮುಂದಾಗಿದೆ ಎಂದರು.
ಕಲಬುರಗಿಯಲ್ಲೂ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ತೆರೆಯಲು ಉದ್ದೇಶಿಸಿದ್ದು, ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
Advertisement